ಬೆಂಗಳೂರು(ಸೆ.15): ಪ್ರೈವೇಟ್ ಕ್ಯಾಬ್‌ಗಳು ಎಷ್ಟು ಸುರಕ್ಷಿತ ಅನ್ನೋ ವಿವಾದಕ್ಕೆ ಮತ್ತೊಂದು ಘಟನೆ ಸೇರಿಕೊಂಡಿದೆ. ಇದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಉಬರ್ ಕ್ಯಾಬ್ ಬುಕ್ ಮಾಡಿದ್ದ ಪ್ರಯಾಣಿಕ ಸೂರ್ಯ ಒರುಗಂತಿಗೆ ಎದುರಾದ ಹೊಸ ತಲೆನೋವು.

ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕ್ಯಾಬ್ ಬುಕ್ ಮಾಡಿದ್ದ ಪ್ರಯಾಣಿಕ ಸೂರ್ಯಗೆ ಆಪ್ ಮೂಲಕ ತೋರಿಸಿದ ವಾಹನ ಚಾಲಕ ಅಲ್ಲಿರಲಿಲ್ಲ. ಉಬರ್ ವಾಹನದ ಡ್ರೈವರ್ ಕುಡಿದ ಮತ್ತಿನಲ್ಲಿ ಗಾಡಿ ಚಲಾಯಿಸೋ ಸ್ಥಿತಿಯಲ್ಲಿ ಇರಲಿಲ್ಲ ಎಂದು ಪ್ರಯಾಣಿಕ ಸೂರ್ಯ ಆರೋಪಿಸಿದ್ದಾರೆ.

 

 

ಹೀಗಾಗಿ ಡ್ರೈವರ್‌ನ್ನ ಪಕ್ಕದ ಸೀಟಿನಲ್ಲಿ ಕೂರಿಸಿದ ಸೂರ್ಯ ಸ್ವತಃ ವಾಹನ ಚಲಾಯಿಸಿ ಮನೆ ತಲುಪಿದ್ದಾರೆ. ಈ ಸಂಪೂರ್ಣ ವೃತ್ತಾಂತವನ್ನ ವೀಡಿಯೋ ಚಿತ್ರೀಕರಿಸಿಕೊಂಡ ಸೂರ್ಯ, ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

 

ಈ ಘಟನೆ ಇದೀಗ ಬೆಂಗಳೂರಿನ ಕ್ಯಾಬ್ ಎಷ್ಟರ ಮಟ್ಟಿಗೆ ಸುರಕ್ಷಿತ ಅನ್ನೋ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದೆ. ಸೂರ್ಯ ಆರೋಪಕ್ಕೆ ಉಬರ್ ಅಥವಾ ಚಾಲಕನ ಪ್ರತಿಕ್ರಿಯೆ ಲಭ್ಯವಾಗಿಲ್ಲ.