ನವದೆಹಲಿ(ಸೆ.05): ಚೀನಾದ ಪಬ್‌ಜಿ ಮೊಬೈಲ್‌ ಆ್ಯಪ್‌ ನಿಷೇಧ ಆದ ಬೆನ್ನಲ್ಲೇ ಬೆಂಗಳೂರು ಮೂಲದ ಎನ್‌ಕೋರ್‌ ಗೇಮ್ಸ್‌ ಕಂಪನಿ ಫೌ-ಜಿ ಎಂಬ ಹೆಸರಿನ ಮೊಬೈಲ್‌ ಗೇಮ್‌ವೊಂದನ್ನು ಸದ್ಯದಲ್ಲೇ ಬಿಡುಗಡೆ ಮಾಡಲು ಸಜ್ಜಾಗಿದೆ. ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಈ ಆ್ಯಪ್‌ನಲ್ಲಿ ಹೂಡಿಕೆ ಮಾಡಿದ್ದು, ಪ್ರಚಾರ ರಾಯಭಾರಿ ಆಗಿದ್ದಾರೆ.

‘ಎಫ್‌ಎಯು: ಜಿ’ (ಫಿಯರ್‌ಲೆಸ್‌ ಆ್ಯಂಡ್‌ ಯುನೈಟೆಡ್‌: ಗಾರ್ಡ್ಸ್) ಹೆಸರಿನ ಈ ಆ್ಯಪ್‌ ಅಕ್ಟೋಬರ್‌ ಅಂತ್ಯದ ವೇಳೆಗೆ ಬಿಡುಗಡೆ ಆಗುವ ನಿರೀಕ್ಷೆ ಇದೆ. ಪಬ್‌ಜಿ ರೀತಿ ಇಬ್ಬರಿಗಿಂತ ಹೆಚ್ಚಿನ ಜನರು ಆಡಬಹುದಾದ ಯುದ್ಧ ಗೇಮ್‌ ಇದಾಗಿದೆ. ಈ ಆಟವನ್ನು ಭಾರತೀಯ ಭದ್ರತಾ ಪಡೆಗಳ ನೈಜ ಸಾಹಸಮಯ ಸನ್ನಿವೇಶವನ್ನು ಆಧರಿಸಿ ರೂಪಿಸಲಾಗಿದೆ.

ಇದೇ ವೇಳೆ ಫೌ-ಜಿ ಆ್ಯಪ್‌ ಬಗ್ಗೆ ಟ್ವೀಟ್‌ ಮಾಡಿರುವ ನಟ ಅಕ್ಷಯ್‌ ಕುಮಾರ್‌, ‘ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಅಭಿಯಾನವನ್ನು ಬೆಂಬಲಿಸುವ ಆ್ಯಕ್ಷನ್‌ ಗೇಮ್‌ ಫೌ-ಜಿಯನ್ನು ಪರಿಚಯಿಸಲು ಹೆಮ್ಮೆ ಎನಿಸುತ್ತಿದೆ. ಮನರಂಜನೆಯ ಜೊತೆಗೆ ಆಟಗಾರರು ಭಾರತೀಯ ಯೋಧರ ಬಲಿದಾನದ ಬಗ್ಗೆ ತಿಳಿಯಲಿದ್ದಾರೆ. ಈ ಆ್ಯಪ್‌ನಿಂದ ದೊರೆಯುವ ಶೇ.20ರಷ್ಟುಆದಾಯವನ್ನು ಭಾರತ್‌ ವೀರ್‌ ಟ್ರಸ್ಟ್‌ಗೆ ನೀಡಲಾಗುವುದು’ ಎಂದು ಹೇಳಿದ್ದಾರೆ.