ಬೆಂಗಳೂರು(ಆ.19): ವಿಶ್ವದೆಲ್ಲೆಡೆ ಇದೀಗ ಎಲೆಕ್ಟ್ರಿಕಲ್ ವಾಹನಗಳಿಗೆ ಭಾರಿ ಉತ್ತೇಜನ ಸಿಕ್ಕಿದೆ. ಸರ್ಕಾರ ಕೂಡ ಪರಿಸರಕ್ಕೆ ಪೂರಕ ಹಾಗೂ ಇಂಧನಕ್ಕೆ ಪರ್ಯಾಯವಾಗಿ ಎಲೆಕ್ಟ್ರಿಕಲ್ ವಾಹನ ತಯಾರಿಕೆಗೆ ಸಬ್ಸಡಿ ನೀಡುತ್ತಿದೆ. ಇದೀಗ ಬೆಂಗಳೂರು ಮೂಲದ ಎಲೆಕ್ಟ್ರಿಕಲ್ ಬೈಕ್ ಸಂಸ್ಥೆ ನೂತನ ಬೈಕ್ ಬಿಡುಗಡೆಗೆ ಸಜ್ಜಾಗಿದೆ.

ಬೆಂಗಳೂರಿನ ಅಲ್ಟ್ರಾವಿಯೋಲೆಟ್ ಅಟೋಮೆಟಿವ್ ಕಂಪೆನಿ ನೂತನ ಎಲೆಕ್ಟ್ರಿಕಲ್ ಬೈಕ್ ತಯಾರಿಕೆಯಲ್ಲಿ ತೊಡಗಿದೆ. 200- 250 ಸಿಸಿ ಎಲೆಕ್ಟ್ರಿಕಲ್ ಬೈಕ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

2019ರಲ್ಲಿ ನೂತನ ಎಲೆಕ್ಟ್ರಿಕಲ್ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ. ಈ ಮೂಲಕ ಪೆಟ್ರೋಲ್ ಬೈಕ್‌ಗಳಿಗೆ ಭಾರಿ ಪೈಪೋಟಿ ಎದುರಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಆಕರ್ಷಕ ವಿನ್ಯಾಸದಲ್ಲಿ ಬೈಕ್ ಬಿಡುಗಡೆ ಮಾಡಲು ಸಂಸ್ಥೆ ನಿರ್ಧರಿಸಿದೆ.

2017ರಲ್ಲಿ ಬೆಂಗಳೂರಿನ ಅಲ್ಟ್ರಾವಿಯೋಲೆಟ್ ಅಟೋಮೆಟಿವ್ ಕಂಪೆನಿಯ ಶೇಕಡಾ 14.78 ರಷ್ಟು ಶೇರುಗಳನ್ನ ಟಿವಿಎಸ್ ಮೋಟಾರು ಕಂಪೆನಿ ಪಡೆದುಕೊಂಡಿದೆ. ಸದ್ಯ ಟಿವಿಎಸ್ ಬಂಡವಾಳದೊಂದಿಗೆ ಅಲ್ಟ್ರಾವಿಯೋಲೆಟ್ ಅಟೋಮೆಟಿವ್ ಕಂಪೆನಿ ನೂತನ ಎಲೆಕ್ಟ್ರಿಕಲ್ ಬೈಕ್ ತಯಾರಿಸಲಿದೆ. ಆದರೆ ಇದರ ಬೆಲೆ ಹಾಗೂ ಬ್ಯಾಟರಿ ಚಾರ್ಜ್ ಹಾಗೂ ಇತರ ವಿವರಗಳನ್ನ ಕೆಂಪೆನಿ ಬಹಿರಂಗ ಪಡಿಸಿಲ್ಲ.