ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ: ಜಪಾನಿಗೆ 20 ಸಾವಿರ ಕೋಟಿ ರುಪಾಯಿ ಹೊರೆ..!

ಜಾಗತಿಕ ಪಿಡುಗಾದ ಕೊರೋನಾ ವೈರಸ್‌ನಿಂದಾಗಿ ಈಗಾಗಲೇ ಟೋಕಿಯೋ ಒಲಿಂಪಿಕ್ಸ್ 2021ಕ್ಕೆ ಮುಂದೂಡಲ್ಪಟ್ಟಿದೆ. ಟೂರ್ನಿ ಮುಂದೂಡಲ್ಪಟ್ಟಿರುವುದರಿಂದ ಜಪಾನ್ ದೇಶಕ್ಕೆ 20 ಸಾವಿರ ಕೋಟಿ ಹೊರೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

Coronavirus pandemic cost of postponing Tokyo Olympic Games in Japan

ಟೋಕಿಯೋ(ಮಾ.27): 2020ರ ಟೋಕಿಯೋ ಒಲಿಂಪಿಕ್ಸ್ ಕೊರೋನಾ ವೈರಸ್ ಭೀತಿಯಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟ ಹಿನ್ನಲೆಯಲ್ಲಿ ಕ್ರೀಡಾಕೂಟದ ಆಯೋಜಕರಿಗೆ ಸುಮಾರು 20,000 ಕೋಟಿ ರುಪಾಯಿ ಹೆಚ್ಚುವರಿ ಖರ್ಚಾಗಲಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಈವರೆಗೆ ಟೋಕಿಯೋ ಒಲಿಂಪಿಕ್ಸ್ ಆಯೋಜನೆಗಾಗಿ 94 ಸಾವಿರ ಕೋಟಿ ರುಪಾಯಿ ಖರ್ಚು ಮಾಡಲಾಗಿದೆ. 2021ರಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಸಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಸಿದ್ಧತೆ ಆರಂಭಿಸಿದ್ದು, ನೂತನ ವೇಳಾಪಟ್ಟಿಯನ್ನು ಸಿದ್ಧಗೊಳಿಸುವಂತೆ ಆಯೋಜನಾ ಸಮಿತಿಗೆ ಸೂಚನೆ ನೀಡಿದೆ. 

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜುಲೈ 24ರಿಂದ ಟೋಕಿಯೋ ಒಲಿಂಪಿಕ್ಸ್ ಆರಂಭವಾಗಬೇಕಿತ್ತು. ಆದರೆ ಕೊರೋನಾ ಎನ್ನುವ ಹೆಮ್ಮಾರಿ ಜನರ ಜೀವವನ್ನು ಬಲಿ ಪಡೆದದ್ದು ಮಾತ್ರವಲ್ಲ, ಕ್ರೀಡಾ ಜಗತ್ತನ್ನು ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಜಪಾನ್‌ನಲ್ಲಿ ಇದುವರೆಗೂ(ಮಾರ್ಚ್ 27ರ ಮಧ್ಯಾಹ್ನದ ವೇಳೆಗೆ) 1,387 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, 47 ಮಂದಿ ಕೊನೆಯುಸಿರೆಳೆದಿದ್ದಾರೆ. 

ಕೊನೆಯ ಕ್ಷಣದವರೆಗೂ ಒಲಿಂಪಿಕ್ಸ್ ಆಯೋಜಿಸುವ ಉಮೇದಿನಲ್ಲಿದ್ದ ಜಪಾನ್ ಪ್ರಧಾನಿ ಶಿಂನ್ಜೋ ಅಬೆ ಆಸೆಗೆ ಕೊರೋನಾ ತಾತ್ಕಾಲಿಕವಾಗಿ ತಣ್ಣೀರೆರಚಿದೆ. ಕೊನೆಗೆ ಮಾರ್ಚ್ 24ರಂದು ಪ್ರಧಾನಿ ಅಬೆ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕಮಿಟಿ ಮುಖ್ಯಸ್ಥ ಥಾಮಸ್ ಬಾಚ್ ಜತೆ ಟೆಲಿಫೋನ್ ಮಾತುಕತೆ ನಡೆಸಿ ಅಥ್ಲೀಟ್ಸ್‌ಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಒಲಿಂಪಿಕ್ಸ್ ಕ್ರೀಡಾ ಮುಂದೂಡುವ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ತಿಳಿಸಿದರು
 

Latest Videos
Follow Us:
Download App:
  • android
  • ios