ಒಂದು ಬಾರಿ ಚಾರ್ಜ್‌ಗೆ 250 ಕೀಮಿ ಪ್ರಯಾಣ- ಬರುತ್ತಿದೆ ನಿಸಾನ್ ಎಲೆಕ್ಟ್ರಿಕಲ್ ಕಾರು !
ಭಾರತದಲ್ಲಿ ನಿಸಾನ್ ಕಾರು ಸಂಸ್ಥೆ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡುತ್ತಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 250 ಕೀಮಿ ಪ್ರಯಾಣಿಸಬಲ್ಲ ನೂನತ ಕಾರು ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ಈ ಕಾರಿನ ವಿಶೇಷತೆ ಇಲ್ಲಿದೆ.
ಬೆಂಗಳೂರು(ಸೆ.16): ಪೆಟ್ರೋಲ್, ಡೀಸೆಲ್ ಕಾರುಗಳಿಗೆ ಪರ್ಯಾಯವಾಗಿ ಇದೀಗ ಎಲೆಕ್ಟ್ರಿಕಲ್ ಕಾರುಗಳು ಮಾರುಕಟ್ಟೆ ಪ್ರವೇಶಿಸುತ್ತಿದೆ. ಭಾರತ ಸರ್ಕಾರ ಮುಂದಿನ 5 ವರ್ಷಗಳಲ್ಲಿ ಎಲೆಕ್ಟ್ರಿಕಲ್ ಕಾರುಗಳ ಬಳಕೆ ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ. ಈ ಮೂಲಕ ಮಾಲಿನ್ಯ ಹಾಗೂ ತೈಲ ಬಳಕೆ ಕಡಿಮೆ ಮಾಡಲು ಮಹತ್ವದ ಕಾರ್ಯಕ್ಕೆ ಹೆಜ್ಜೆ ಇಟ್ಟಿದೆ.
ಕೇಂದ್ರ ಸರ್ಕಾರ ಎಲೆಕ್ಟ್ರಿಕಲ್ ಕಾರು ಖರೀದಿಸುವವರಿಗೆ ಸಬ್ಸಡಿ ಹಾಗೂ ಫ್ರೀ ಚಾರ್ಜ್ ನೀಡಲು ಹಲವು ಯೋಜನೆ ಜಾರಿಗೆ ತರಲು ಮುಂದಾಗಿದೆ. ಇದರ ಬೆನ್ನಲ್ಲೇ, ನಿಸಾನ್ ಕಾರು ಸಂಸ್ಥೆ 2019ರ ಆರಂಭದಲ್ಲೇ ಭಾರತದಲ್ಲಿ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ.
ನಿಸಾನ್ ಲೀಫ್ ಎಲೆಕ್ಟ್ರಿಕಲ್ ಕಾರು ಮುಂದಿನ ವರ್ಷದ ಆರಂಭದಲ್ಲೇ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಲೀಫ್ ಕಾರಿನ ವಿಶೇಷತೆ ಅಂದರೆ ಒಂದು ಬಾರಿ ಚಾರ್ಜ್ ಮಾಡಿದರೆ 250 ಕೀಮಿ ಪ್ರಯಾಣಿಸಬಹುದು.
ಬ್ಯಾಟರಿ ಫುಲ್ ಚಾರ್ಜ್ ಮಾಡಲು 3 ಕಿಲೋ ವ್ಯಾಟ್ ಪ್ಲಗ್‌ನಲ್ಲಿ 16 ಗಂಟೆ ಹಾಗೂ 6 ಕಿಲೋ ವ್ಯಾಟ್ ಸಾಕೆಟ್‌ನಲ್ಲಿ 6 ಗಂಟೆ ಚಾರ್ಜ್ ಮಾಡಬೇಕು. ಇದರಲ್ಲಿ ಕ್ವಿಕ್ ಚಾರ್ಜ್ ಕೂಡ ಲಭ್ಯವಿದೆ. ಕ್ವಿಕ್ ಚಾರ್ಜ್ ಮೂಲಕ 40 ನಿಮಿಷ ಚಾರ್ಜ್ ಮಾಡಿದರೆ ಶೇಕಡಾ 80 ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ.
ಚಾರ್ಜ್, ಪ್ರಯಾಣ ಎಲ್ಲವೂ ಉತ್ತಮವಾಗಿದೆ. ಆದರೆ ಈ ನಿಸಾನ್ ಲೀಫ ಎಲೆಕ್ಟ್ರಿಕಲ್ ಕಾರಿನ ಬೆಲೆ ಮಾತ್ರ 50 ಲಕ್ಷ ರೂಪಾಯಿ(ಭಾರತದಲ್ಲಿ). ಎಲೆಕ್ಟ್ರಿಕಲ್ ಕಾರುಗಳಿಗೆ ಕೇಂದ್ರ ಸರ್ಕಾರ ಕನಿಷ್ಠ 1.5 ಲಕ್ಷ ಸಬ್ಸಡಿ ನೀಡಲು ಮುಂದಾಗಿದೆ. ಆದರೆ ಈ ಕಾರನ್ನ ಜನಸಾಮಾನ್ಯರು ಖರೀದಿಸುವುದು ಕಷ್ಟವಾಗಲಿದೆ.