ಮುಂದಿನ 10 ವರ್ಷ Tech Decade: ಡಿಜಿಟಲ್ ಇಂಡಿಯಾಕ್ಕೆ 6 ಗುರಿ, 1000 ದಿನಗಳ ನಿಖರ ಯೋಜನೆ
ನರೇಂದ್ರ ಮೋದಿ ಅವರು ಮುಂಬರುವ ವರ್ಷಗಳನ್ನು ಭಾರತದ ಟೆಕ್ಕೇಡ್ (ತಂತ್ರಜ್ಞಾನ ದಶಕ) ಎಂದು ಸರಿಯಾಗಿಯೇ ಕರೆದಿದ್ದಾರೆ. ಸರ್ಕಾರ ಮತ್ತು ಆಡಳಿತದಲ್ಲಿ ತಂತ್ರಜ್ಞಾನವನ್ನು ಮರು ರೂಪಿಸಲು ಇದು ಸೂಕ್ತ ಕಾಲವಾಗಿದೆ.
ಮಾನವಕುಲದ ಇತಿಹಾಸದಲ್ಲಿ ಕಂಡ ಅತ್ಯಂತ ಕೆಟ್ಟಸಾಂಕ್ರಾಮಿಕ ರೋಗದಿಂದ ಜಗತ್ತು ನಿಧಾನವಾಗಿ ಹೊರಬರುತ್ತಿದೆ. ಇದು ಪ್ರಪಂಚದಾದ್ಯಂತ ಜೀವನ, ಜೀವನೋಪಾಯ ಮತ್ತು ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸಿತ್ತು. ವಿಶ್ವದ ಜನಸಂಖ್ಯೆಯ ಸುಮಾರು 1/6 ಭಾಗವನ್ನು ಹೊಂದಿರುವ ಭಾರತ ಸಹ ಕಳೆದ 24 ತಿಂಗಳಲ್ಲಿ ಭಾರೀ ಸವಾಲುಗಳನ್ನು ಎದುರಿಸಿತು.
ಒಬ್ಬ ಮನುಷ್ಯನ ಅಂತಿಮ ಅಳತೆಗೋಲು ಅವನು ಸಂತೃಪ್ತ, ಅನುಕೂಲಕರ ಸ್ಥಿತಿಯಲ್ಲಿ ಎಲ್ಲಿ ನಿಲ್ಲುತ್ತಾನೆ ಎಂಬುದಲ್ಲ, ಬದಲಾಗಿ ಸವಾಲು ಮತ್ತು ಸಂಕಷ್ಟದ ಸಮಯದಲ್ಲಿ ಎಲ್ಲಿ ನಿಲ್ಲುತ್ತಾನೆ ಎಂಬುದು ಎನ್ನುವ ಮಾತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಸಾಂಕ್ರಾಮಿಕದ ಸಮಯದಲ್ಲಿ ಕೋವಿಡ್ ನಿರ್ವಹಣೆ ಮತ್ತು ಚೇತರಿಕೆ ಪ್ರಕ್ರಿಯೆಯಲ್ಲಿ ಅದ್ಭುತವನ್ನು ಸಾಧಿಸುವ ಮೂಲಕ ಜಾಗತಿಕ ಮನ್ನಣೆ ಗಳಿಸಿತು. ಮೋದಿ ಅವರು ಮುಂಚೂಣಿ ಯೋಧರೊಂದಿಗೆ ತಾವೂ ದೃಢವಾಗಿ ನಿಂತು ಕೋವಿಡ್ ಹೋರಾಟದಲ್ಲಿ ದೇಶವನ್ನು ಮುನ್ನಡೆಸಿದರು.
ದೇಶದಲ್ಲೇ ಲಸಿಕೆಗಳನ್ನು ಅಭಿವೃದ್ಧಿಪಡಿಸಿ, ತಯಾರಿಸಲು ವಿಜ್ಞಾನಿಗಳನ್ನು ಪ್ರೋತ್ಸಾಹಿಸಿದರು. ಈ ಸಮಯದಲ್ಲಿ ದೇಶಕ್ಕೆ ಆತ್ಮನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತದ ಹೊಸ ದೃಷ್ಟಿಕೋನ, ಹೊಸ ಆರ್ಥಿಕ ಚಿಂತನೆಯನ್ನು ನೀಡಿದರು. ಚೀನಾದಿಂದ ಗಡಿಯಲ್ಲಿ ಉದ್ಭವಿಸಿದ್ದ ಬೆದರಿಕೆಗಳು ಮತ್ತು ಯುದ್ಧೋನ್ಮಾದವನ್ನೂ ದೃಢ ನಿಶ್ಚಯ ಮತ್ತು ವಿಶ್ವಾಸದಿಂದ ಎದುರಿಸಿದರು. ಇದೊಂದು ಅಮೃತ ಕಾಲ - ಮುಂದಿನ 25 ವರ್ಷಗಳ ಭಾರತದ ಪ್ರಯಾಣ ಶತಮಾನೋತ್ಸವದ ಸ್ವಾತಂತ್ರ್ಯ ದಿನಾಚರಣೆಯತ್ತ ದಾಪುಗಾಲು ಹಾಕುತ್ತದೆ.
ಭಾರತ ಅತಿ ವೇಗದ ಆರ್ಥಿಕತೆ
ಕೊರೋನಾದ ಹಿಂದಿನ ವರ್ಷಗಳಲ್ಲಿ ಸರ್ಕಾರದ ಸುಧಾರಣೆಗಳು ಮತ್ತು ನೀತಿಗಳಿಂದಾಗಿ ಚೇತರಿಕೆ ಸಣ್ಣ ಪ್ರಮಾಣದಲ್ಲೇನೂ ಇರಲಿಲ್ಲ. ಹಣಕಾಸು ವಲಯವನ್ನು ಸ್ವಚ್ಛಗೊಳಿಸುವ ಡಿಜಿಟಲ್ ಇಂಡಿಯಾ ಮೊದಲಾದ ಕಾರ್ಯಕ್ರಮಗಳು ಭಾರತದ ಆರ್ಥಿಕಾಭಿವೃದ್ಧಿಗೆ ಉತ್ತೇಜನ ನೀಡಿದ್ದವು. ನಂತರ ಸಾಂಕ್ರಾಮಿಕ ರೋಗದ ಸಮಯದಲ್ಲಿ ಘೋಷಿಸಲಾದ ಸುಧಾರಣೆಗಳು ಮತ್ತು ಆರ್ಥಿಕ ಪ್ಯಾಕೇಜ್‌ಗಳ ಫಲವಾಗಿ ಭಾರತವು ಇಂದು ವಿಶ್ವದಲ್ಲಿ ಅತ್ಯಂತ ವೇಗವಾಗಿ ಪುಟಿದೇಳುತ್ತಿರುವ ಆರ್ಥಿಕ ರಾಷ್ಟ್ರವಾಗಿದೆ.
ದೇಶಕ್ಕೆ ಇಂದು ಹಿಂದೆಂದಿಗಿಂತ ಹೆಚ್ಚು ಎಫ್‌ಡಿಐ ಹರಿದು ಬರುತ್ತಿದೆ. ರಫ್ತಿನಲ್ಲಿ ದೇಶ ಹೊಸ ದಾಖಲೆಗಳನ್ನು ಸ್ಥಾಪಿಸಿದೆ. 88 ಯೂನಿಕಾರ್ನ್‌ಗಳು ಸೇರಿದಂತೆ 60 ಸಾವಿರಕ್ಕೂ ಹೆಚ್ಚು ನೋಂದಾಯಿತ ನವೋದ್ಯಮಗಳೊಂದಿಗೆ ಭಾರತವು ಅತ್ಯಂತ ಚೈತನ್ಯದಾಯಕ ಮತ್ತು ವೇಗವಾಗಿ ಬೆಳೆಯುತ್ತಿರುವ ನವೋದ್ಯಮಗಳ ದೇಶವಾಗಿದೆ. 2021ರ ಒಂದೇ ವರ್ಷ ಭಾರತವು 42 ಯುನಿಕಾರ್ನ್‌ಗಳನ್ನು ರಚಿಸಿದ್ದು, 2022ರಲ್ಲೂ ಇದೇ ಪ್ರವೃತ್ತಿ ಮುಂದುವರಿಯುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಮಾಡಿದ ಆರಂಭಿಕ ಹೂಡಿಕೆಗಳ ಫಲವಾಗಿ ಭಾರತ ‘ಬೌಸ್ಸ್ ಬ್ಯಾಕ್’ ಆಗಿದೆ.
ಡಿಜಿಟಲ್ ಇಂಡಿಯಾದ ಫಲ
ಪ್ರಧಾನಿ ಮೋದಿ 2015ರಲ್ಲಿ ಮೂರು ಸ್ಪಷ್ಟಉದ್ದೇಶಗಳೊಂದಿಗೆ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು:
1.ನಾಗರಿಕರ ಜೀವನವನ್ನು ಪರಿವರ್ತಿಸುವುದು
2.ಆರ್ಥಿಕ ಅವಕಾಶಗಳನ್ನು ವಿಸ್ತರಿಸುವುದು
3.ನಿರ್ದಿಷ್ಟತಂತ್ರಜ್ಞಾನಗಳಲ್ಲಿ ವ್ಯೂಹಾತ್ಮಕ ಸಾಮರ್ಥ್ಯ ರೂಪಿಸುವುದು
ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಆವಿಷ್ಕಾರಗಳ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ, ನಾಗರಿಕರ ಜೀವನವನ್ನು ಸಶಕ್ತಗೊಳಿಸಲು ಮತ್ತು ಪರಿವರ್ತಿಸಲು ತಂತ್ರಜ್ಞಾನದ ಬಳಕೆಯಲ್ಲಿ ಭಾರತವು ವಿಶ್ವದ ಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದಾಗಿದೆ.
ವಿಶ್ವದ ಅತಿದೊಡ್ಡ ಡಿಜಿಟಲ್ ಗುರುತಿನ ಕಾರ್ಯಕ್ರಮವಾದ ಆಧಾರ್ (132 ಕೋಟಿ ನೋಂದಣಿ), ವಿಶ್ವದ ಅತಿದೊಡ್ಡ ತಂತ್ರಜ್ಞಾನ ಚಾಲಿತ ಕೋವಿಡ್ ಲಸಿಕೆ ಕಾರ್ಯಕ್ರಮ(180 ಕೋಟಿ ಡೋಸ್ ವಿತರಣೆ), ವಿಶ್ವದ ಅತಿದೊಡ್ಡ ನೇರ ಸವಲತ್ತು ವರ್ಗಾವಣೆ (ಡಿಬಿಟಿ) ಕಾರ್ಯಕ್ರಮ ಮತ್ತು ಡಿಜಿಟಲ… ಪಾವತಿ ಮತ್ತು ಫಿನ್‌ಟೆಕ್ ತಂತ್ರಜ್ಞಾನದಲ್ಲಿ ಜಾಗತಿಕ ಅಗ್ರೇಸರನಾಗಿ (ಹಣಕಾಸು ವರ್ಷ 2022ರಲ್ಲಿ 76 ಲಕ್ಷ ಕೋಟಿ ರು.), ಮೊದಲ ಎರಡು ಉದ್ದೇಶಗಳನ್ನು ಬಹುತೇಕ ಈಡೇರಿಸಲಾಗಿದೆ.
6 ಗುರಿ, 1000 ದಿನಗಳ ಯೋಜನೆ
ಕೋವಿಡ್ ನಂತರ, ಆರ್ಥಿಕತೆ, ಗ್ರಾಹಕರ ಜೀವನದಲ್ಲಿ ಡಿಜಿಟಲೀಕರಣದ ದರ ಮತ್ತು ವೇಗವರ್ಧನೆ ಸರ್ಕಾರದಲ್ಲಿ ತೀವ್ರಗೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿದೆ. ತಂತ್ರಜ್ಞಾನ, ನಾವೀನ್ಯತೆ ಮತ್ತು ಪೂರೈಕೆ ಸರಪಳಿಗಳು ಆಳವಾದ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿವೆ. ತನ್ಮೂಲಕ 1 ಟ್ರಿಲಿಯನ್ ಡಾಲರ್ ಡಿಜಿಟಲ… ಆರ್ಥಿಕತೆಯನ್ನು ರೂಪಿಸುವ ಮತ್ತು ಮೀರಿ ಸಾಗುವ ಭಾರತದ ಗುರಿಗೆ ಮಹತ್ವದ ಅವಕಾಶವನ್ನೂ ನೀಡುತ್ತಿವೆ.
ಈ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಮತ್ತಷ್ಟುಉತ್ತೇಜನ ನೀಡಲು, ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು 6 ಸ್ಪಷ್ಟಗುರಿಗಳೊಂದಿಗೆ 1000 ದಿನಗಳ ವಿಸ್ತೃತ ಅಭಿಯಾನ ಯೋಜನೆ ರೂಪಿಸಿದೆ.
ನರೇಂದ್ರ ಮೋದಿ ಅವರು ಮುಂಬರುವ ವರ್ಷಗಳನ್ನು ಭಾರತದ ಟೆಕ್ಕೇಡ್ (ತಂತ್ರಜ್ಞಾನ ದಶಕ) ಎಂದು ಸರಿಯಾಗಿಯೇ ಕರೆದಿದ್ದಾರೆ. ಸರ್ಕಾರ ಮತ್ತು ಆಡಳಿತದಲ್ಲಿ ತಂತ್ರಜ್ಞಾನವನ್ನು ಮರು ರೂಪಿಸಲು ಇದು ಸೂಕ್ತ ಕಾಲವಾಗಿದೆ. ಸಾರ್ವಜನಿಕ ಸೇವೆಯ ವಿತರಣೆಯನ್ನು ಹೊಸ ಹಂತಕ್ಕೆ ಕೊಂಡೊಯ್ಯಲು ಸರ್ಕಾರವು ಶೀಘ್ರದಲ್ಲೇ ಆಡಳಿತದಲ್ಲಿ ಡಿಜಿಟಲೀಕರಣದ ಮುಂದಿನ ಹಂತವನ್ನು ಪ್ರಾರಂಭಿಸಲಿದೆ. ವೇದಿಕೆ ಮಟ್ಟದ ಉಪಕ್ರಮಗಳು ಪ್ರಮುಖ ಪರಿಣಾಮವನ್ನು ಬೀರಿವೆ. ಇದು ಡಿಜಿಟಲ್ ಸರ್ಕಾರದ ವಿಧಾನವನ್ನು ಅಳವಡಿಸಿಕೊಳ್ಳುವ ಸಮಯವೂ ಆಗಿದೆ. ಇದು ಸರ್ಕಾರವನ್ನು ಇನ್ನಷ್ಟುದಕ್ಷಗೊಳಿಸುತ್ತದೆ. ಕಾಗದ ಪತ್ರಗಳು ಮತ್ತು ಕಡತಗಳನ್ನು ಕಡಿಮೆ ಮಾಡಿ, ಆಡಳಿತವನ್ನು ಹೆಚ್ಚು ಸ್ಪಂದನಾತ್ಮಕವಾಗಿಸುತ್ತದೆ. ಜೊತೆಗೆ ಸರ್ಕಾರದಿಂದ ಜನರಿಗೆ ಉತ್ತಮ ಸೇವೆ ಸಿಗುವಂತಾಗುತ್ತದೆ.
82 ಕೋಟಿ ಇಂಟರ್ನೆಟ್ ಬಳಕೆದಾರರು
ಎಲ್ಲಾ ಭಾರತೀಯರನ್ನು ಮುಕ್ತ ಮತ್ತು ಸುರಕ್ಷಿತ ಅಂತರ್ಜಾಲದೊಂದಿಗೆ ಸಂಪರ್ಕಿಸುವುದು ಸರ್ಕಾರದ ಪ್ರಮುಖ ಗುರಿ. ಭಾರತವು 82 ಕೋಟಿ ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ. 60 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು ಇಲ್ಲಿದ್ದಾರೆ. ನಮ್ಮದು ವಿಶ್ವದ ಅತಿದೊಡ್ಡ ಸಂಪರ್ಕಿತ ಪ್ರಜಾಪ್ರಭುತ್ವ. ಡಿಜಿಟಲ್ ಮೂಲಸೌಕರ್ಯ (ಕ್ಲೌಡ್, ದತ್ತಾಂಶ ಕೇಂದ್ರ ಇತ್ಯಾದಿ), ಬ್ರಾಡ್‌ಬ್ಯಾಂಡ್ ವೇಗ ಮತ್ತು ಲಭ್ಯತೆಯನ್ನು ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ. ಇದು 650,000 ಹಳ್ಳಿಗಳು ಆತ್ಮನಿರ್ಭರ (ಸ್ವಾವಲಂಬಿ) ಆಗಲು ಎಡೆ ಮಾಡಿಕೊಡುತ್ತದೆ.
ನಮ್ಮ ಡಿಜಿಟಲ್ ಆರ್ಥಿಕತೆಯ ವಿಸ್ತರಣೆಯು ಒಂದು ಕಡೆ ದೊಡ್ಡ ಟೆಕ್ ಕಂಪನಿಗಳು ಮತ್ತು ನವೋದ್ಯಮಗಳಿಗೆ ಹಾಗೂ ಇಂಟರ್ನೆಟ್ ಮತ್ತು ಬಳಕೆದಾರ ತಂತ್ರಜ್ಞಾನದ ಸುತ್ತಲೂ ಅವಕಾಶಗಳನ್ನು ಅನ್ವೇಷಿಸುತ್ತಿದ್ದರೆ, ಇನ್ನೊಂದೆಡೆ ದತ್ತಾಂಶ, ಬ್ಲಾಕ್‌ಚೈನ್, ಕೃತಕ ಬುದ್ಧಿಮತ್ತೆ, ಎಲೆಕ್ಟ್ರಾನಿಕ್ಸ್ ವಿನ್ಯಾಸ, ಸೆಮಿಕಂಡಕ್ಟರ್, ಸೂಪರ್ ಕಂಪ್ಯೂಟಿಂಗ್ ಇತ್ಯಾದಿ ಹಲವಾರು ಉದಯೋನ್ಮುಖ ಹೊಸ ಕ್ಷೇತ್ರಗಳನ್ನೂ ಸೃಷ್ಟಿಸುತ್ತಿದೆ.
ನಂ.2 ಮೊಬೈಲ್ ತಯಾರಿಕೆ ರಾಷ್ಟ್ರ
ಮೋದಿ ಆಡಳಿತದಲ್ಲಿ ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಿಕಾ ರಾಷ್ಟ್ರವಾಗಿದೆ. ಕೋವಿಡ್ ನಂತರದ ವಿಶ್ವ ವ್ಯವಸ್ಥೆಯು ಎಲೆಕ್ಟ್ರಾನಿಕ್ಸ್‌ನಲ್ಲಿ ಹೊಸ ವಿಶ್ವಾಸಾರ್ಹ ಮೌಲ್ಯ ಸರಪಳಿಗಳನ್ನು ಬಯಸುತ್ತಿರುವುದರಿಂದ ಭಾರತವು ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಮಹತ್ವಾಕಾಂಕ್ಷೆ ಹೊಂದಿದೆ. ಆದ್ದರಿಂದ ಸರ್ಕಾರವು ತನ್ನ ಎಲೆಕ್ಟ್ರಾನಿಕ್ಸ್ ಮಹತ್ವಾಕಾಂಕ್ಷೆಗಳನ್ನು ವಿಸ್ತರಿಸಿದ ಮತ್ತು ಆಳಗೊಳಿಸುವ ಕಾರ್ಯತಂತ್ರದೊಂದಿಗೆ ಮರುರೂಪಿಸಿದೆ.
ಇದು ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಇಂದು 75 ಶತಕೋಟಿ ಅಮೆರಿಕನ್ ಡಾಲರ್‌ನಿಂದ 2025-26ರ ಹೊತ್ತಿಗೆ 300 ಶತಕೋಟಿ ಡಾಲರ್‌ಗೆ ವಿಸ್ತರಿಸುತ್ತದೆ. ಇದಲ್ಲದೆ, ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ಪ್ರೋತ್ಸಾಹಿಸಲು ಮೋದಿ ಅವರು 76,000 ಕೋಟಿ ಪ್ಯಾಕೇಜ್ ಮಂಜೂರು ಮಾಡಿದ್ದಾರೆ. ಇವೆಲ್ಲವೂ ಈ ದೇಶಕ್ಕೆ ಹಾಗೂ ರಾಜ್ಯ ಸರ್ಕಾರಗಳಿಗೆ ಲಭಿಸಿದ ದೊಡ್ಡ ಅವಕಾಶ.
ಮುಂಬರುವ ದಶಕದಲ್ಲಿ, ದೇಶಗಳ ಸ್ಪರ್ಧಾತ್ಮಕ ಪ್ರಯೋಜನವು ಭವಿಷ್ಯದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮತ್ತು ನಿಯೋಜಿಸುವ ತಂತ್ರಜ್ಞಾನದ ಶಕ್ತಿ ಮತ್ತು ವೇಗದ ಮೇಲೆ ಅವಲಂಬಿತವಾಗಿರುತ್ತದೆ. ಭಾರತವು ನಾಯಕತ್ವವನ್ನು ಬಯಸುವ ವ್ಯೂಹಾತ್ಮಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬ್ಲಾಕ್‌ಚೈನ್, ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ವೆಬ್ 3.0(ಬ್ಲಾಕ್ ಚೈನ್), ಸೆಮಿಕಂಡಕ್ಟರ್, ಮುಂದಿನ ಪೀಳಿಗೆಯ ವಿದ್ಯುನ್ಮಾನ ವ್ಯವಸ್ಥೆ, ಸೂಪರ್ ಕಂಪ್ಯೂಟಿಂಗ್, ಕ್ವಾಂಟಮ… ಕಂಪ್ಯೂಟಿಂಗ್ ಇತ್ಯಾದಿಗಳು ಸೇರಿವೆ.
ಮೋದಿ ಕನಸಿನ ‘ಟೆಕ್ಕೇಡ್’
ನಾವು ಆಸಕ್ತಿಪೂರ್ಣ ಕಾಲಘಟ್ಟದಲ್ಲಿ ಜೀವಿಸುತ್ತಿದ್ದೇವೆ. ನಮ್ಮ ಸುತ್ತಲಿನ ಜಗತ್ತು ಕೋವಿಡ್ ನಂತರ ಮತ್ತು ಇತ್ತೀಚಿನ ರಷ್ಯಾ-ಉಕ್ರೇನ್ ಸಂಘರ್ಷದ ಬಳಿಕ ತಾಂತ್ರಿಕ ಬದಲಾವಣೆಗಳಿಗೆ ಒಳಗಾಗುತ್ತಿದೆ. ಕೋವಿಡ್ ನಂತರ ಭಾರತದ ಆತ್ಮವಿಶ್ವಾಸ ಹೆಚ್ಚಿದೆ. ದೇಶದ ಹೊಸ ಮಹತ್ವಾಕಾಂಕ್ಷೆಗಳು ಕೋಟ್ಯಂತರ ಯುವ ಭಾರತೀಯರ ಶಕ್ತಿ ಮತ್ತು ಉತ್ಸಾಹದಿಂದ ಇನ್ನಷ್ಟುಬಲ ಪಡೆಯುತ್ತಿವೆ. ಆತ್ಮನಿರ್ಭರ ಭಾರತ ಮತ್ತು ಟೆಕ್ಕೇಡ್‌ನ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವು ಭಾರತೀಯ ಯುವಕರಿಗೆ ಅವಕಾಶಗಳ ಉಜ್ವಲ ಭವಿಷ್ಯದ ಹೆದ್ದಾರಿಗೆ ಬೆಳಕು ತೋರುತ್ತಿದೆ.
ಈ ಅವಕಾಶಗಳು ಮತ್ತು ಕೌಶಲ್ಯದ ಮೇಲಿನ ಅವರ ಪ್ರಚೋದನೆಯು ಪ್ರತಿಯೊಬ್ಬ ಯುವ ಭಾರತೀಯನಿಗೂ ತನಗೆ ಮತ್ತು ಭಾರತಕ್ಕೆ ಉಜ್ವಲ ಭವಿಷ್ಯವಿದೆ ಎಂಬ ವಿಶ್ವಾಸ ಮೂಡಿಸುತ್ತಿದೆ. ಇದು ಭಾರತವು ಜಾಗತಿಕ ತಂತ್ರಜ್ಞಾನ ಮತ್ತು ವಾಣಿಜ್ಯ ಶಕ್ತಿಯಾಗಿ ಹೊರಹೊಮ್ಮುವ ಕಾಲ. ಹೀಗಾಗಿ ನವ ಭಾರತವು ಜಾಗತಿಕ ಗುಣಮಟ್ಟದ ಡಿಜಿಟಲ್ ಉತ್ಪನ್ನಗಳು ಮತ್ತು ಸೇವೆಗಳನ್ನು ಜಗತ್ತಿಗೆ ಒದಗಿಸಲಿದೆ. ಜೊತೆಗೆ, ದೇಶದ ಪ್ರಜಾಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಬೆಳೆಸಲು ತಂತ್ರಜ್ಞಾನಗಳನ್ನು ಬಳಸಲಿದೆ.
- ರಾಜೀವ್ ಚಂದ್ರಶೇಖರ್
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ