ಎಐ ಬಳಸಿ ವ್ಯಕ್ತಿಯೊಬ್ಬ ಸಾವಿರ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ, 50 ಸಂದರ್ಶನಗಳ ಅವಕಾಶ ಪಡೆದಿದ್ದಾನೆ. ಸ್ವಯಂಚಾಲಿತವಾಗಿ ರೆಸ್ಯೂಮ್, ಕವರ್ ಲೆಟರ್ ರಚಿಸಿ ಅರ್ಜಿ ಸಲ್ಲಿಸುವ ಎಐ ಬಾಟ್ ನಿರ್ಮಿಸಿದ್ದಾನೆ. ಈ ಸುಲಭ ವಿಧಾನದಿಂದ ಉದ್ಯೋಗ ಲಭ್ಯವಾದರೂ, ಮಾನವೀಯ ಸಂಬಂಧ ಕಡಿಮೆಯಾಗುವ ಭೀತಿ ವ್ಯಕ್ತವಾಗಿದೆ. ಉದ್ಯೋಗ ಅರ್ಜಿಗಳ ಯಾಂತ್ರೀಕರಣವು ವೃತ್ತಿಪರ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಮ್ಮ ಕೆಲಸವನ್ನು ಸುಲಭಗೊಳಿಸಿದೆ. ಮಕ್ಕಳು ತಮ್ಮ ಹೋಮ್ ವರ್ಕ್ ಎಐ ಸಹಾಯದಿಂದ ಮಾಡ್ತಿದ್ದಾರೆ. ದೊಡ್ಡವರ ಎಲ್ಲ ಕೆಲಸವನ್ನು ಎಐ ಸುಲಭಗೊಳಿಸಿದೆ. ರೆಸ್ಯೂಮ್ (Resume) ಸಿದ್ಧಪಡಿಸೋದ್ರಿಂದ ಹಿಡಿದು, ಲೆಟರ್ ಬರೆಯಲು, ಯಾವುದೇ ಒಪ್ಪಂದ ಅಥವಾ ಇತರ ದಾಖಲೆಗಳನ್ನು ರಚಿಸಲು ಎಐ ನಮಗೆ ಸಹಾಯ ಮಾಡ್ತಿದೆ. ಎಐ ಕಥೆ, ಕಾದಂಬರಿ, ಜೋಕ್ ಸೇರಿದಂತೆ ಫೋಟೋವರೆಗೆ ನಿಮಗೆ ಅಗತ್ಯವಿರುವ ಎಲ್ಲವನ್ನೂ ನೀಡುತ್ತದೆ. ಜನರು ಎಐ ಜೊತೆ ಚಾಟ್ ಮಾಡ್ತಾ ಸಮಯ ಕಳೆಯುತ್ತಿದ್ದಾರೆ. ಜೀವನದ ಮಹತ್ವದ ನಿರ್ಣಯಗಳನ್ನು ಎಐನಿಂದ ಕೇಳಿ ನಿರ್ಧರಿಸುವವರಿದ್ದಾರೆ. ಕೆಲ ದಿನಗಳ ಹಿಂದೆ ಎಐ ಪ್ರೀತಿಗೆ ಬಿದ್ದಿರೋದಾಗಿ ಹುಡುಗಿಯೊಬ್ಬಳು ಹೇಳಿಕೊಂಡಿದ್ದಳು. ಈಗ ವ್ಯಕ್ತಿಯೊಬ್ಬ ಈ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿಕೊಂಡು 1,000 ಜಾಬ್ (Job) ಗೆ ಅರ್ಜಿ ಸಲ್ಲಿಸಿದ್ದಾನೆ. ವಿಶೇಷ ಅಂದ್ರೆ ಎಐ, ಜಾಬ್ ಗೆ ಅರ್ಜಿ ಸಲ್ಲಿಸುತ್ತಿದ್ದ ಟೈಂನಲ್ಲಿ ವ್ಯಕ್ತಿ ನಿದ್ರೆ ಮಾಡ್ತಿದ್ದ.

ರೆಡ್ಡಿಟ್‌ (Reddit) ನಲ್ಲಿ ವ್ಯಕ್ತಿ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ. ಮನೆಯಲ್ಲಿ ತಯಾರಿಸಿದ ಕೃತಕ ಬುದ್ಧಿಮತ್ತೆಯ ಬಾಟ್ ಬಳಸಿ, ಜಾಬ್ ಹುಡುಕುವ ಪ್ರಯತ್ನ ನಡೆಸಿದ್ದಾನೆ. ಅದ್ರಲ್ಲಿ ಆತ ಯಶಸ್ವಿಯಾಗಿದ್ದಾನೆ. ರೆಡ್ಡಿಟ್ ನಲ್ಲಿ ಆತ ತನ್ನ ಎಐ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿದ್ದಾನೆ. ಎಐ ಬಾಟ್ ರಚನೆ ಮಾಡಿದ್ದೇನೆ. ಅದು ಅಭ್ಯರ್ಥಿಗಳ ಮಾಹಿತಿಯನ್ನು ಪರಿಶೀಲಿಸಿ, ಉದ್ಯೋಗದ ವಿವರವನ್ನು ಪರಿಶೀಲಿಸಿ, ರೆಸ್ಯೂಮ್ ಮತ್ತು ಕವರ್ ಲೆಟರ್ ರಚನೆ ಮಾಡಿ, ನೇಮಕಾತಿದಾರರು ಕೇಳುವ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರಿಸಿ, ಸ್ವಯಂಚಾಲಿತವಾಗಿ ಅರ್ಜಿ ಸಲ್ಲಿಸಲು ನೆರವಾಗುತ್ತದೆ ಎಂದು ಬರೆದಿದ್ದಾನೆ. 

90 ಗಂಟೆ ಕೆಲಸ: ಯಾವ ದೇಶದಲ್ಲಿ ವಾರಕ್ಕೆ ಗರಿಷ್ಠ ಗಂಟೆ ಕೆಲಸ ಅಂತಾ ಗೊತ್ತಿದ್ಯಾ?

ಅಂದ್ರೆ ಎಐ ಮೊದಲು ಖಾಲಿ ಇರುವ ಜಾಬ್ ಹುಡುಕುತ್ತೆ. ನಂತ್ರ ಅದಕ್ಕೆ ತಕ್ಕಂತೆ ನಿಮ್ಮ ರೆಸ್ಯೂಮ್ ಸಿದ್ಧಪಡಿಸುತ್ತೆ. ಆ ನಂತ್ರ ಅರ್ಜಿ ಭರ್ತಿ ಮಾಡುತ್ತೆ. ಎಐ ಮೂಲಕ ಅರ್ಜಿ ಸಲ್ಲಿಸಿದ್ದ ವ್ಯಕ್ತಿ ಹೆಚ್ಚಿನ ಲಾಭ ಪಡೆದಿದ್ದಾನೆ. ಕೇವಲ ಒಂದು ತಿಂಗಳಲ್ಲಿ 50 ಸಂದರ್ಶನಕ್ಕೆ ಆಹ್ವಾನ ಬಂದಿದೆ ಎಂದು ಆತ ಬರೆದುಕೊಂಡಿದ್ದಾನೆ. ರಾತ್ರಿಯಿಡಿ ಕೆಲಸ ಮಾಡುವಂತೆ ಎಐ ಪ್ರೋಗ್ರಾಮಿಂಗ್ ಮಾಡಿದ್ದ. ಅದು ರೆಸ್ಯೂಮ್ ಸಿದ್ಧಪಡಿಸಿ, ಸೂಕ್ತವಾಗುವ ಕೆಲಸಕ್ಕೆ ಅರ್ಜಿ ಸಲ್ಲಿಸಿತ್ತು.

ಎಐ ಲಾಭದ ಬಗ್ಗೆ ಪೋಸ್ಟ್ ಬರೆದಿರುವ ವ್ಯಕ್ತಿ ಅದ್ರಿಂದಾಗುವ ಸಮಸ್ಯೆಗಳ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾನೆ. ಎಐ ಉದ್ಯೋಗ ಒದಗಿಸುವಲ್ಲಿ ಸಾಕಷ್ಟು ಪರಿಣಾಮಕಾರಿಯಾದ್ರೂ ದುಡಿಯುವ ಜಗತ್ತಿಗೆ ಇದರ ಅರ್ಥವೇನೆಂದು ನಾನು ಯೋಚಿಸಬೇಕಾಗಿದೆ. ಈ ವಿಧಾನವು ತುಂಬಾ ಪರಿಣಾಮಕಾರಿಯಾಗಿದ್ದರೂ, ಉದ್ಯೋಗ ಅರ್ಜಿಗಳ ಯಾಂತ್ರೀಕರಣವು ವೃತ್ತಿಪರ ಸಂಬಂಧ, ಸ್ವರೂಪದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ನಾವು ಆಯ್ಕೆ ಪ್ರಕ್ರಿಯೆಯನ್ನು ಅತ್ಯುತ್ತಮವಾಗಿಸಲು ಪ್ರಯತ್ನಿಸುತ್ತಿದ್ದೇವೆ ಆದರೆ ಅದರಿಂದ ಕೆಲಸದ ಸ್ಥಳದಲ್ಲಿ ಮಾನವೀಯ ಅಂಶವನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಆತ ಬರೆದಿದ್ದಾರೆ. 

ನನ್ನ ಅಪ್ಪನಿಗೊಂದು ಕೆಲಸ ಕೊಡಿ: ಯುವತಿಯ ಮನ ಮಿಡಿಯುವ ಪೋಸ್ಟ್ ವೈರಲ್‌

ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಕೆಲವರು ಇದು ಮೋಸವೆಂದಿದ್ದಾರೆ. ಮತ್ತೆ ಕೆಲವರು ತಾವೂ ಇದೇ ರೀತಿ ಕೆಲಸಕ್ಕೆ ಸರ್ಜಿ ಸಲ್ಲಿಸಿದ್ದು, ಶೀಘ್ರದಲ್ಲಿ ರಿಪ್ಲೇ ಬಂದಿದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಮತ್ತೆ ಕೆಲವರು ಇದರಿಂದ ಆಗುವ ಲಾಭ ಮತ್ತು ನಷ್ಟಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಎಐ ಅನೇಕರ ಕೆಲಸ ಸುಲಭಗೊಳಿಸಿದ್ದು ಒಂದ್ಕಡೆಯಾದ್ರೆ ಇನ್ನೊಂದು ಕಡೆ ಅದು ದೊಡ್ಡ ಮಟ್ಟದಲ್ಲಿ ನಿರುದ್ಯೋಗ ಸೃಷ್ಟಿಸುವ ಭಯ ಎದುರಾಗಿದೆ. ಪ್ರತಿಯೊಂದು ಕಂಪನಿಯಲ್ಲೂ ಎಐ ಬಳಕೆ ಹೆಚ್ಚಾಗ್ತಿದ್ದು, ಜನರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.