ಒಂದರ್ಥದಲ್ಲಿ ಸಾಫ್ಟ್‌ವೇರ್ ದೈತ್ಯ ಗೂಗಲ್ ಇಂಟರ್ನೆಟ್ ಲೋಕದ ಬಿಗ್ ಬಾಸ್. ನರ್ಸರಿ ಮಕ್ಕಳ ಹೋಮ್ ವರ್ಕ್‌ನಿಂದ ಹಿಡಿದು, ಸಂಶೋಧನೆಗಳಿಗೆ ಸಂಬಂಧಪಟ್ಟ ವಿಷಯಗಳಿಗೆ ಹುಡುಕಾಟ ಇಲ್ಲಿ ನಡೆಯುತ್ತದೆ. ವಿಳಾಸ/ದಾರಿ ಕಂಡು ಹುಡುಕುವುದರಿಂದ ಆರಂಭಿಸಿ ದೊಡ್ಡ ದೊಡ್ಡ ವ್ಯಾಪಾರ-ವಹಿವಾಟುಗಳಿಗೆ ಗೂಗಲ್ ವೇದಿಕೆಯಾಗಿದೆ. ಈ ರೀತಿ ಗೂಗಲ್ ಸೇವೆಗಳ ಪಟ್ಟಿ ಬೆಳೆಯುತ್ತಲೇ ಇದೆ.

ಇದೀಗ ಗೂಗಲ್ ತನ್ನ ಬಳಕೆದಾರರಿಗೆ ಹೊಸ ಸೌಲಭ್ಯ ನೀಡಲು ಮುಂದಾಗಿದೆ.  ಸರ್ಚ್ ಇಂಜಿನ್‌ನಲ್ಲಿ ಸರ್ಚ್ ಮಾಡಿದ ಬಳಿಕ ಬಳಕೆದಾರರು ಕಮೆಂಟ್‌ಗಳನ್ನು ಬರೆಯಬಹುದಾಗಿದೆ.  ಆದರೆ ಇದಿನ್ನೂ ಶುರುವಾಗಿಲ್ಲ.

ಈ ಹೊಸ ಫೀಚರ್‌ನಲ್ಲಿ ಸೋಶಿಯಲ್ ಮೀಡಿಯಾ ಸೈಟ್‌ಗಳಲ್ಲಿ ಕಂಡು ಬರುವ ಕೆಲವು ಅಂಶಗಳನ್ನು ಅಳವಡಿಸಲಾಗಿದೆ.
 

ಇಲ್ಲಿ ಬಳಕೆದಾರರು ಇತರರ ಕಮೆಂಟ್‌ಗಳನ್ನು ಬರೇ ಓದುವುದು ಮಾತ್ರವಲ್ಲ, ಅದನ್ನು ಲೈಕ್, ಡಿಸ್ ಲೈಕ್ ಕೂಡಾ ಮಾಡಬಹುದಾಗಿದೆ. 

ಆದರೆ, ಬಳಕೆದಾರರು ಮಾಡುವ ಕಮೆಂಟ್‌ಗಳು ಗೂಗಲ್‌ನ ಷರತ್ತು ಮತ್ತು ನಿಬಂಧನೆಗೊಳಪಟ್ಟಿರುತ್ತದೆ. ಗೂಗಲ್ ನಿಯಮಗಳಿಗನುಸಾರವಾಗಿರದ ಕಮೆಂಟ್‌ಗಳು ಪ್ರಕಟವಾಗಲ್ಲ, ಎಂದು ಗೂಗಲ್ ಹೆಲ್ಪ್ ಡಾಕ್ಯುಮೆಂಟ್ ನಲ್ಲಿ ಹೇಳಲಾಗಿದೆ.

ನಿಮ್ಮ ಕಮೆಂಟ್‌ಗಳು ಸಾರ್ವಜನಿಕವಾಗಿರುವುದು. ನೀವೇನು ಬರೆಯುತ್ತೀರಿ ಅದನ್ನು ಇತರರು ನೋಡಬಹುದಾಗಿದೆ. ಆದರೆ ಯಾರೂ ಅನಾಮಧೇಯ ಕಮೆಂಟ್ ಹಾಕುವಂತಿಲ್ಲ, ಎಂದು ಡಾಕ್ಯುಮೆಂಟ್ ಹೇಳಿದೆ.

ಇದರರ್ಥ ಲಾಗಿನ್ ಆಗದೇ ಯಾರು ಕಮೆಂಟ್ ಹಾಕುವಂತಿಲ್ಲ. ಬಳಕೆದಾರರು ತಾವು ಹಾಕಿದ ಕಮೆಂಟನ್ನು ಡಿಲೀಟ್ ಮಾಡಲು ಅವಕಾಶವಿದೆ.