ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ಗೆ ಮಹಾರಾಷ್ಟ್ರದ ಪುಣೆಯಲ್ಲಿ ಆರು ತಿಂಗಳ ಕಾಲ ಈ ಯೋಜನೆಯನ್ನು ಪ್ರಾಯೋಗಿಕವಾಗಿ ನಡೆಸುವ ಜವಾಬ್ದಾರಿ ವಹಿಸಲಾಗಿದೆ.

ನವದೆಹಲಿ(ಜು.08): ಮೊಬೈಲ್ ಕಳ್ಳತನವಾದರೆ ಅಥವಾ ಕಳೆದುಹೋದರೆ ಆ ಮೊಬೈಲ್‌ನ ಎಲ್ಲ ಸೇವೆಗಳನ್ನು ರದ್ದುಪಡಿಸುವ ಹೊಸ ವ್ಯವಸ್ಥೆ ಅಭಿವೃದ್ಧಿ ಪಡಿಸಲು ಸರ್ಕಾರ ಚಿಂತಿಸುತ್ತಿದೆ. ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್‌ನ ಸಿಮ್ ತೆಗೆದರೂ ಅಥವಾ ಐಎಂಇಐ ನಂಬರ್ ಬದಲಾಯಿಸಿದರೂ ಯಾವುದೇ ನೆಟ್‌ವರ್ಕ್‌ನಲ್ಲಿ ಕಾರ್ಯ ನಿರ್ವಹಿಸದೆ, ಮೊಬೈಲ್ ನಿಷ್ಪ್ರಯೋಜಕವಾಗುವಂತೆ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗುತ್ತದೆ.

ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ಗೆ ಮಹಾರಾಷ್ಟ್ರದ ಪುಣೆಯಲ್ಲಿ ಆರು ತಿಂಗಳ ಕಾಲ ಈ ಯೋಜನೆಯನ್ನು ಪ್ರಾಯೋಗಿಕವಾಗಿ ನಡೆಸುವ ಜವಾಬ್ದಾರಿ ವಹಿಸಲಾಗಿದೆ. ಆ ಪ್ರಕಾರ, ಈ ಆರು ತಿಂಗಳಲ್ಲಿ ಕೇಂದ್ರ ಉಪಕರಣ ಗುರುತು ನೋಂದಣಿ (ಸಿಇಐಆರ್) ಎಂದು ಕರೆಯಲಾಗುವ ಹೊಸ ವ್ಯವಸ್ಥೆಯ ಸ್‌ಟಾವೇರ್ ಮತ್ತು ಅನುಷ್ಠಾನ ವಿಧಾನವನ್ನು ಅಭಿವೃದ್ಧಿ ಪಡಿಸಲಾಗುತ್ತದೆ.

ನಕಲಿ ಮೊಬೈಲ್ ಫೋನ್‌ಗಳು ಮತ್ತು ಕಳ್ಳತನ ತಡೆಯುವ ಗುರಿ ಸಿಇಐಆರ್ ವ್ಯವಸ್ಥೆ ಹೊಂದಿದೆ. ಎಲ್ಲ ಮೊಬೈಲ್‌ಗಳ ಇಐಎಂಇ ದತ್ತಾಂಶಗಳು ಸಿಇಐಆರ್ ಸಂಪರ್ಕ ಜತೆ ಸಂಯೋಜನೆ ಹೊಂದುವಂತೆ ಮಾಡಲು ಟೆಲಿಕಾಂ ಇಲಾಖೆ ಉದ್ದೇಶಿಸಿದೆ. ಅಲ್ಲದೆ, ಮೊಬೈಲ್‌ನಲ್ಲಿನ ಹಾರ್ಡ್‌ವೇರ್ ದತ್ತಾಂಶಗಳನ್ನೂ ಸಿಇಐಆರ್‌ಗೆ ಸಂಯೋಜಿಸಲಾಗುತ್ತದೆ.

ಸಿಇಐಆರ್ ಎಲ್ಲ ನೆಟ್‌ವರ್ಕ್ ಆಪರೇಟರ್‌ಗಳಿಗೆ ಕೇಂದ್ರೀಯ ವ್ಯವಸ್ಥೆಯಂತೆ ಕಾರ್ಯ ನಿರ್ವಹಿಸಲಿದೆ. ಹೀಗಾಗಿ ಸಿಮ್ ಬದಲಾಯಿಸಿ ಯಾವುದೇ ನೆಟ್‌ವರ್ಕ್ ಸಿಮ್ ಬಳಸಿದರೂ, ಅದನ್ನು ಸಿಇಐಆರ್ ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಲು ಇದು ಸಹಕರಿಸಲಿದೆ.