ಚಕ್ ದೇ ಇಂಡಿಯಾ; ಬ್ರಿಟೀಷರನ್ನು ಬಗ್ಗುಬಡಿದು ಒಲಿಂಪಿಕ್ಸ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಹಾಕಿ ಇಂಡಿಯಾ
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತ ಪುರುಷರ ಹಾಕಿ ತಂಡ
* ಗ್ರೇಟ್ ಬ್ರಿಟನ್ ಎದುರು 3-1 ಅಂತರದಲ್ಲಿ ಗೆದ್ದು ಸೆಮೀಸ್‌ಗೆ ಲಗ್ಗೆ
* 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಸೆಮೀಸ್‌ಗೇರಿದ ಭಾರತ
ಟೋಕಿಯೋ(ಆ.01): ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಎದುರು ಎದುರು ಭಾರತಕ್ಕೆ 3-1 ಅಂತರದ ಜಯ ದಾಖಲಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಇದರೊಂದಿಗೆ ನಾಕೌಟ್ ಪಂದ್ಯದಲ್ಲಿ ಬ್ರಿಟೀಷರನ್ನು ಮಣಿಸಿ ಬರೋಬ್ಬರಿ 41 ವರ್ಷಗಳ ಬಳಿಕ ಭಾರತ ಹಾಕಿ ತಂಡವು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.
ಗ್ರೂಪ್ ಹಂತದಲ್ಲಿಯೇ ಬಲಿಷ್ಠ ತಂಡಗಳನ್ನು ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ಸಾಕಷ್ಟು ಆಕ್ರಮಣಕಾರಿ ರಣತಂತ್ರದೊಂದಿಗೆ ಕಣಕ್ಕಿಳಿಯಿತು. ಮೊದಲ ಕ್ವಾರ್ಟರ್‌ನ 7ನೇ ನಿಮಿಷದಲ್ಲೇ ದಿಲ್ಪ್ರೀತ್ ಸಿಂಗ್ ಗೋಲು ಬಾರಿಸುವ ಮೂಲಕ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಇದರೊಂದಿಗೆ ಮೊದಲ ಕ್ವಾರ್ಟರ್ ಅಂತ್ಯದ ವೇಳೆಗೆ ಭಾರತ 1-0 ಮುನ್ನಡೆ ಉಳಿಸಿಕೊಂಡಿತು.
ಇನ್ನು ಎರಡನೇ ಕ್ವಾರ್ಟರ್‌ನ ಆರಂಭದಲ್ಲೇ ಗುರ್ಜಾಂತ್ ಗೋಲು ಬಾರಿಸುವ ಮೂಲಕ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು. ಇನ್ನು ಮೂರನೇ ಕ್ವಾರ್ಟರ್‌ನ ಕೊನೆಯ ಕೆಲ ಸೆಕೆಂಡ್‌ಗಳು ಬಾಕಿ ಇದ್ದಾಗ ಪೆನಾಲ್ಟಿ ಕಾರ್ನರ್ ಅವಕಾಶ ಬಳಸಿಕೊಂಡು ಬ್ರಿಟನ್ ಗೋಲಿನ ಖಾತೆ ತೆರೆಯಿತು. ಇದರೊಂದಿಗೆ ಮೂರನೇ ಕ್ವಾರ್ಟರ್ ಅಂತ್ಯದ ವೇಳೆಗೆ ಭಾರತ 2-1 ಮುನ್ನಡೆಯಲ್ಲಿತ್ತು.
ಭಾರತದ ಗೋಲ್ ಪಿ.ಆರ್. ಶ್ರೀಜೇಶ್ ಎಂದಿನಂತೆ ಅಮೋಘ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಇನ್ನು ಪಂದ್ಯ ಮುಕ್ತಾಯಕ್ಕೆ ಕೊನೆಯ ಮೂರು ನಿಮಿಷಗಳು ಬಾಕಿ ಇದ್ದಾಗ ಹಾರ್ದಿಕ್ ಸಿಂಗ್ ಅತ್ಯಾಕರ್ಷಕ ಗೋಲು ಬಾರಿಸುವ ಮೂಲಕ ಭಾರತದ ಮುನ್ನಡೆಯನ್ನು 3-1ಕ್ಕೆ ಹೆಚ್ಚಿಸಿದ್ದಲ್ಲದೇ ಸೆಮಿಫೈನಲ್ ಹಾದಿಯನ್ನು ಖಚಿತ ಪಡಿಸಿದರು.