ಟೋಕಿಯೋ(ಏ.29): ವಿಶ್ವದೆಲ್ಲೆಡೆ ಮುಂದಿನ ವರ್ಷದ ವೇಳೆಗೆ ಕೊರೋನಾ ವೈರಸ್‌ ನಿಯಂತ್ರಣಕ್ಕೆ ಬಾರದೆ ಇದ್ದರೆ ಈಗಾಗಲೇ ಒಂದು ವರ್ಷ ಮುಂದೂಡಲ್ಪಟ್ಟಿರುವ ಟೋಕಿಯೋ ಒಲಿಂಪಿಕ್ಸ್‌ ರದ್ದುಗೊಳ್ಳುವ ಸಾಧ್ಯತೆಯಿದೆ ಎಂದು ಆಯೋಜಕ ಸಮಿತಿ ಮುಖ್ಯಸ್ಥ ಯೊಶಿರೊ ಮೊರಿ ಹೇಳಿದ್ದಾರೆ.

ಜಪಾನ್‌ನ ಸ್ಥಳೀಯ ಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದ್ದು, ಒಂದು ವರ್ಷ ಮುಂದೂಡಿಕೆಯಾಗಿರುವ ಒಲಿಂಪಿಕ್ಸ್‌ ಗೇಮ್ಸ್‌ 2021ರ ಜುಲೈ 23ರಿಂದ ಆರಂಭವಾಗಲಿದೆ. ಆ ವೇಳೆಗೂ ಕೊರೋನಾ ಉಲ್ಬಣಿಸಿದರೆ ಒಲಿಂಪಿಕ್ಸ್‌ 2022ಕ್ಕೆ ಮುಂದೂಡಲಾಗುತ್ತಾ ಎಂಬ ಪ್ರಶ್ನೆಗೆ, ಕೂಟವನ್ನು ರದ್ದುಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ಬಗ್ಗೆ ದಿಟ್ಟಪ್ರತಿಕ್ರಿಯೆಯೊಂದು ಹೊರಬಿದ್ದಿದ್ದು, ನಾವೆಲ್ಲಾ ಟೋಕಿಯೋ ಕೂಟ ಆಯೋಜನೆಯ ಬಗ್ಗೆ ಸಕಾರಾತ್ಮಕವಾಗಿ ಹೆಜ್ಜೆಯಿಡುತ್ತಿದ್ದೇವೆ. ಇದರ ಹೊರತಾಗಿಯೂ 2021ರಲ್ಲೂ ಇದೇ ಪರಿಸ್ಥಿತಿ ಮುಂದುವರೆದರೆ ಏನೂ ಮಾಡಲು ಸಾಧ್ಯವಿಲ್ಲ. ಕ್ರೀಡಾಕೂಟವನ್ನು ರದ್ಧುಪಡಿಸಲಾಗುತ್ತದೆ ಎಂದು ಟೋಕಿಯೋ ಒಲಿಂಪಿಕ್ಸ್ ಆಯೋಜಕ ಸಮಿತಿ ಮುಖ್ಯಸ್ಥ ಯೊಶಿರೊ ಮೊರಿ ತಿಳಿಸಿದ್ದಾರೆ.

ಒಲಿಂಪಿಕ್ಸ್‌ ಆಯೋಜನ ಸಮಿತಿ ಸದಸ್ಯನಿಗೆ ಕೊರೋನಾ ಸೋಂಕು!

ಕಳೆದೊಂದು ವರ್ಷದಿಂದಲೇ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಅತ್ಯುತ್ತಮವಾಗಿ ಆಯೋಜಿಸಲು ಜಪಾನ್ ಶಕ್ತಿ ಮೀರಿ ಪ್ರಯತ್ನಿಸಿದೆ. ನಮ್ಮ ಪ್ರಯತ್ನ ವ್ಯರ್ಥವಾಗುವುದಿಲ್ಲ ಎಂದು ಭಾವಿಸಿದ್ದೇವೆ. ಟೋಕಿಯೋದಲ್ಲಿ ಈಗಾಗಲೇ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ತಗ್ಗುತ್ತಿದೆ. ಈಗ ಕೊರೋನಾ ಸೋಂಕಿತರ ಟೆಸ್ಟ್ ಮಾಡುವ ಪ್ರಮಾಣ ನಿರೀಕ್ಷೆಗೆ ತಕ್ಕಷ್ಟು ಇಲ್ಲ. ಹೀಗಾಗಿ ಜಪಾನ್ ಪರಿಸ್ಥಿತಿ ಹೇಗಿದೆ ಎಂದು ಈಗಲೇ ಪರಿಸ್ಥಿತಿ ಹೇಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಕೊರೋನಾ ವೈರಸ್ ಭೀತಿಯಿಂದಾಗಿ ಕಳೆದ ತಿಂಗಳಷ್ಟೇ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಹಾಗೂ ಜಪಾನ್ ಸರ್ಕಾರ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಜುಲೈ 20201ರವರೆಗೆ ಮುಂದೂಡಲು ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದವು. ಮದ್ದಿಲ್ಲದ ಮಹಾಮಾರಿಯಾಗಿ ಬೆಳೆಯುತ್ತಿರುವ ಕೋವಿಡ್ 19 ವೈರಸ್‌ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ.