ದೆಹಲಿ(ಸೆ.04): ವಾಹನ ಚಾಲಕರ ಅಜಾಗರೂಕತೆಯಿಂದ ಸಂಭವಿಸೋ ಅಪಘಾತಗಳಿಗೆ ವಿಮೆ ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.  ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಅಪಘಾತಕ್ಕೀಡಾದರೆ ಜೀವಕ್ಕೂ ಅಪಾಯ ಇತ್ತ ವಿಮೆಯೂ ಇಲ್ಲ.

ಅತೀ ವೇಗದ ವಾಹನ ಚಲಾವಣೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಲಾವಣೆ, ಸೀಟ್ ಬೆಲ್ಟ್ ಹಾಕದೇ, ಹೆಲ್ಮೆಟ್ ಧರಿಸದೆ, ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಸಿಗ್ನಲ್ ಉಲ್ಲಂಘಿಸಿ ಅಪಘಾತವಾದರೆ ಆ ವ್ಯಕ್ತಿಗೆ ವಿಮೆ ಸಿಗೋದಿಲ್ಲ. ಹೀಗಾಗಿ ವಾಹನ ಚಾಲಕರು ಎಚ್ಚರ ವಹಿಸಬೇಕು.

2012ರಲ್ಲಿ ಕಾರು ಅಪಘಾತದಲ್ಲಿ ಚಾಲಕ ದಿಲಿಪ್ ಭೌಮಿಕ್ ಮೃತಪಟ್ಟಿದ್ದರು. ಮೃತ ದಿಲೀಪ್ ಕುಟುಂಬಕ್ಕೆ 10.57 ಲಕ್ಷ ವಿಮೆ ನೀಡುವಂತೆ ತ್ರಿಪುರ ಹೈಕೋರ್ಟ್ ವಿಮಾ ಕಂಪೆನಿಗಳಿಗೆ ಆದೇಶಿಸಿತ್ತು.

ಹೈಕೋರ್ಟ್ ಆದೇಶ ಪ್ರಶ್ನಿಸಿ ವಿಮಾ ಕಂಪೆನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುದೀರ್ಘ ವಿಚಾರಣೆ ಬಳಿಕ ಇದೀಗ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ದಿಲೀಪ್ ಭೌಮಿಕ್ ಅಜಾಗರೂಕತೆಯಿಂದ ಕಾರು ಚಲಾಯಿಸಿ ಮೃತಪಟ್ಟಿದ್ದಾರೆ ಅನ್ನೋದು ಸಾಬೀತಾಗಿತ್ತು. ಹೀಗಾಗಿ ದಿಲೀಪ್ ಕುಟುಂಬಕ್ಕೆ ವಿಮೆ ಮೊತ್ತ ಪಾವತಿಸಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.