ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ಜೀವದಾನ!
ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ಜೀವದಾನ| ಎಜಿಆರ್ ಪಾವತಿಗೆ 10 ವರ್ಷ ಅವಕಾಶ| ನಿಟ್ಟುಸಿರು ಬಿಟ್ಟಭಾರ್ತಿ ಏರ್‌ಟೆಲ್, ವೋಡಾಫೋನ್ ಐಡಿಯಾ
ನವದೆಹಲಿ(ಸೆ.02): ಕೇಂದ್ರ ಸರ್ಕಾರಕ್ಕೆ ಖಾಸಗಿ ಟೆಲಿಕಾಂ ಕಂಪನಿಗಳು ಪಾವತಿಸಬೇಕಿರುವ ‘ಹೊಂದಾಣಿಕೆ ಮಾಡಲ್ಪಟ್ಟಒಟ್ಟು ಆದಾಯ’ (ಎಜಿಆರ್) ಸಂಬಂಧಿ ಬಾಕಿಯನ್ನು ಪಾವತಿಸಲು ಸುಪ್ರೀಂಕೋರ್ಟ್ 10 ವರ್ಷಗಳ ಕಾಲಾವಕಾಶ ನೀಡಿದೆ. ಅದರೊಂದಿಗೆ, ನಷ್ಟದಲ್ಲಿರುವ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಜೀವದಾನ ದೊರೆತಂತಾಗಿದ್ದು, ದೂರಸಂಪರ್ಕ ಇಲಾಖೆಗೆ ಪಾವತಿಸಬೇಕಿರುವ ಒಟ್ಟು 1.6 ಲಕ್ಷ ಕೋಟಿ ರು. ಪಾವತಿಸಲು ಕಾಲಾವಕಾಶ ಪಡೆದು ನಿಟ್ಟುಸಿರು ಬಿಟ್ಟಿವೆ.
ವಿಶೇಷವಾಗಿ ಭಾರ್ತಿ ಏರ್‌ಟೆಲ್ ಹಾಗೂ ವೋಡಾಫೋನ್ ಐಡಿಯಾ ಕಂಪನಿಗಳು ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದ ನಿರಾಳವಾಗಿವೆ. ಆದರೆ, 2021ರ ಮಾಚ್‌ರ್ 31ರೊಳಗೆ ಒಟ್ಟು ಬಾಕಿಯಿರುವ ಹಣದ ಶೇ.10ರಷ್ಟನ್ನು ಪಾವತಿಸಬೇಕು, ನಂತರ ಪ್ರತಿ ವರ್ಷ ಫೆಬ್ರವರಿ 7ರೊಳಗೆ ಆಯಾ ವರ್ಷದ ಕಂತಿನ ಹಣ ಪಾವತಿಸಬೇಕು, ಇಲ್ಲದಿದ್ದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಮತ್ತು ದಂಡ ಹಾಗೂ ಬಡ್ಡಿ ವಿಧಿಸಲಾಗುವುದು ಎಂದು ಸುಪ್ರೀಂಕೋರ್ಟ್ ಷರತ್ತು ವಿಧಿಸಿದೆ.
ಟೆಲಿಕಾಂ ಕಂಪನಿಗಳು ಸರ್ಕಾರಕ್ಕೆ ಎಜಿಆರ್ ಶುಲ್ಕ ಪಾವತಿಸಬೇಕು ಎಂದು 2019ರ ಅಕ್ಟೋಬರ್‌ನಲ್ಲೇ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆದರೆ, ಮೇಲ್ಮನವಿ, ಸ್ಪಷ್ಟನೆ ಕೋರುವ ಅರ್ಜಿ, ಸರ್ಕಾರದೊಂದಿಗೆ ಮಾತುಕತೆ ಮುಂತಾದ ನೆಪಗಳೊಂದಿಗೆ ಖಾಸಗಿ ಟೆಲಿಕಾಂ ಕಂಪನಿಗಳು ಹಣ ಪಾವತಿಯನ್ನು ಮುಂದೂಡುತ್ತಾ ಬಂದಿದ್ದವು. ನಂತರ ಕೇಂದ್ರ ಸರ್ಕಾರವೇ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡು, ಕಂತುಗಳಲ್ಲಿ ದಂಡ ಪಾವತಿಸುವುದಕ್ಕೆ ಟೆಲಿಕಾಂ ಕಂಪನಿಗಳಿಗೆ 20 ವರ್ಷಗಳ ಅವಕಾಶ ನೀಡಬೇಕೆಂದು ಕೋರಿತ್ತು. ಆದರೆ, 10 ವರ್ಷದಲ್ಲಿ ಪಾವತಿಸಬೇಕು ಎಂದು ಮಂಗಳವಾರ ಅಂತಿಮ ಆದೇಶ ನೀಡಿರುವ ಸುಪ್ರೀಂಕೋರ್ಟ್, ಈ ವಿಷಯದಲ್ಲಿ ದೂರಸಂಪರ್ಕ ಇಲಾಖೆ ಸೂಚಿಸಿದ ಶುಲ್ಕದ ಮೊತ್ತ ಮತ್ತು ತನ್ನ ಆದೇಶವೇ ಅಂತಿಮ ಎಂದು ಹೇಳುವ ಮೂಲಕ ಎಲ್ಲ ಪ್ರಹಸನಗಳಿಗೆ ತೆರೆ ಎಳೆದಿದೆ.
ಎಜಿಆರ್ ಶುಲ್ಕ ಪಾವತಿಸಬೇಕಿರುವ ಟೆಲಿಕಾಂ ಕಂಪನಿಗಳ ಮುಖ್ಯಸ್ಥರು 10 ವರ್ಷದೊಳಗೆ ಕಂತುಗಳಲ್ಲಿ ದಂಡ ಪಾವತಿಸುವುದಾಗಿ ನಾಲ್ಕು ವಾರದೊಳಗೆ ಖಾಸಗಿ ಗ್ಯಾರಂಟಿ ನೀಡಬೇಕು. ಅವರಿಗೆ ನೀಡಿರುವ 10 ವರ್ಷಗಳ ಕಾಲಾವಕಾಶ 2021ರ ಏಪ್ರಿಲ್ 1ರಿಂದ ಆರಂಭವಾಗಿ 2031ರ ಮಾಚ್‌ರ್ 31ಕ್ಕೆ ಅಂತ್ಯಗೊಳ್ಳುತ್ತದೆ. ಇನ್ನು, ದಿವಾಳಿ ಪ್ರಕ್ರಿಯೆಯಲ್ಲಿರುವ ಟೆಲಿಕಾಂ ಕಂಪನಿಯು ತನ್ನ ತರಂಗಾಂತರವನ್ನು ಮಾರಾಟ ಮಾಡಬಹುದೇ ಎಂಬ ವಿಚಾರವನ್ನು ರಾಷ್ಟ್ರೀಯ ಕಂಪನಿ ಕಾಯ್ದೆಗಳ ನ್ಯಾಯಾಧಿಕರಣದಲ್ಲಿ ಬಗೆಹರಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿತು.
ಯಾವ ಕಂಪನಿಯಿಂದ ಎಷ್ಟುಬಾಕಿ?
ವೋಡಾಫೋನ್ ಐಡಿಯಾ 50,400 ಕೋಟಿ
ಭಾರ್ತಿ ಏರ್‌ಟೆಲ್ 26,000 ಕೋಟಿ
ರಿಲಯನ್ಸ್ ಕಮ್ಯುನಿಕೇಷನ್ಸ್ 26,000
ಏರ್‌ಸೆಲ್ 14,000 ಕೋಟಿ
ವಿಡಿಯೋಕಾನ್ 1,400 ಕೋಟಿ