* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದ ವಿನೋದ್‌ ಕುಮಾರ್‌ಗೆ ಭಾರೀ ನಿರಾಸೆ* ಎಫ್‌52 ವಿಭಾಗದಲ್ಲಿ ವಿನೋದ್ ಸ್ಪರ್ಧಿಸಲು ಅನರ್ಹರು ಎನ್ನುವ ತೀರ್ಪು* ಏಷ್ಯಾ ದಾಖಲೆಯೊಂದಿಗೆ ಪದಕ ಗೆದ್ದಿದ್ದ ಭಾರತದ ಡಿಸ್ಕಸ್ ಥ್ರೋ ಪಟುವಿಗೆ ನಿರಾಸೆ

ಟೋಕಿಯೋ(ಆ.31): ಡಿಸ್ಕಸ್‌ ಥ್ರೋ ಎಫ್‌52 ವಿಭಾಗದಲ್ಲಿ ಭಾನುವಾರ ಕಂಚಿನ ಪದಕ ಗೆದ್ದಿದ್ದ 41 ವರ್ಷದ ವಿನೋದ್‌ ಕುಮಾರ್‌ಗೆ ಭಾರೀ ನಿರಾಸೆಯಾಗಿದೆ. ಅವರ ಪದಕವನ್ನು ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ ಸಮಿತಿ (ಐಪಿಸಿ) ಅಮಾನ್ಯಗೊಳಿಸಿದೆ. ಎಫ್‌52 ವಿಭಾಗದಲ್ಲಿ ಅವರು ಸ್ಪರ್ಧಿಸಲು ಅನರ್ಹರು ಎಂದು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಿನೋದ್‌ 19.91 ಮೀ. ದೂರಕ್ಕೆ ಡಿಸ್ಕಸ್‌ ಎಸೆದು ಕಂಚು ಗೆದ್ದಿದ್ದರು. ಇದು ಏಷ್ಯಾ ದಾಖಲೆ ಕೂಡ ಆಗಿತ್ತು. ಆದರೆ ಇತರೆ ದೇಶದ ಸ್ಪರ್ಧಿಗಳು ಎಫ್‌52 ವಿಭಾಗದಲ್ಲಿ ವಿನೋದ್‌ ಅವರ ಅರ್ಹತೆ ಪ್ರಶ್ನಿಸಿದ್ದರಿಂದ ಫಲಿತಾಂಶ ತಡೆ ಹಿಡಿಯಲಾಗಿತ್ತು. ಸೋಮವಾರ ಅಧಿಕೃತ ಫಲಿತಾಂಶ ಹೊರಬಿದ್ದಿದ್ದು, ವಿನೋದ್‌ ಎಫ್‌52 ವಿಭಾಗದಲ್ಲಿ ಸ್ಪರ್ಧೆಗೆ ಅರ್ಹರಲ್ಲ ಎಂದು ಹೇಳಿ ಅವರ ಫಲಿತಾಂಶವನ್ನು ಆಯೋಜಕರು ಅನೂರ್ಜಿತಗೊಳಿಸಿದ್ದಾರೆ.

Scroll to load tweet…

ಟೋಕಿಯೋ ಪ್ಯಾರಾಲಿಂಪಿಕ್ಸ್‌: ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸುಮಿತ್ ಆಂಟಿಲ್‌

ಅನರ್ಹತೆ ಏಕೆ?

ಎಫ್‌52 ವಿಭಾಗ ದುರ್ಬಲ ಸ್ನಾಯುಶಕ್ತಿ ಹೊಂದಿದ, ನಿರ್ಬಂಧಿತ ಚಲನೆ, ಕಾಲಿನ ಉದ್ದ ವ್ಯತ್ಯಾಸ ಹಾಗೂ ಸದಾ ಕಾಲ ಕುಳಿತುಕೊಂಡೇ ಇರುವ ಕ್ರೀಡಾಳುಗಳ ವಿಭಾಗವಾಗಿದ್ದು, ಆದರೆ ಈ ವಿಭಾಗಕ್ಕೆ ವಿನೋದ್‌ ಅರ್ಹರಾಗಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ಆ.22ರಂದು ವಿನೋದ್‌ರ ಅರ್ಹತಾ ಪರೀಕ್ಷೆ ನಡೆಸಲಾಗಿತ್ತು. ಆಗ ಅವರು ಎಫ್‌52 ವಿಭಾಗಕ್ಕೆ ಅರ್ಹತೆ ಪಡೆದಿದ್ದರು. ಆದರೆ ಸ್ಪರ್ಧೆ ಮುಕ್ತಾಯಗೊಂಡ ಬಳಿಕವೂ ಪ್ರತಿಸ್ಪರ್ಧಿಗಳು ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು, ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಭಾರತೀಯ ಪ್ಯಾರಾಲಿಂಪಿಕ್ಸ್‌ ಸಮಿತಿ ಮುಖ್ಯಸ್ಥ ದೀಪಾ ಮಲಿಕ್‌ ಹೇಳಿದ್ದಾರೆ.