ಏರ್‌ಸೆಲ್‌ ಕಂಪನಿ ದಿವಾಳಿ: ಶೀಘ್ರ ಎನ್‌ಸಿಎಲ್‌ಟಿಗೆ ಅರ್ಜಿ

First Published 20, Feb 2018, 7:21 AM IST
Aircel Comapny In Big Loss
Highlights

ರಿಲಯನ್ಸ್‌ ಜಿಯೋ ಮಾರುಕಟ್ಟೆಪ್ರವೇಶದ ಬಳಿಕ ದೇಶದ ಟೆಲಿಕಾಂ ವಲಯದಲ್ಲಿ ಉಂಟಾಗಿರುವ ತಲ್ಲಣ, ಇದೀಗ ಮತ್ತೊಂದು ಟೆಲಿಕಾಂ ಕಂಪನಿಯನ್ನು ಬಲಿಪಡೆದಿದೆ.

ಮುಂಬೈ: ರಿಲಯನ್ಸ್‌ ಜಿಯೋ ಮಾರುಕಟ್ಟೆಪ್ರವೇಶದ ಬಳಿಕ ದೇಶದ ಟೆಲಿಕಾಂ ವಲಯದಲ್ಲಿ ಉಂಟಾಗಿರುವ ತಲ್ಲಣ, ಇದೀಗ ಮತ್ತೊಂದು ಟೆಲಿಕಾಂ ಕಂಪನಿಯನ್ನು ಬಲಿಪಡೆದಿದೆ.

ಸತತ ನಷ್ಟದಲ್ಲಿದ್ದ ಏರ್‌ಸೆಲ್‌ ಕಂಪನಿ ಇನ್ನು ಚೇತರಿಸಿಕೊಳ್ಳಲಾರದ ಸ್ಥಿತಿ ತಲುಪಿದ್ದು, ಇದೀಗ ದಿವಾಳಿ ಕೋರಿ ಎನ್‌ಸಿಎಲ್‌ಟಿ (ರಾಷ್ಟ್ರೀಯ ಕಂಪನಿ ನ್ಯಾಯಾಧಿಕರಣ)ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಕಂಪನಿ ಈಗಾಗಲೇ ತನ್ನ ಆಡಳಿತ ಮಂಡಳಿಯನ್ನು ವಿಸರ್ಜಿಸಿದೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಸುದ್ದಿ ಖಚಿತವಾದರೆ 7-8 ವರ್ಷದ ಹಿಂದೆ 10ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ದೇಶದಲ್ಲಿನ ಖಾಸಗಿ ಮೊಬೈಲ್‌ ಸೇವಾ ಕಂಪನಿಗಳ ಸಂಖ್ಯೆ ಕೇವಲ 4ಕ್ಕೆ ಇಳಿಯಲಿದೆ. ಈ ಪೈಕಿ ಎರಡು ಕಂಪನಿಗಳು ಪರಸ್ಪರ ವಿಲೀನದ ಮಾತುಕತೆ ನಡೆಸುತ್ತಿದ್ದು, ಅದು ಸಾಧ್ಯವಾದಲ್ಲಿ ಕೇವಲ 3 ಕಂಪನಿಗಳು ಮಾತ್ರವೇ ಉಳಿದುಕೊಂಡಂತೆ ಆಗಲಿದೆ.

ಮಲೇಷ್ಯಾ ಮೂಲದ ಭಾರತೀಯ ಉದ್ಯಮಿ ಆನಂದ್‌ ಕೃಷ್ಣನ್‌ರ ಮ್ಯಾಕ್ಸಿಸ್‌ ಕಂಪನಿ, ಏರ್‌ಸೆಲ್‌ನ ಮಾತೃಕಂಪನಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಂಪನಿ ಪ್ರತಿ ಮಾಸಿಕ 100-150 ಕೋಟಿ ರು. ನಷ್ಟಅನುಭವಿಸುತ್ತಿತ್ತು. ಆ ನಷ್ಟದ ಪ್ರಮಾಣ ಇದೀಗ ಅಂದಾಜು 15000 ಕೋಟಿ ರು. ತಲುಪಿದ್ದು, ಇನ್ನು ಸುಧಾರಿಸುವುದು ಕಷ್ಟಎಂಬ ಸ್ಥಿತಿಗೆ ತಲುಪಿದೆ. ಹೀಗಾಗಿ ಬೇರೆ ದಾರಿ ಕಾಣದೆ ಕಂಪನಿ ಪ್ರವರ್ತಕರು ದಿವಾಳಿ ಕೋರಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಕೆಲ ಸಮಯದ ಹಿಂದೆ ಆರ್‌ಕಾಂ ಮತ್ತು ಏರ್‌ಸೆಲ್‌ ವಿಲೀನದ ಮಾತುಕತೆ ನಡೆಸಿದ್ದವು. ಆದರೆ ಏರ್‌ಸೆಲ್‌ ಮೇಲೆ ಹಲವು ಕೇಸು ಇರುವ ಕಾರಣ ವಿಲೀನಕ್ಕೆ ಕೇಂದ್ರ ದೂರಸಂಪರ್ಕ ಸಚಿವಾಲಯ ಅನುಮತಿ ನೀಡಿರಲಿಲ್ಲ.

loader