Asianet Suvarna News Asianet Suvarna News

ಕೆಟ್ಟ ದಿನ , ಕೆಟ್ಟ ಸೋಲು: ಅಷ್ಟಕ್ಕೆ ಆ ಹೆಣ್ಣುಮಗಳ ಮೇಲೇಕೆ ಇಷ್ಟೊಂದು ನಿಂದನೆ?

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆಯ ಆರ್ಚರಿ ಪಟು ದೀಪಿಕಾ ಕುಮಾರಿ ಆಘಾತಕಾರಿ ಸೋಲು ಕಂಡಿದ್ದಾಳೆ ನಿಜ. ಆದರೆ ಆಕೆಯನ್ನು ಈ ಮಟ್ಟಿಗೆ ನಿಂದಿಸುವುದು ಸರಿಯೇ? ದೀಪಿಕಾ ಕುಮಾರಿ ಬದ್ಧತೆ, ಪರಿಶ್ರಮ, ಸವಾಲುಗಳ ನಡುವೆ ಸಾಧನೆಯನ್ನು ಪರಿಗಣಿಸದೆ ಟೀಕಿಸುವುದು ಎಷ್ಟು ಸರಿ? ಈ ಕುರಿತು ಕ್ರೀಡಾ ಪತ್ರಕರ್ತ ಸುದರ್ಶನ್ ಲೇಖನ ಇಲ್ಲಿದೆ.
 

Archer Deepika kumari faces backlash after unexpected exit from Paris Olympics ckm
Author
First Published Jul 30, 2024, 10:22 PM IST | Last Updated Jul 30, 2024, 10:22 PM IST

ಸುದರ್ಶನ್, ಕ್ರೀಡಾ ಪತ್ರಕರ್ತ

ಒಂದು ಕೆಟ್ಟ ದಿನ… ಒಂದು ಕೆಟ್ಟ ಸೋಲು..!ಅಷ್ಟಕ್ಕೇ.. ಆ ಹೆಣ್ಣು ಮಗಳ ಮೇಲೇಕೆ ಇಷ್ಟೊಂದು ನಿಂದನೆ..? ಅಷ್ಟಕ್ಕೂ ಆಕೆಯ ಇತಿಹಾಸ ಗೊತ್ತಾ ನಿಮಗೆ..? ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾರತದ ಮಹಿಳಾ ಆರ್ಚರಿ ತಂಡ ಆಘಾತಕಾರಿ ಸೋಲು ಕಂಡು ಫೈನಲ್ ಪ್ರವೇಶಿಸಲು ವಿಫಲವಾಗುತ್ತಿದ್ದಂತೆ ನಿಂದಕರ ಬಾಯಿಗೆ ಆಹಾರವಾಗಿದ್ದಾಳೆ ದೇಶದ ಅಗ್ರಮಾನ್ಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ.

ಹೌದು.. ದೀಪಿಕಾ ಕುಮಾರಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ತೋರಲಿಲ್ಲ.. ಅದಕ್ಕಾಗಿ ಆಕೆಯನ್ನು ಟೀಕಿಸಲು ಎಲ್ಲರಿಗೂ ಹಕ್ಕಿದೆ. ಆದರೆ ವೈಯಕ್ತಿಕ ಹೀಗಳಿಕೆ..? “ನೀನು ನಾಲಾಯಕ್” ಎಂಬ ನಿಂದನೆ..? ದೀಪಿಕಾ ಕುಮಾರಿಯನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸುತ್ತಿರುವವರಿಗೆ ಆಕೆಯ ಇತಿಹಾಸ ಗೊತ್ತಿಲ್ಲ ಎಂದು ಕಾಣುತ್ತದೆ. 19 ತಿಂಗಳ ಪುಟ್ಟ ಮಗುವನ್ನು ಮನೆಯಲ್ಲಿ ಬಿಟ್ಟು ಒಲಿಂಪಿಕ್ ಅಖಾಡಕ್ಕೆ ಕಾಲಿಟ್ಟವಳು ದೀಪಿಕಾ ಕುಮಾರಿ.. ಅದು ಆಕೆಯ ಬದ್ಧತೆ..  ಕಳೆದ ವರ್ಷದ ಜನವರಿ ತಿಂಗಳಲ್ಲಿ ಮಗು ಹುಟ್ಟಿದ ಒಂದೇ ವಾರಕ್ಕೆ ಪ್ಯಾರಿಸ್ ಒಲಿಂಪಿಕ್ಸ್’ಗೆ ಸಿದ್ಧತೆ ಆರಂಭಿಸಿದವಳು ದೀಪಿಕಾ ಕುಮಾರಿ. ಅದು ಆಕೆಯ ಬದ್ಧತೆ..
 
ಜಾರ್ಖಂಡ್’ನ ರಾಂಚಿಯ ರಾಮ್ ಛಟ್ಟಿ ಎಂಬ ಹಳ್ಳಿಯ ಹುಡುಗಿ. ತಂದೆ ಆಟೋ ರಿಕ್ಷಾ ಡ್ರೈವರ್. ತಾಯಿ ನರ್ಸ್.. ಬಿಲ್ಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದ ಮಗಳಿಗೆ ಬಿಲ್ಲು-ಬಾಣಗಳನ್ನು ಕೊಡಿಸುವಷ್ಟು ಸಿರಿವಂತನಾಗಿರಲಿಲ್ಲ ಆ ತಂದೆ.. ದೀಪಿಕಾ ಕುಮಾರಿ ಬಿದಿರಿನಿಂದ ಮಾಡಿದ ಬಿಲ್ಲು-ಬಾಣಗಳಿಂದ ಅಭ್ಯಾಸ ಶುರು ಮಾಡುತ್ತಾಳೆ.. ಅಲ್ಲಿಂದ ಶುರುವಾರ ಪ್ರಯಾಣ.. ವಿಶ್ವಕಪ್’ನಲ್ಲಿ ಈಕೆ ಗೆದ್ದಿರುವ ಚಿನ್ನದ ಪದಕಗಳೆಷ್ಟು ಗೊತ್ತೇ..? 11.. ಜೊತೆಗೆ 17 ಬೆಳ್ಳಿ ಪದಕಗಳು..  ಕಾಮನ್ವೆಲ್ತ್ ಗೇಮ್ಸ್’ನಲ್ಲಿ 2 ಚಿನ್ನ..  ವಿಶ್ವಚಾಂಪಿಯನ್’ಷಿಪ್’ನಲ್ಲಿ 2 ಬೆಳ್ಳಿ.. ಏಷ್ಯನ್ ಚಾಂಪಿಯನ್’ಷಿಪ್’ನಲ್ಲಿ ಒಂದು ಚಿನ್ನ, 2 ಬೆಳ್ಳಿ, 2 ಕಂಚು.. ಏಷ್ಯನ್ ಗೇಮ್ಸ್’ನಲ್ಲಿ ಕಂಚು.. ಒಬ್ಬ ಬಡ ಆಟೋ ರಿಕ್ಷಾ ಚಾಲಕನ ಮಗಳ ಸಾಧನೆಯಿದು.

ರಿಸೆಪ್ಷನಿಸ್ಟ್ ಆಗಿ ಬಂದಿದ್ದ ಹೆಣ್ಣು ಮಗಳು ಈಗ ಜಗತ್ತಿನ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಪಿಚ್ ಕ್ಯುರೇಟರ್!

ಹೌದು.. ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ತನ್ನ ಮೇಲಿದ್ದ ನಿರೀಕ್ಷೆಗಳನ್ನು ದೀಪಿಕಾ ಕುಮಾರಿ ಹುಸಿ ಮಾಡಿದ್ದಾಳೆ ನಿಜ.. ಹಾಗಂದ ಮಾತ್ರಕ್ಕೆ ಅದೇನು ದೊಡ್ಡ ಅಪರಾಧವೇ..?  ನೆನಪಿರಲಿ...ಮೊನ್ನೆ ಮೊನ್ನೆಯವರೆಗೆ ಭಾರತ ಕ್ರಿಕೆಟ್ ತಂಡ 11 ವರ್ಷಗಳಿಂದ ಐಸಿಸಿ ಟ್ರೋಫಿಯನ್ನೇ ಗೆದ್ದಿರಲಿಲ್ಲ..ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ 22 ವರ್ಷಗಳ ಕಾಲ ಒಂದು ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ..ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್ ವಿಶ್ವಕಪ್ ಟ್ರೋಫಿಯನ್ನು ಸ್ಪರ್ಶಿಸಲು 28 ವರ್ಷ ತಪಸ್ಸು ಮಾಡಬೇಕಾಯಿತು.. ಏಳು ಒಲಿಂಪಿಕ್ಸ್’ಗಳಲ್ಲಿ ಭಾಗವಹಿಸಿದ್ದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಗೆದ್ದಿರುವುದು ಒಂದು ಕಂಚಿನ ಪದಕ.That’s how sport is.

ಈ ಹೆಣ್ಣು ಮಗಳು ತಾಯಿಯಾದ ಒಂದೇ ವಾರಕ್ಕೆ ಮತ್ತೆ ಬಿಲ್ಲು ಬಾಣ ಹಿಡಿಯುತ್ತಾಳೆ.. ಒಂದೇ ತಿಂಗಳಿಗೆ ಟ್ರಯಲ್ಸ್’ನಲ್ಲಿ ಭಾಗವಹಿಸುತ್ತಾಳೆ. ಅದು Commitment. “ಒಲಿಂಪಿಕ್ಸ್’ಗೆ ಅರ್ಹತೆ ಪಡೆಯುವುದು ಏನು ಮಹಾ ಸಾಧನೆ” ಎಂದು ಕೆಲವರು ಹೇಳುತ್ತಿದ್ದಾರೆ.. Really? ಒಬ್ಬ ಅಥ್ಲೀಟ್ ಬಳಿ ಹೋಗಿ ಇದನ್ನು ಹೇಳಿ ನೋಡಿ... ನಿಮ್ಮ ಕಪಾಳಕ್ಕೆ ಬೀಳದಿದ್ದರೆ ಕೇಳಿ..! ಕ್ರೀಡೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಭಾರತದ ಅಥ್ಲೀಟ್’ಗಳ ಪೈಕಿ ಒಲಿಂಪಿಕ್ಸ್’ನಲ್ಲಿ ಭಾಗವಹಿಸುವ ಅವಕಾಶ ಸಿಗುವುದು 0.01% ಕ್ರೀಡಾಪಟುಗಳಿಗೆ ಮಾತ್ರ. ಅಂಥದ್ದರಲ್ಲಿ ದೀಪಿಕಾ ಕುಮಾರಿಗಿದು 4ನೇ ಒಲಿಂಪಿಕ್ಸ್, ಅದೂ ತಾಯಿಯಾದ ಕೆಲವೇ ತಿಂಗಳುಗಳಲ್ಲಿ.. 

ಒಲಿಂಪಿಕ್ಸ್’ನಲ್ಲಿ ಭಾಗವಹಿಸುವವರೆಲ್ಲರೂ ಪದಕ ಗೆಲ್ಲಲು ಸಾಧ್ಯವಾಗುವುದಿಲ್ಲ.. ಒಬ್ಬ ಒಳ್ಳೆಯ ಕ್ರೀಡಾಪಟುವಿಗೂ ಕೆಟ್ಟ ದಿನವೆಂಬುದು ಇರುತ್ತದೆ. ಆ ಕೆಟ್ಟ ದಿನ ಮಹತ್ವದ ಘಟ್ಟದಲ್ಲೇ ಎದುರಾಗಿ ಬಿಟ್ಟರೆ..? ಅದು ದುರದೃಷ್ಟ ಅಷ್ಟೇ.. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಗಿದ್ದು ಇದೇ ಅಲ್ಲವೇ..?

124 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಯಾರೂ ಮಾಡದ ಸಾಧನೆ ಮಾಡಿದ ಮನು ಭಾಕರ್..!
 

Latest Videos
Follow Us:
Download App:
  • android
  • ios