ಇನ್ಮುಂದೆ ಫೇಸ್‌ಬುಕ್ ಲಾಗಿನ್ ಆಗೋದು ಅಷ್ಟು ಸುಲಭವಲ್ಲ

Facebook login to be changed soon
Highlights

- ಶೀಘ್ರದಲ್ಲೇ ಫೇಸ್ಬುಕ್‌ ಲಾಗಿನ್‌, ಭದ್ರತಾ ವ್ಯವಸ್ಥೆಗಳು ಬದಲು

- ಬಳಕೆದಾರರ ವೈಯಕ್ತಿಕ ವಿವರ ಸೋರಿಕೆ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಳ

- 3 ಪ್ರಮುಖ ಬದಲಾವಣೆಗೆ ನಿರ್ಧಾರ: ಮಾರ್ಕ್ ಜುಕರ್‌ಬರ್ಗ್‌

ವಾಷಿಂಗ್ಟನ್‌/ ನವದೆಹಲಿ: ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾದ ಹಾಗೂ ದುರ್ಬಳಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಫೇಸ್‌ಬುಕ್‌ನ ಲಾಗಿನ್‌ ವ್ಯವಸ್ಥೆ ಹಾಗೂ ಭದ್ರತಾ ಲಕ್ಷಣಗಳನ್ನು ಬದಲಿಸಲು ಜಗತ್ತಿನ ನಂ.1 ಸಾಮಾಜಿಕ ಜಾಲತಾಣ ಕಂಪನಿಯ ಆಡಳಿತ ಮಂಡಳಿ ನಿರ್ಧರಿಸಿದೆ.

ಮುಂದಿನ ವಾರದಿಂದಲೇ ಫೇಸ್‌ಬುಕ್‌ ಬಳಕೆದಾರರಿಗೆ ಈ ಬದಲಾವಣೆಗಳು ಗೋಚರಿಸಲು ಆರಂಭವಾಗುತ್ತದೆ. ಇನ್ನುಮುಂದೆ ಬಳಕೆದಾರರನ್ನು ಕೇಳದೆ ಯಾವುದೇ ಮೂರನೇ ವ್ಯಕ್ತಿಯು ಅವರ ಮಾಹಿತಿಯನ್ನು ಬಳಕೆ ಮಾಡಿಕೊಳ್ಳಲು ಯಾವ ರೀತಿಯಲ್ಲೂ ಸಾಧ್ಯವಾಗದಂತಹ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕಂಪನಿಯ ಸಿಇಒ ಮಾರ್ಕ್ ಜುಕರ್‌ಬರ್ಗ್‌ ಮಾಹಿತಿ ನೀಡಿದ್ದಾರೆ.

ಹಗರಣದ ಹಿನ್ನೆಲೆಯಲ್ಲಿ ಸುದೀರ್ಘ ಬ್ಲಾಗ್‌ಪೋಸ್ಟ್‌ ಬರೆದಿರುವ ಅವರು, ಈಗಾಗಲೇ ಆಗಿರುವ ವಂಚನೆಗೆ ಪರಿಹಾರ ರೂಪದಲ್ಲಿ ತಾವು ಕೈಗೊಳ್ಳಲಿರುವ ಕ್ರಮಗಳು ಹಾಗೂ ಇನ್ನುಮುಂದೆ ಹೀಗಾಗದಂತೆ ನೋಡಿಕೊಳ್ಳಲು ಫೇಸ್‌ಬುಕ್‌ನಲ್ಲಿ ತರಲಿರುವ ಬದಲಾವಣೆಗಳ ಬಗ್ಗೆ ವಿವರ ನೀಡಿದ್ದಾರೆ.

ಪ್ರಮುಖವಾಗಿ 3 ಬದಲಾವಣೆಗಳನ್ನು ಮಾಡುವುದಾಗಿ ಜುಕರ್‌ಬರ್ಗ್‌ ಹೇಳಿದ್ದು, ಅವು ಇಂತಿವೆ:

1. ಲಾಗಿನ್‌ ವ್ಯವಸ್ಥೆಯನ್ನು ಬದಲಿಸುತ್ತೇವೆ. ಹೊಸ ವ್ಯವಸ್ಥೆಯಲ್ಲಿ ಯಾವುದೇ ಆ್ಯಪ್‌ಗಳು ಫೇಸ್‌ಬುಕ್‌ ಬಳಕೆದಾರರ ಹೆಸರು, ಪ್ರೊಫೈಲ್‌ ಫೋಟೋ ಹಾಗೂ ಇ-ಮೇಲ್‌ ವಿಳಾಸವನ್ನು ಮಾತ್ರ ಪಡೆಯಲು ಸಾಧ್ಯವಾಗುತ್ತದೆ. ಬೇರಾವುದೇ ಮಾಹಿತಿ ಬೇಕಿದ್ದರೆ ಆ್ಯಪ್‌ ಡೆವಲಪರ್‌ಗಳು ಫೇಸ್‌ಬುಕ್ಕನ್ನೇ ಕೇಳಬೇಕು.

2. 2014ರಲ್ಲಿ ನಾವು ಭದ್ರತಾ ವ್ಯವಸ್ಥೆಯನ್ನು ಬದಲಿಸುವುದಕ್ಕಿಂತ ಮೊದಲು ಫೇಸ್‌ಬುಕ್‌ನಿಂದ ಸಾವಿರಾರು ಆ್ಯಪ್‌ಗಳು ಪಡೆದುಕೊಂಡಿರುವ ಬಳಕೆದಾರರ ಮಾಹಿತಿಯ ಬಗ್ಗೆ ತನಿಖೆ ನಡೆಸುತ್ತೇವೆ. ಈ ಬಗ್ಗೆ ವಿಸ್ತೃತ ಆಡಿಟ್‌ ನಡೆಸಿ, ಸಂಶಯಾಸ್ಪದ ಆ್ಯಪ್‌ಗಳನ್ನು ನಿಷೇಧಿಸುತ್ತೇವೆ. ತಪಾಸಣೆಗೆ ಯಾವುದಾದರೂ ಆ್ಯಪ್‌ಗಳು ಒಪ್ಪದಿದ್ದರೆ ಆ ಆ್ಯಪ್‌ಗಳು ಏನೇನು ಮಾಹಿತಿ ಪಡೆದುಕೊಂಡಿವೆ ಎಂಬುದನ್ನು ಬಳಕೆದಾರರಿಗೆ ತಿಳಿಸುತ್ತೇವೆ.

3. ಮುಂದಿನ ತಿಂಗಳಿನ ಹೊತ್ತಿಗೆ ಪ್ರತಿಯೊಬ್ಬ ಫೇಸ್‌ಬುಕ್‌ ಬಳಕೆದಾರರ ನ್ಯೂಸ್‌ಫೀಡ್‌ನ ಮೇಲ್ಗಡೆ ಅವರು ಬಳಸುತ್ತಿರುವ ಆ್ಯಪ್‌ಗಳ ಮಾಹಿತಿಯನ್ನು ಒಂದೇ ಕಡೆ ನೋಡಲು ಅನುಕೂಲವಾಗುವ ಟೂಲ್‌ ನೀಡುತ್ತೇವೆ. ಅದನ್ನು ನೋಡಿ ಜನರು ತಮಗೆ ಸಂಬಂಧಿಸಿದ ಯಾವ್ಯಾವ ಮಾಹಿತಿಯನ್ನು ಯಾವ್ಯಾವ ಆ್ಯಪ್‌ಗಳು ಪಡೆದುಕೊಂಡಿವೆ ಎಂಬುದನ್ನು ಗಮನಿಸಿ, ಅಗತ್ಯವಿಲ್ಲದ ಆ್ಯಪ್‌ಗಳಿಂದ ಹೊರಬರಬಹುದು.

loader