ಕೇಬಲ್ ಆಪರೇಟರ್ ವಿರುದ್ಧ ಗ್ರಾಹಕರು ಗರಂ | ತಮ್ಮ ಆಯ್ಕೆಯ ಚಾನಲ್ ನೀಡುತ್ತಿಲ್ಲ ಎಂದು ಗ್ರಾಹಕರು ಆಕ್ರೋಶ | ಟ್ರಾಯ್‌ನ ನೂತನ ನೀತಿ ಅನ್ವಯ ದೇಶಾದ್ಯಂತ ಚಾನಲ್ ಆಯ್ಕೆ, ಬದಲಾವಣೆ ಪ್ರಕ್ರಿಯೆಗಳು ಜರುಗುತ್ತಿವೆ.
ಬೆಂಗಳೂರು (ಮಾ. 07): ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ನೂತನ ಕೇಬಲ್ ಮತ್ತು ಡಿಟಿಎಚ್ ನೀತಿ ಅನ್ವಯ ಗ್ರಾಹಕರೇ ಚಾನಲ್ ಆಯ್ಕೆ ಮಾಡುವ ಪ್ರಕ್ರಿಯೆ ಗೊಂದಲದ ಗೂಡಾಗಿದೆ. ಚಾನಲ್ ಪ್ರಸಾರದಲ್ಲಿ ವ್ಯತ್ಯವಾಗುತ್ತಿರುವುದರಿಂದ ಗ್ರಾಹಕರು ಕೇಬಲ್ ಆಪರೇಟರ್‌ಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಕೇಬಲ್ ಆಪರೇಟರ್‌ಗಳು ತಾವು ಆಯ್ಕೆ ಮಾಡಿದ ಚಾನಲ್ ನೀಡುತ್ತಿಲ್ಲವೆಂದು ಗ್ರಾಹಕರು ಆರೋಪಿಸುತ್ತಿದ್ದಾರೆ. ಇದರಲ್ಲಿ ನಮ್ಮ ತಪ್ಪಿಲ್ಲ. ತಾಂತ್ರಿಕ ಸಮಸ್ಯೆಯಿಂದ ತೊಂದರೆ ಉಂಟಾಗುತ್ತಿದೆ ಎಂದು ಕೇಬಲ್ ಆಪರೇಟರ್‌ಗಳು ಹೇಳುತ್ತಾರೆ. ಟ್ರಾಯ್‌ನ ನೂತನ ನೀತಿ ಅನ್ವಯ ದೇಶಾದ್ಯಂತ ಚಾನಲ್ ಆಯ್ಕೆ, ಬದಲಾವಣೆ ಪ್ರಕ್ರಿಯೆಗಳು ಜರುಗುತ್ತಿವೆ.
ಇದರಿಂದ ನೆಟ್‌ವರ್ಕ್ ಜಾಮ್ ಉಂಟಾಗಿ ಸರ್ವರ್ ಡೌನ್ ಆಗುತ್ತಿದೆ. ಈ ಸಮಸ್ಯೆ ಬಗೆಹರಿಸಬೇಕಾದ ಎಂಎಸ್‌ಓಗಳು ಸಬೂಬು ಹೇಳಿಕೊಂಡು ದಿನ ದೂಡುತ್ತಿದ್ದಾರೆ. ಇದರಿಂದ ಗ್ರಾಹಕರು ಕೇಬಲ್ ಆಪರೇಟರ್‌ಗಳೊಂದಿಗೆ ಜಗಳ ಮಾಡುತ್ತಿದ್ದಾರೆ ಎಂದು ಕೇಬಲ್ ಆಪರೇಟರ್‌ಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಗ್ರಾಹಕರು ಮೂಲದರ .130 ಹಾಗೂ ಶೇ.18ರಷ್ಟುಜಿಎಸ್‌ಟಿ ಸೇರಿ .153 ಪಾವತಿಸಿ ನೂರು ಉಚಿತ ಚಾನಲ್‌ಗಳನ್ನು ನೋಡಬಹುದು. ನಂತರದಲ್ಲಿ ತಮ್ಮಿಷ್ಟದ ಪ್ರತಿ ಚಾನಲ್ ಪಡೆಯಲು ನಿಗದಿತ ಮೊತ್ತ ಪಾವತಿಸಬೇಕು ಎಂದು ಸೂಚಿಸಲಾಗಿತ್ತು. ಇದು ಗ್ರಾಹಕರಲ್ಲಿ ಗೊಂದಲ ಉಂಟು ಮಾಡಿದ್ದರಿಂದ ಟ್ರಾಯ್, ಎಂಎಸ್‌ಓಗಳಿಗೆ 250 ರಿಂದ 450 ರು. ವರೆಗೂ ಚಾನಲ್‌ಗಳ ಪ್ಯಾಕೇಜ್ ರೂಪಿಸಲು ಅವಕಾಶ ನೀಡಿತ್ತು. ಅದರಂತೆ ಎಂಎಸ್‌ಓಗಳು ಪ್ಯಾಕೇಜ್ ರೂಪಿಸಿವೆ. ಕೇಬಲ್ ಆಪರೇಟರ್‌ಗಳು ಗ್ರಾಹಕರಿಗೆ ಈ ಪ್ಯಾಕೇಜ್‌ಗಳ ಬಗ್ಗೆ ಮಾಹಿತಿ ನೀಡಿ, ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.
ಸರ್ವರ್ ಡೌನ್:
ಸರ್ವರ್ ಪದೇ ಪದೇ ಡೌನ್ ಆಗುತ್ತಿರುವುದರಿಂದ ಗ್ರಾಹಕರು ಕೇಳಿದ ಚಾನಲ್ ಹಾಕಿಕೊಡಲು ಸಾಧ್ಯವಾಗುತ್ತಿಲ್ಲ. ರಾಜ್ಯಾದ್ಯಂತ ಇದೇ ಸಮಸ್ಯೆಯಾಗಿದೆ. ಗ್ರಾಹಕರು ಆಯ್ಕೆ ಮಾಡಿದ ಚಾನಲ್ ಹಾಕಿಕೊಡಲು ಎರಡರಿಂದ ಮೂರು ತಾಸು ಹಿಡಿಯುತ್ತಿದೆ. ಈ ತಾಂತ್ರಿಕ ಸಮಸ್ಯೆ ಕೆಲಕಡೆ ಏಕಾಏಕಿ ಚಾನಲ್ ಪ್ರಸಾರ ಬಂದ್ ಆಗುತ್ತಿದೆ. ಈ ಸಮಸ್ಯೆಗಳ ಬಗ್ಗೆ ಎಂಎಸ್‌ಓಗಳ ಗಮನಕ್ಕೆ ತಂದರೂ ಅವರು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ.
ಚಾನಲ್ ವೀಕ್ಷಣೆಯಲ್ಲಿ ಉಂಟಾಗುತ್ತಿರುವ ಅಡಚಣೆಗೆ ಗ್ರಾಹಕರು ಕೇಬಲ್ ಆಪರೇಟರ್‌ಗಳನ್ನು ಪ್ರಶ್ನಿಸುತ್ತಿದ್ದಾರೆ. ಎಷ್ಟೋ ಕಡೆ ಕೇಬಲ್ ಆಪರೇಟರ್‌ಗಳ ಮೇಲೆ ಹಲ್ಲೆಗೆ ಮುಂದಾಗಿರುವ ನಿದರ್ಶನಗಳಿವೆ. ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂಬುದು ತಿಳಿಯುತ್ತಿಲ್ಲ ಎಂದು ರಾಜ್ಯ ಕೇಬಲ್ ಆಪರೇಟರ್‌ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಹಕರಿಗೆ ಹೊರೆ:
ಟ್ರಾಯ್ ರೂಪಿಸಿರುವ ಈ ಹೊಸ ವ್ಯವಸ್ಥೆ ಗ್ರಾಹಕರು ಹಾಗೂ ಕೇಬಲ್ ಆಪರೇಟರ್‌ಗಳಿಗೆ ಹೊರೆಯಾಗಿ ಪರಿಣಮಿಸಿದೆ. 300ರಿಂದ 350 ರು. ಪಾವತಿಸಿ 400ರಿಂದ 450 ಚಾನಲ್ ವೀಕ್ಷಿಸುತ್ತಿದ್ದ ಗ್ರಾಹಕರು ಈಗ 150 ಚಾನಲ್‌ಗಳಿಗೆ ಇಷ್ಟುಮೊತ್ತ ಪಾವತಿಸುವಂತಾಗಿದೆ. ಕೇಂದ್ರ ಸರ್ಕಾರ ಕಾರ್ಪೊರೇಟ್ ಕುಳಗಳ ಹಿತಕಾಯಲು ಇಂತಹ ಅವೈಜ್ಞಾನಿಕ ನೀತಿಗಳನ್ನು ಜಾರಿಗೊಳಿಸುತ್ತಿದೆ ಎಂದು ಕೇಬಲ್ ಆಪರೇಟರ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 7, 2019, 9:15 AM IST