ನವದೆಹಲಿ[ಏ.13]: ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪೆನಿ ಗೂಗಲ್ ಚಿನ್ನ MMTC-PAMP ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ Google Pay ಬಳಸುವ ಗ್ರಾಹಕರಿಗೆ ಆ್ಯಪ್ ಮೂಲಕ ಚಿನ್ನ ಖರೀದಿ ಹಾಗೂ ಮಾರಾಟ ಮಾಡುವ ಸೌಲಭ್ಯ ಕಲ್ಪಿಸಿದೆ. ಈಗಾಗಲೇ ಪೇಟಿಎಂ, ಮೊಬಿಕ್ವಿಕ್ ಹಾಗೂ ಫೋನ್ ಪೇ ಈ ಆ್ಯಪ್ ಗಳು ಇಂತಹ ಸೇವೆಗಳನ್ನು ನೀಡುತ್ತಿವೆ. ಇದೀಗ ಈ ಸೇವೆ ನೂತನವಾಗಿ  ಆರಂಭಿಸಿರುವ ಗೂಗಲ್ 'ದೇಶದ ಏಕಮಾತ್ರ LBAMಮಾತನ್ಯತೆ ಪಡೆದಿರುವ ಗೋಲ್ಡ್ ರಿಫೈನರಿ ಕಂಪೆನಿಯೊಂದಿಗಿನ ಸಹಭಾಗಿತ್ವದಲ್ಲಿ ಗೂಗಲ್ ಪೇ ಬಳಕೆದಾರರು ಶೇ. 99.99ರಷ್ಟು ಶುದ್ಧತೆಯ ಚಿನ್ನ ಖರೀದಿಸಬಹುದು' ಎಂದು ತಿಳಿಸಿದೆ.

ಗೂಗಲ್ ಪೇ ಆ್ಯಪ್ ನ ಭಾರತದ ನಿರ್ದೆಶಕ ಅಂಬರೀಶ್ ಕನ್ಗೆ ಈ ವಿಚಾರವಾಗಿ ಮಾತನಾಡುತ್ತಾ 'ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಚಿನ್ನ ಪ್ರಮುಖ ಪಾತ್ರ ವಹಿಸುತ್ತದೆ. ಚಿನ್ನ ಖರೀದಿಯಲ್ಲಿ ಭಾರತ ಎರಡಣೆ ಅತಿ ದೊಡ್ಡ ರಾಷ್ಟ್ರವಾಗಿದೆ. ಭಾರತೀಯರು ಅಕ್ಷಯ ತೃತೀಯ, ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳ ಸಂದರ್ಭದಲ್ಲಿ ಚಿನ್ನ ಖರೀದಿಸುತ್ತಾರೆ' ಎಂದಿದ್ದಾರೆ. ಆ್ಯಪ್ ಬಳಕೆದಾರರು ಎಷ್ಟು ಮೌಲ್ಯದ ಚಿನ್ನ ಬೇಕಾದರೂ ಖರೀದಿಸಬಹುದು ಹಾಗೂ MMTC-PAMP ಅಕೌಂಟ್ ನಲ್ಲಿ ಸೇಫ್ ಆಗಿ ಇಡಬಹುದು.

ಗ್ರಾಹಕರು ತಾವು ಖರೀದಿಸಿದ ಈ ಚಿನ್ನವನ್ನು ಯಾವಾಗ ಬೇಕಾದರೂ ಹೊಸ ಮೌಲ್ಯಕ್ಕೆ ಮಾರಾಟ ಮಾಡಬಹುದು. ಪ್ರತಿ ನಿಮಿಷಕ್ಕೂ ಬದಲಾಗುವ ಹೊಸ ದರವನ್ನು ಆ್ಯಪ್ ನಲ್ಲಿ ನೋಡಬಹುದು.