ಅಟ್ಲಾಂಟಾ[ಜೂ.09]: ಗಗನಯಾತ್ರಿಗಳ ರೀತಿ ಬಾಹ್ಯಾಕಾಶಕ್ಕೆ ಹೋಗಲು ಬಯಸುವ ಜನರಿಗಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಅವಕಾಶ ಮಾಡಿಕೊಡುತ್ತಿದೆ. 2020ರಿಂದ ವರ್ಷಕ್ಕೆ ಎರಡು ಬಾರಿ ನಾಸಾದಿಂದ ತಲಾ 30 ದಿನಗಳ ಈ ಯಾತ್ರೆ ನಡೆಯುತ್ತದೆ. ಆದರೆ ಇದಕ್ಕೆ ಹೋಗುವವರು ಧೈರ್ಯವಂತ, ಆರೋಗ್ಯವಂತರಾಗಿದ್ದರಷ್ಟೇ ಸಾಲದು. ಶತಕೋಟಿಗಳ ಒಡೆಯರಾಗಿರಲೇಬೇಕು!

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ರಾಕೆಟ್‌ನಲ್ಲಿ ಹೋಗಿ, ಅಲ್ಲಿ ತಂಗಿ ಬರುವ ಈ ಪ್ರವಾಸಕ್ಕೆ ಕನಿಷ್ಠ 408 ಕೋಟಿ ರು.ಗಳನ್ನು ವ್ಯಯಿಸಬೇಕು. ಅಷ್ಟುಹಣ ಇದ್ದರೆ ಬಾಹ್ಯಾಕಾಶ ಯಾತ್ರೆಯ ಕನಸನ್ನು ನನಸಾಗಿಸಿಕೊಳ್ಳಬಹುದು.

ಖಾಸಗಿ ವ್ಯಕ್ತಿಗಳನ್ನು ಬಾಹ್ಯಾಕಾಶಕ್ಕೆ ಕರೆತರುವ ಹೊಣೆಗಾರಿಕೆಯನ್ನು ಎಲೋನ್‌ ಮಸ್ಕ್‌ ಒಡೆತನದ ಸ್ಪೇಸ್‌ ಎಕ್ಸ್‌ ಹಾಗೂ ಬೋಯಿಂಗ್‌ ಕಂಪನಿಗೆ ನಾಸಾ ವಹಿಸಿದೆ. ಸ್ಪೇಸ್‌ ಎಕ್ಸ್‌ ಕಂಪನಿ ತನ್ನ ಡ್ರ್ಯಾಗನ್‌ ಕ್ಯಾಪ್ಸೂಲ್‌ ಬಳಸುತ್ತದೆ. ಬೋಯಿಂಗ್‌ ಕಂಪನಿ ಸ್ಟಾರ್‌ ಲೈನರ್‌ ಎಂಬ ಗಗನನೌಕೆ ತಯಾರಿಸುತ್ತಿದೆ. ಈ ಕಂಪನಿಗಳ ಗಗನನೌಕೆಯಲ್ಲಿ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣಿಸಲು 400 ಕೋಟಿ ರು. ಬಾಡಿಗೆ ನೀಡಬೇಕಾಗುತ್ತದೆ.

ಉಳಿದಂತೆ ಬಾಹ್ಯಾಕಾಶ ಕೇಂದ್ರದಲ್ಲಿ ವಾಸ್ತವ್ಯ ಹೂಡಿ ನೀರು, ಗಾಳಿ, ಶೌಚಾಲಯ, ಇಂಟರ್ನೆಟ್‌ ಇನ್ನಿತರೆ ಸೌಕರ್ಯ ಬಳಸಲು ಒಂದು ರಾತ್ರಿಗೆ 25 ಲಕ್ಷ ರು.ನಂತೆ ಪಾವತಿಸಬೇಕು. ಒಟ್ಟಾರೆ 30 ದಿನಗಳ ಪ್ರವಾಸದಲ್ಲಿ ವಾಸ್ತವ್ಯಕ್ಕೇ ದಿನಕ್ಕೆ 7.5 ಕೋಟಿ ರು. ವೆಚ್ಚವಾಗುತ್ತದೆ. ಪ್ರಯಾಣ, ವಾಸ್ತವ್ಯ ಎರಡೂ ಸೇರಿದರೆ 407.5 ಕೋಟಿ ರು. ಖರ್ಚಾಗುತ್ತದೆ!

ಬಾಹ್ಯಾಕಾಶಕ್ಕೆ ಖಾಸಗಿ ವ್ಯಕ್ತಿಗಳ ಪ್ರವಾಸ ಇದೇ ಮೊದಲೇನಲ್ಲ. 2001ರಲ್ಲಿ ಅಮೆರಿಕದ ಉದ್ಯಮಿ ಡೆನ್ನಿಸ್‌ ಟಿಟೋ ಎಂಬುವರು 138 ಕೋಟಿ ರು. ಕೊಟ್ಟು ಬಾಹ್ಯಾಕಾಶಕ್ಕೆ ಹೋಗಿ ಬಂದಿದ್ದರು. ಅಲ್ಲಿಗೆ ಹೋದ ಮೊದಲ ಪ್ರವಾಸಿಗ ಎಂಬ ದಾಖಲೆಗೂ ಭಾಜನರಾಗಿದ್ದರು.