ಮಂಗಳೂರು (ಜೂ. 04):  ಆರ್‌ಬಿಐ ನಿರ್ದೇಶನದಂತೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸರ್ಕಾರಿ, ಖಾಸಗಿ ಸೇರಿದಂತೆ ಎಲ್ಲ ಬ್ಯಾಂಕ್‌ಗಳು ಚಿಪ್‌ ಇರುವ ಹೊಸ ಎಟಿಎಂ ಕಾರ್ಡ್‌ಗಳನ್ನು ಗ್ರಾಹಕರಿಗೆ ನೀಡುತ್ತಿವೆ. ಆದರೆ ಈ ಕಾರ್ಡ್‌ನಲ್ಲಿ ಗ್ರಾಹಕರ ದುಡ್ಡಿಗೆ ಕನ್ನ ಹಾಕುವ ಮತ್ತು ಅವರ ಬ್ಯಾಂಕ್‌ ಅಕೌಂಟ್‌ ಮಾಹಿತಿ ಹ್ಯಾಕ್‌ ಮಾಡಬಹುದಾದ ಹೊಸ ತಂತ್ರಜ್ಞಾನವೂ ಅಡಕವಾಗಿದ್ದು, ಭವಿಷ್ಯದ ದಿನಗಳಲ್ಲಿ ಇವುಗಳ ದುರುಪಯೋಗ ಮಾಡುವ ಸಾಧ್ಯತೆಗಳ ಕುರಿತು ತಂತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಈಗ ನೀಡುತ್ತಿರುವ ಚಿಪ್‌ ಬೇಸ್ಡ್‌ ಎನ್‌ಎಫ್‌ಸಿ (ನಿಯರ್‌ ಫೀಲ್ಡ್‌ ಕಮ್ಯೂನಿಕೇಶನ್‌) ಎಟಿಎಂ ಕಾರ್ಡ್‌ಗಳನ್ನು ಸ್ವೈಪ್‌ ಮಾಡದೆ ದಿನಕ್ಕೆ ಗರಿಷ್ಠ 2 ಸಾವಿರ ರು. ಹಣ ವರ್ಗಾಯಿಸುವಂಥ ಸ್ವೈಪಿಂಗ್‌ ಮೆಶಿನ್‌ಗಳು ಬಂದಿವೆ ಎಂಬುದೇ ಆತಂಕಕ್ಕೆ ಕಾರಣ.

ಕಾರ್ಯನಿರ್ವಹಣೆ ಹೇಗೆ?:

ಹಿಂದೆ ಬ್ಯಾಂಕ್‌ಗಳು ಮ್ಯಾಗ್ನೆಟಿಕ್‌ ಸ್ಟ್ರಿಪ್‌ ಇರುವಂಥ ಎಟಿಎಂ ಕಾರ್ಡ್‌ಗಳನ್ನು ನೀಡುತ್ತಿದ್ದವು. ಅವುಗಳನ್ನು ಹ್ಯಾಕ್‌ ಮಾಡುವ ಪ್ರಕರಣಗಳು ಹೆಚ್ಚಿದ ಬಳಿಕ ಆರ್‌ಬಿಐ ನಿರ್ದೇಶನದ ಮೇರೆಗೆ ಅವುಗಳ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಬಳಿಕ ಚಿಪ್‌ ಬೇಸ್ಡ್‌ ಕಾರ್ಡ್‌ ಅಥವಾ ಚಿಪ್‌ ಬೇಸ್ಡ್‌ ಎನ್‌ಎಫ್‌ಸಿ ಕಾರ್ಡ್‌ಗಳನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ನೀಡುತ್ತಿವೆ.

ಈ ತಂತ್ರಜ್ಞಾನಕ್ಕೆ ತಕ್ಕುದಾಗಿ ಅನೇಕ ಕಂಪನಿಗಳು ತಯಾರಿಸಿರುವ ಹೊಸ ಸ್ವೈಪಿಂಗ್‌ ಮೆಶಿನ್‌ಗಳಿಂದ ದಿನಕ್ಕೆ 2 ಸಾವಿರ ರು.ವರೆಗಿನ ಹಣ ವರ್ಗಾವಣೆಗೆ ಎನ್‌ಎಫ್‌ಸಿ ಕಾರ್ಡ್‌ಗಳನ್ನು ಸ್ವೈಪ್‌ ಮಾಡಬೇಕಿಲ್ಲ. ಕಾರ್ಡ್‌ ಅನ್ನು ಸ್ವೈಪಿಂಗ್‌ ಮೆಶಿನ್‌ಗೆ 5 ಇಂಚು ಹತ್ತಿರ ತಂದರೂ ಸಾಕು, ಸ್ವೈಪಿಂಗ್‌ ಯಂತ್ರದಲ್ಲಿರುವ ರೀಡರ್‌, ಕಾರ್ಡ್‌ನಲ್ಲಿರುವ ಚಿಪ್‌ ರೀಡ್‌ ಮಾಡಿ ಸ್ವಯಂ ಚಾಲಿತವಾಗಿ ನಿಗದಿತ ಮೊತ್ತ ವರ್ಗಾವಣೆಯಾಗುವಂತೆ ಮಾಡುತ್ತದೆ. ರೇಡಿಯೊ ಸಿಗ್ನಲ್‌ ತಂತ್ರಜ್ಞಾನದ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ.

ಮೊಬೈಲ್‌ನಿಂದಲೂ ಹ್ಯಾಕ್‌ ಸಾಧ್ಯ!:

ಎನ್‌ಎಫ್‌ಸಿ ರೀಡರ್‌ ಇರುವ ಮೊಬೈಲ್‌ನ್ನು ‘ಟ್ವೀಕ್‌’ ಮಾಡಿ ನಿಗದಿತ ಸಾಫ್ಟ್‌ವೇರ್‌ (ಹೆಸರು ರಹಸ್ಯವಾಗಿಡಲಾಗಿದೆ) ಅಳವಡಿಸಿಕೊಂಡರೆ, ಯಾವುದೇ ಎಟಿಎಂ ಕಾರ್ಡ್‌ನಿಂದಲೂ ಮಾಹಿತಿ ಹ್ಯಾಕ್‌ ಮಾಡಿ ದುರುಪಯೋಗ ಮಾಡಬಹುದು ಎಂದು ಎಂದು ಪ್ರೊಫೆಸರ್‌ ಮತ್ತು ಸೈಬರ್‌ ಸೆಕ್ಯುರಿಟಿ ತಜ್ಞರಾದ ಡಾ.ಅನಂತ ಪ್ರಭು ಜಿ. ಹೇಳುತ್ತಾರೆ.

ಈಗ ಸಮಸ್ಯೆ ಏನೆಂದರೆ, ಇಂತಹ ಕಾರ್ಡ್‌ ಯಾರ ಜೇಬಲ್ಲೇ ಇರಲಿ, ಪರ್ಸಲ್ಲೇ ಇರಲಿ, ಸ್ವೈಪಿಂಗ್‌ ಮೆಶಿನ್‌ ಹತ್ತಿರ ತಂದು ಹಣ ವರ್ಗಾಯಿಸಬಹುದು. ಬಸ್‌ಗಳಲ್ಲಿ, ಜನಜಂಗುಳಿ ಜಾಸ್ತಿ ಇರುವಲ್ಲಿ ಇಂತಹ ವ್ಯವಸ್ಥೆಯಿಂದ ದುರುಪಯೋಗ ಆಗುವ ಸಾಧ್ಯತೆ ಇಲ್ಲದಿಲ್ಲ. ಹಣ ವರ್ಗಾವಣೆಯಾದ ಕೂಡಲೆ ಗ್ರಾಹಕರ ಮೊಬೈಲ್‌ಗೆ ಎಸ್‌ಎಂಎಸ್‌ ಬಂದರೂ ಮತ್ತೆ ನಮ್ಮ ಖಾತೆಗೆ ವರ್ಗಾಯಿಸಿಕೊಳ್ಳುವುದು ದೊಡ್ಡ ಕಿರಿಕಿರಿಯೇ ಎನ್ನುತ್ತಾರವರು.

ಕಾರ್ಡ್‌ನ್ನು ಆರ್‌ಎಫ್‌ಐಡಿ ವ್ಯಾಲೆಟ್‌ನಲ್ಲಿಡಿ!

ಹೊಸ ಎಟಿಎಂ ಕಾರ್ಡ್‌ಗಳಿಂದ ದುರುಪಯೋಗ ಆಗದಂತೆ ಮಾಡಬೇಕಾದರೆ ಎಟಿಎಂ ಕಾರ್ಡ್‌ಗಳನ್ನು ಆರ್‌ಎಫ್‌ಐಡಿ (ರೇಡಿಯೊ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್‌) ವ್ಯಾಲೆಟ್‌ನಲ್ಲಿ ಇಡಬೇಕು. ಇದರಲ್ಲಿರುವ ಅಲ್ಯೂಮಿನಿಯಂ ಹಾಳೆ ರೇಡಿಯೋ ಸಿಗ್ನಲ್‌ಗಳನ್ನು ದಾಟಲು ಬಿಡದೆ, ಹ್ಯಾಕ್‌ ಆಗದಂತೆ ತಡೆಯುತ್ತದೆ.

ಜತೆಗೆ ಸ್ವೈಪ್‌ ರಹಿತವಾಗಿ ಹಣ ವರ್ಗಾವಣೆಯಾಗದಂತೆ ತಡೆಗಟ್ಟಲು ಬ್ಯಾಂಕ್‌ಗಳನ್ನು ಸಂಪರ್ಕಿಸಿ ಪಿನ್‌ ಸಂಖ್ಯೆ ಜನರೇಟ್‌ ಮಾಡಬಹುದು. ಹೀಗೆ ಮಾಡಿದರೆ ಸ್ವೈಪ್‌ ಮಾಡಿ, ಪಿನ್‌ ಸಂಖ್ಯೆ ಹಾಕಿಯೇ ಹಣ ವರ್ಗಾಯಿಸಬೇಕಾಗುತ್ತದೆ ಎಂದು ಡಾ.ಅನಂತ ಪ್ರಭು ಸಲಹೆ ನೀಡಿದ್ದಾರೆ.

ಆರ್‌ಬಿಐ ಪರಿಶೀಲನೆ ನಡೆಸಿಯೇ ಇಂಥ ತಂತ್ರಜ್ಞಾನಕ್ಕೆ ಅನುಮತಿ ನೀಡುತ್ತದೆ. ಆದರೂ ದುರುಪಯೋಗಪಡಿಸುವ ಸಾಧ್ಯತೆಗಳೂ ಇಲ್ಲದಿಲ್ಲ. ಇದನ್ನು ಆರ್‌ಬಿಐ ಗಮನಕ್ಕೆ ತಂದರೆ ಪುನರ್‌ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

-ಪ್ರವೀಣ್‌ ಎಂ.ಪಿ, ದ.ಕ. ಲೀಡ್‌ ಬ್ಯಾಂಕ್‌ ಪ್ರಬಂಧಕ