ನಟ ದರ್ಶನ್ ಪ್ರಾಣ ಉಳಿಸಿದ ಆಡಿ ಕ್ಯೂ7 ಕಾರಿನ ವಿಶೇಷತೆ ಏನು?
ಸ್ಯಾಂಡಲ್‌ವುಡ್ ಸ್ಟಾರ್ ದರ್ಶನ್ ಕಾರು ಅಪಘಾತ ಪ್ರಕರಣ ಇದೀಗ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಆದರೆ ದರ್ಶನ ಅಪಘಾತದಲ್ಲಿ ನಟನ ಪ್ರಾಣ ಉಳಿಸಿದ್ದು ಆಡಿ ಕ್ಯೂ 7 ಕಾರು. ಅಷ್ಟಕ್ಕೂ ಈ ಕಾರು ದರ್ಶನ ಪ್ರಾಣ ಉಳಿಸಿದ್ದು ಹೇಗೆ?ಇಲ್ಲಿದೆ.
ಬೆಂಗಳೂರು(ಸೆ.24): ಜರ್ಮನ್ ಮೂಲದ ಆಡಿ ಕಾರು ದುಬಾರಿ ಹಾಗೂ ಹೆಚ್ಚು ಸೇಫ್ಟಿ ಕಾರು ಎಂದೇ ಪ್ರಸಿದ್ಧಿಹೊಂದಿದೆ. ಅದರಲ್ಲೂ ಭಾರತದಲ್ಲಿ ಬಿಡುಗಡೆಯಾಗಿರುವ ಆಡಿ ಕ್ಯೂ 7 ಲಿಮಿಟೆಡ್ ಎಡಿಶನ್ ಕಾರು ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಇದೇ ಕಾರು ಸ್ಯಾಂಡಲ್‌ವುಡ್ ಸ್ಟಾರ್ ದರ್ಶನ ಪ್ರಾಣ ಉಳಿಸಿದೆ.
ಆಡಿ ಕ್ಯೂ 7 ಕಾರಿನ ಬೆಲೆ 86.18 ಲಕ್ಷ ರೂಪಾಯಿಂದ 1 ಕೋಟಿ(ಎಕ್ಸ್ ಶೋ ರೂಂ)ಇದೆ. ಇಷ್ಟು ದುಬಾರಿ ಕಾರಿನಲ್ಲಿ ಅಷ್ಟೇ ಗರಿಷ್ಠ ಸೇಫ್ಟಿ ಫೀಚರ್ಸ್ ಕೂಡ ಇದೆ. ಇದೇ ಕಾರಿನಲ್ಲಿ ನಟ ದರ್ಶನ ಮೈಸೂರಿನ ಸಮೀಪ ಅಪಘಾತಕ್ಕೀಡಾಗಿದ್ದಾರೆ. ಆದರೆ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾದರೂ ದರ್ಶನ ಹಾಗೂ ಕಾರಿನಲ್ಲಿದ್ದ ಇತರರಿಗೆ ಸಣ್ಣ ಪುಟ್ಟಗಾಯಗಳಾಗಿವೆ ಹೊರತು ಅದೃಷ್ಟವಶಾತ್ ಹೆಚ್ಚಿನ ಅಪಾಯ ಸಂಭವಿಸಿಲ್ಲ.
ದರ್ಶನ್ ಖರೀದಿಸಿರುವ ಆಡಿ ಕ್ಯೂ 7 ಕಾರಿನಲ್ಲಿರೋ ಸೇಫ್ಟಿ ಸೌಕರ್ಯಗಳು ಪ್ರಯಾಣಿಕರ ಹೆಚ್ಚಿನ ಸುರಕ್ಷತೆ ಒದಗಿಸುತ್ತದೆ. ಡ್ರೈವರ್ ಹಾಗೂ ಕೋ ಡ್ರೈವರ್ ಏರ್‌ಬ್ಯಾಗ್, ಪ್ರಯಾಣಿಕರ ಏರ್‌ಬ್ಯಾಗ್, ಸೈಡ್ ಏರ್‌ಬ್ಯಾಗ್ ಸೇರಿದಂತೆ ಸಂಪೂರ್ಣ ಕಾರು ಏರ್‌ಬ್ಯಾಗ್ ವ್ಯವಸ್ಥೆ ಹೊಂದಿದೆ.
ಎಬಿಎಸ್ ಬ್ರೇಕ್, ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಶನ್, ಬ್ರೇಕ್ ಅಸಿಸ್ಟ್, ಹಿಲ್ ಅಸಿಸ್ಟ್, ಸ್ಟೆಬಿಲಿಟಿ ಕಂಟ್ರೋಲ್, ಸೇಫ್ಟಿ ಸೀಟ್ ಬೆಲ್ಟ್, ಅತ್ಯಾಧುನಿಕ ಸುರಕ್ಷತಾ ವಿಧಾನ ಹೊಂದಿದೆ.
ಕ್ರಾಶ್ ಟೆಸ್ಟ್ ಪರೀಕ್ಷೆಯಲ್ಲಿ ಆಡಿ ಕ್ಯೂ 7 ಕಾರು ಸೈ ಎನಿಸಿಕೊಂಡಿದೆ. ಡ್ರೈವರ್ ಸೇಫ್ಟಿ ವಿಚಾರದಲ್ಲಿ 4 ಸ್ಟಾರ್, ಪ್ಯಾಸೆಂಜರ್ ಸೇಫ್ಟಿ 4 ಸ್ಟಾರ್, ಮುಂಭಾಗದಿಂದಾಗೋ ಅಪಘಾತ ಸುರಕ್ಷತೆಯಲ್ಲಿ 4 ಸ್ಟಾರ್, ಸೈಡ್ ಆಪಘಾತ ಸುರಕ್ಷತೆಯಲ್ಲಿ 5 ಸ್ಟಾರ್, ಒಟ್ಟಾರೆ ಅಪಘಾತ ಸುರಕ್ಷತೆಯಲ್ಲಿ 5 ಸ್ಟಾರ್ ಸೇರಿದಂತೆ ಬಹುತೇಕ ಎಲ್ಲಾ ಸುರಕ್ಷತಾ ಪರೀಕ್ಷೆಯಲ್ಲಿ 5 ಸ್ಟಾರ್ ಪಡೆದಿದೆ.
ಕಾರು ಕ್ರಾಶ್ ಟೆಸ್ಟ್‌ನಲ್ಲಿ ಕಾರಿನ ಸುರಕ್ಷತೆ ಆಧರಿಸಿ 1 ರಿಂದ 5 ಸ್ಟಾರ್ ನೀಡಲಾಗುತ್ತೆ. ಇದರಲ್ಲಿ ಆಡಿ ಕ್ಯೂ 7 ಕಾರು ಸರಾಸರಿ 4 ಸ್ಟಾರ್ ಪಡೆದುಕೊಂಡಿದೆ. ಹೆಚ್ಚಿನ ಸುರಕ್ಷತೆ ಹೊಂದಿರೋ ಕಾರಣ ಆಡಿ ಕ್ಯೂ 7 ಕಾರು ದರ್ಶನ್ ಹಾಗೂ ಇತರರ ಪ್ರಾಣ ಉಳಿಸಿದೆ.