- ಹತ್ತೇ ಹತ್ತು ವರ್ಷಗಳ ಹಿಂದೆ ಕನ್ನಡದಲ್ಲಿ ಸರ್ಚ್ ಮಾಡುವ ಅವಕಾಶಗಳೇ ಇರಲಿಲ್ಲ. ಕನ್ನಡ ಫೈಲುಗಳೂ ಇರಲಿಲ್ಲ
- ತಂತ್ರಜ್ಙಾನ ವಿಸ್ತಾರ ಆಗುತ್ತಿದ್ದಂತೆ ಕನ್ನಡದ ಆಕಾಶವೂ ಅವಕಾಶವೂ ವಿಸ್ತಾರಗೊಂಡಿದೆ.
ಇಪ್ಪತ್ತು ವರ್ಷಗಳ ಹಿಂದೆ ಡಿಜಿಟಲ್ ಕ್ಷೇತ್ರಕ್ಕೆ ಹೋಗುತ್ತೇವೆ ಅಂತ ಪತ್ರಕರ್ತರು ಹೇಳಿದಾಗ ನಕ್ಕವರೇ ಹೆಚ್ಚು. ಅಲ್ಲೇನಿದೆ ಭವಿಷ್ಯ ಅಂತ ಹೇಳಿದವರು ತಿರುಗಿ ನೋಡುವಂತೆ ವೆಬ್ ಜರ್ನಲಿಸಮ್ ಬೆಳೆದಿದೆ.
ಹಳ್ಳಿಗಳಲ್ಲೂ ನಾನೊಂದು ವೆಬ್ ಪತ್ರಿಕೆ ಮಾಡುತ್ತಿದ್ದೇನೆ ಅನ್ನುವವರ ಸಂಖ್ಯೆ ಹೆಚ್ಚಾಗಿದೆ. ಬಂಟ್ವಾಳದಂಥ ಪುಟ್ಟ ಊರಲ್ಲಿ, ಮೂಡುಬಿದರೆ, ಕೂಡ್ಲಿಗಿ, ಕೋಲಾರಗಳಲ್ಲೂ ವೆಬ್ ಜರ್ನಲಿಸಮ್ ತಲೆಯೆತ್ತಿದೆ. ಪೇಪರೂ ಇಲ್ಲದ, ಆಫೀಸೂ ಇಲ್ಲದ ಲ್ಯಾಪ್ಟಾಪೇ ಎಲ್ಲವೂ ಆಗಿರುವ ವೆಬ್ ಪತ್ರಿಕೋದ್ಯಮ ತನ್ನ ಬಾಹುಗಳನ್ನು ವಿಸ್ತರಿಸಿಕೊಂಡಿದೆ.
ರಾಜಕೀಯದ ಸುದ್ದಿ, ಸಿನಿಮಾ ಸುದ್ದಿ, ಕ್ರೈಮ್, ವಾಹನ ತಂತ್ರಜ್ಞಾನ, ಪ್ರವಾಸ- ಹೀಗೆ ಎಲ್ಲಕ್ಕೂ ವೆಬ್ ಪುರವಣಿಗಳೂ, ಪತ್ರಿಕೆಗಳೂ, ಮ್ಯಾಗಜಿನ್‌ಗಳೂ ತಲೆಯೆತ್ತಿವೆ. ನೀವು ಗೂಗಲ್ ಹುಡುಕಾಟದಲ್ಲಿ ಕನ್ನಡ ಯೂನಿಕೋಡ್ ಲಿಪಿಯಲ್ಲಿ ಚಿಕ್ಕಬಳ್ಳಾಪುರ ಎಂದು ಟೈಪಿಸಿದರೆ ಚಿಕ್ಕಬಳ್ಳಾಪುರಕ್ಕೆ ಸಂಬಂಧಿಸಿದ 2,90,000 ಫೈಲುಗಳು ಕೇವಲ 0.65 ಸೆಕೆಂಡುಗಳಲ್ಲಿ ತೆರೆದುಕೊಳ್ಳುತ್ತವೆ. ಇಂಗ್ಲಿಷಿನಲ್ಲಾದರೆ 17,10,000 ಲಿಂಕುಗಳು 0.64 ಸೆಕೆಂಡುಗಳಲ್ಲಿ ತೆರೆಯುತ್ತವೆ.
ಹತ್ತೇ ಹತ್ತು ವರ್ಷಗಳ ಹಿಂದೆ ಕನ್ನಡದಲ್ಲಿ ಸರ್ಚ್ ಮಾಡುವ ಅವಕಾಶಗಳೇ ಇರಲಿಲ್ಲ. ಕನ್ನಡ ಫೈಲುಗಳೂ ಇರಲಿಲ್ಲ. ಕನ್ನಡ ಕತೆ, ಕವಿತೆ, ಜಾನಪದ ಗೀತೆ, ಒಗಟು, ಮಕ್ಕಳ ಪದ್ಯ, ಹಾಡು, ಸಿನಿಮಾ, ಸಿನಿಮಾ ಸುದ್ದಿ, ನಿಮ್ಮನಮ್ಮೂರಿನ ಮಾಹಿತಿ, ಪ್ರಸಿದ್ಧ ವ್ಯಕ್ತಿಗಳ ವಿಚಾರ- ಎಲ್ಲವೂ ಈಗ ವೆಬ್ಸೈಟುಗಳಲ್ಲಿ ಸಿಗುತ್ತವೆ. ವೆಬ್ ಪತ್ರಿಕೆಗಳಲ್ಲಿ ಹಳ್ಳಿಹಳ್ಳಿಯ ಸುದ್ದಿಯೂ ಝಗಮಗಿಸುತ್ತದೆ.
ಮುದ್ರಣ ಮಾಧ್ಯಮದ ಪತ್ರಿಕೆಗಳು ಸ್ಥಳೀಯ ಸುದ್ದಿಗಳನ್ನು ಸ್ಥಳೀಯ ಆವೃತ್ತಿಗೆ ಮಾತ್ರ ಹಾಕುತ್ತಿದ್ದಾರೆ, ಅದು ರಾಜ್ಯಾದ್ಯಂತ ಎಲ್ಲರಿಗೂ ತಲುಪುತ್ತಿಲ್ಲ ಎಂಬ ಕೊರತೆಯನ್ನು ನೀಗಿದ್ದೇ ವೆಬ್ ಪೋರ್ಟಲ್ಗಳು. ಆನ್ಲೈನ್ ಪತ್ರಿಕೆಗಳು.
ಕನ್ನಡಕ್ಕೆ ಒದಗಿಬಂದ ಬ್ಲಾಗುಗಳು, ಡಾಟ್ಕಾಮ್ಗಳು, ಈಗ ಸಿಕ್ಕಿರುವ ಫೇಸ್ ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ನಂಥ ಅವಕಾಶಗಳ ಜೊತೆಗೇ ಕನ್ನಡವನ್ನು ವ್ಯಾಪಕವಾಗಿ ಪಸರಿಸುವಂಥ ಓದಿಸುವಂಥ ಕೆಲಸವನ್ನು ಮಾಡುತ್ತಿರುವುದು ವಾಟ್ಸ್ಯಾಪ್. ಪತ್ರಿಕೆಗಳ ಸುದ್ದಿಗಳೆಲ್ಲವೂ ವಾಟ್ಸ್ಯಾಪುಗಳ ಮೂಲಕವೇ ಕನ್ನಡಿಗರಿಗೆ ಮಾತ್ರವಲ್ಲ, ಕರ್ನಾಟಕದಲ್ಲಿರುವ ಕನ್ನಡೇತರರ ಫೋನಿಗೇ ಬಂದು ಬೀಳುತ್ತದೆ. ಅವರಿಗೂ ಕನ್ನಡ ಲಿಪಿ, ಕನ್ನಡದ ಸತ್ವದ ಪರಿಚಯವೂ ಆಗುತ್ತದೆ. ಇವತ್ತು ವಾಟ್ಸ್ಯಾಪ್ ಕೂಡ ಒಂದು ಪತ್ರಿಕೆಯಂತೆಯೇ ಕೆಲಸ ಮಾಡುತ್ತದೆ ಎಂದರೆ ತಪ್ಪೇನಿಲ್ಲ. ಹೀಗೆ ತಂತ್ರಜ್ಙಾನ ವಿಸ್ತಾರ ಆಗುತ್ತಿದ್ದಂತೆ ಕನ್ನಡದ ಆಕಾಶವೂ ಅವಕಾಶವೂ
ವಿಸ್ತಾರಗೊಂಡಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 1, 2018, 12:28 PM IST