ರಾಜಕೀಯದ ಬಗ್ಗೆ ಫೇಸ್ಬುಕ್‌ನಲ್ಲಿ ಬರೆದರೆ ಸಿಬ್ಬಂದಿ ಮನೆಗೆ ಬರ್ತಾರೆ!| ‘ಬರೆದಿದ್ದು ನೀವೇ ಹೌದಾ?’ ಎಂದು ಕೇಳುತ್ತಾರೆ| ಆಧಾರ್‌ ಪಡೆದು ಖಚಿತಪಡಿಸಿಕೊಳ್ಳುತ್ತಾರೆ| ಸಾಮಾಜಿಕ ಜಾಲತಾಣದ ಹೊಸ ಕ್ರಮ: ವಿವಾದ| ಖಾಸಗಿತನ, ಕಾಯ್ದೆ ಉಲ್ಲಂಘನೆ: ಕ್ರಮಕ್ಕೆ ಆಗ್ರಹ

ನವದೆಹಲಿ[ಏ.08]:  ಲೋಕಸಭೆ ಚುನಾವಣೆಯ ಬಿಸಿ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಜನಪ್ರಿಯ ಆನ್‌ಲೈನ್‌ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ರಾಜಕೀಯದ ಬಗ್ಗೆ ಬರೆಯುತ್ತಿದ್ದೀರಾ? ಹಾಗಾದರೆ ಫೇಸ್‌ಬುಕ್‌ನವರು ಬಂದು ನಿಮ್ಮ ಮನೆ ಬಾಗಿಲು ಬಡಿಯಬಹುದು. ಫೇಸ್‌ಬುಕ್‌ನಲ್ಲಿ ರಾಜಕೀಯದ ಬಗ್ಗೆ ಬರೆದಿದ್ದು ನೀವೇ ಹೌದಾ ಎಂದು ಪ್ರಶ್ನಿಸಬಹುದು. ಆಧಾರ್‌ ಹಾಗೂ ಇನ್ನಿತರೆ ಗುರುತಿನ ಚೀಟಿ ಕೇಳಲೂಬಹುದು...

ಹೌದು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸುಳ್ಳು ಸುದ್ದಿ ಪ್ರಚಾರವಾಗದಂತೆ ನೋಡಿಕೊಳ್ಳಬೇಕು ಎಂಬ ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ತಾಕೀತಿನ ಬೆನ್ನಲ್ಲೇ ಫೇಸ್‌ಬುಕ್‌ ಇಂತಹದ್ದೊಂದು ಕ್ರಮ ಕೈಗೊಂಡಿದೆ. ಆದರೆ ಇದು ವಿವಾದದ ಬಿರುಗಾಳಿ ಎಬ್ಬಿಸಿದೆ. ಈ ರೀತಿ ನೇರವಾಗಿ ಪ್ರತಿನಿಧಿಗಳನ್ನು ಮನೆಗೆ ಕಳುಹಿಸುವ ಮೂಲಕ ಬಳಕೆದಾರರ ಖಾಸಗಿತನವನ್ನು ಫೇಸ್‌ಬುಕ್‌ ಉಲ್ಲಂಘಿಸುತ್ತಿದೆ. ಇದು ಕಾನೂನುಬಾಹಿರ. ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳು ಕೇಳಿಬಂದಿವೆ.

ಆಗಿದ್ದೇನು?:

ಕೆಲ ದಿನಗಳ ಹಿಂದೆ ದೆಹಲಿಯ ನಾಗರಿಕರೊಬ್ಬರ ನಿವಾಸಕ್ಕೆ ಫೇಸ್‌ಬುಕ್‌ನಿಂದ ಪರಿಶೀಲನೆಗಾಗಿ ಸಿಬ್ಬಂದಿ ಬಂದಿದ್ದರು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

‘ಪಾಸ್‌ಪೋರ್ಟ್‌ ವಿಳಾಸ ಪರಿಶೀಲನೆಗೆಂದು ಪೊಲೀಸರು ಬರುವ ರೀತಿಯಲ್ಲಿ ಫೇಸ್‌ಬುಕ್‌ನ ಪ್ರತಿನಿಧಿಗಳು ಬಂದಿದ್ದರು. ರಾಜಕೀಯಕ್ಕೆ ಸಂಬಂಧಿಸಿದ ವಿಷಯವನ್ನು ಫೇಸ್‌ಬುಕ್‌ನಲ್ಲಿ ಬರೆದಿದ್ದು ನಾನೇನಾ ಎಂಬುದನ್ನು ದೃಢೀಕರಿಸಲು ಆಧಾರ್‌ ಕಾರ್ಡ್‌ ಹಾಗೂ ಇತರೆ ದಾಖಲೆಗಳನ್ನು ಕೇಳಿದರು. ಅವರು ಬಂದಿದ್ದು ನೋಡಿ ನನಗೆ ದಿಗ್ಭ್ರಮೆಯಾಯಿತು. ಒಂದು ಸಾಮಾಜಿಕ ಜಾಲತಾಣ ಈ ರೀತಿ ಹೇಗೆ ಮಾಡಲು ಸಾಧ್ಯ? ಹೀಗಾದಲ್ಲಿ ಬಳಕೆದಾರರ ಖಾಸಗಿತನದ ಕತೆ ಏನು? ಇಂತಹ ಘಟನೆಯನ್ನು ನಾನು ಎಲ್ಲೂ ಕೇಳಿಲ್ಲ. ಸರ್ಕಾರದ ಸೂಚನೆ ಮೇರೆಗೆ ಇದೆಲ್ಲಾ ನಡೆಯುತ್ತಿದೆಯೇ?’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆ ವ್ಯಕ್ತಿ ಕೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಫೇಸ್‌ಬುಕ್‌ ಅನ್ನು ಸುದ್ದಿಸಂಸ್ಥೆ ಸಂಪರ್ಕಿಸಿತಾದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಈ ಸಂಬಂಧ ಫೇಸ್‌ಬುಕ್‌ನ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಜ್ಞರು ಆಗ್ರಹಿಸಿದ್ದಾರೆ.

ಬಳಕೆದಾರರು ಫೇಸ್‌ಬುಕ್‌ ವಿರುದ್ಧ ಕ್ರಮ ಜರುಗಿಸಬಹುದು: ತಜ್ಞರು

ಸಾಮಾಜಿಕ ಜಾಲತಾಣ ಬಳಕೆದಾರರನ್ನು ಭೌತಿಕವಾಗಿ ಪರಿಶೀಲನೆಗೆ ಒಳಪಡಿಸುವುದನ್ನು ಎಲ್ಲಿಯೂ ಕೇಳಿಲ್ಲ. ಹಿಂದೆಯೂ ನಡೆದಿಲ್ಲ. ಈ ಸಂಬಂಧ ಫೇಸ್‌ಬುಕ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬಳಕೆದಾರರು ಕೂಡ ಫೇಸ್‌ಬುಕ್‌ ಹಾಗೂ ಸರ್ಕಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಸೈಬರ್‌ ತಜ್ಞರು ಹೇಳುತ್ತಾರೆ.

‘ಫೇಸ್‌ಬುಕ್‌ ಒಂದು ವೇಳೆ ಈ ರೀತಿ ಮಾಡಿರುವುದು ನಿಜವೇ ಆದಲ್ಲಿ ಅದು ಬಳಕೆದಾರರ ಖಾಸಗಿತನದ ಉಲ್ಲಂಘನೆಯಂತಾಗುತ್ತದೆ. ಪರಿಶೀಲನೆಗಾಗಿ ಪ್ರತಿನಿಧಿ ಕಳುಹಿಸುವುದು ಆಕೆ ಅಥವಾ ಆತನ ಖಾಸಗಿ ವಲಯದಲ್ಲಿ ಆಕ್ರಮಣ ಮಾಡಿದಂತೆ. ಕಾನೂನುಗಳಡಿ ಸರ್ಕಾರ ಮಾತ್ರ ಈ ಕೆಲಸ ಮಾಡಬಹುದು’ ಎಂದು ದೇಶದ ಹಿರಿಯ ಸೈಬರ್‌ ತಜ್ಞ ಹಾಗೂ ಸುಪ್ರೀಂಕೋರ್ಟ್‌ ಹಿರಿಯ ವಕೀಲ ಪವನ್‌ ದುಗ್ಗಲ್‌ ತಿಳಿಸಿದ್ದಾರೆ.

ವಿವಾದಾತ್ಮಕ ಅಂಶಗಳು ಕಂಡುಬಂದರೆ ಒಂದು ನಿರ್ದಿಷ್ಟಪುಟ, ಗುಂಪು ಅಥವಾ ಪೋಸ್ಟ್‌ ಅನ್ನು ಸ್ಥಗಿತಗೊಳಿಸುವ, ಅಂತಹ ಬಳಕೆದಾರರನ್ನು ಫೇಸ್‌ಬುಕ್‌ನಿಂದಲೇ ತೆಗೆದು ಹಾಕುವ ಕ್ರಮ ಇದೆ. ಅದನ್ನೇ ಮಾಡಬಹುದಿತ್ತು ಎಂದಿದ್ದಾರೆ.

ಫೇಸ್‌ಬುಕ್‌ನಲ್ಲಿ ರಾಜಕೀಯ ಜಾಹೀರಾತು ನೀಡುವವರ ವಿಳಾಸ ಪರಿಶೀಲನೆಯನ್ನು ಮಾಡಲಾಗುತ್ತದೆ. ಇದಕ್ಕಾಗಿ ಬಾಹ್ಯ ಸಂಸ್ಥೆಗಳನ್ನೂ ನೇಮಕ ಮಾಡಿಕೊಂಡಿದೆ. ಆದರೆ ಬಳಕೆದಾರರ ಪರಿಶೀಲನೆ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಉಲ್ಲಂಘನೆ. ಹೀಗಾಗಿ ಬಳಕೆದಾರರು ಫೇಸ್‌ಬುಕ್‌ ಹಾಗೂ ಸರ್ಕಾರದ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂದು ಸಲಹೆ ಮಾಡಿದ್ದಾರೆ.