ಉತ್ತಮ ಪದಗಳನ್ನು ಬಳಸಿ ಟೀಕಿಸಿ : ಎಚ್‌ಡಿಕೆಗೆ ದತ್ತ
- ‘ಮಾತನಾಡುವಾಗ ಉತ್ತಮ ಪದಗಳನ್ನು ಬಳಸಿ ಮಾತನಾಡಬೇಕು.
- ಉತ್ತಮ ಪದಗಳನ್ನು ಬಳಸಿ ರಾಜಕಾರಣದಲ್ಲಿ ಟೀಕೆ ಮಾಡಲು ಅವಕಾಶವಿದೆ’
- ಹಿರಿಯ ನಾಯಕ ವೈ.ಎಸ್.ವಿ.ದತ್ತ ಅವರು ತಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಹೇಳಿಕೆ
ಬೆಂಗಳೂರು (ಜು.08): ‘ಮಾತನಾಡುವಾಗ ಉತ್ತಮ ಪದಗಳನ್ನು ಬಳಸಿ ಮಾತನಾಡಬೇಕು. ಉತ್ತಮ ಪದಗಳನ್ನು ಬಳಸಿ ರಾಜಕಾರಣದಲ್ಲಿ ಟೀಕೆ ಮಾಡಲು ಅವಕಾಶವಿದೆ’ ಎಂದು ಜೆಡಿಎಸ್ ಹಿರಿಯ ನಾಯಕ ವೈ.ಎಸ್.ವಿ.ದತ್ತ ಅವರು ತಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮಂಡ್ಯ ಸಂಸದೆ ಸುಮಲತಾ ಬಗ್ಗೆ ಕುಮಾರಸ್ವಾಮಿ ಆಡಿದ ಮಾತು ವಿವಾದಕ್ಕೀಡಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದತ್ತ, ಈ ರೀತಿಯ ಹೇಳಿಕೆಗೆ ನನ್ನದೇ ಆಕ್ಷೇಪವಿದೆ. ಇತ್ತೀಚೆಗೆ ಎಲ್ಲ ರಾಜಕಾರಣಿಗಳು ಇದೇ ರೀತಿ ಹೇಳಿಕೆಗಳನ್ನು ನೀಡುತ್ತಿರುವುದು ಸರಿ ಕಾಣುವುದಿಲ್ಲ. ಉತ್ತಮ ಭಾಷಾ ಪ್ರಯೋಗದಿಂದ ರಾಜಕಾರಣಿಗಳು ಮಾದರಿಯಾಗಬೇಕು ಎಂದರು
.ಸುಮಲತಾರನ್ನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ಎಚ್‌ಡಿಕೆ .
ಕನ್ನಡ ಶ್ರೀಮಂತ ಭಾಷೆ, ಕನ್ನಡದಲ್ಲಿ ಸಾಕಷ್ಟುಪದ ಭಂಡಾರವಿದೆ. ಹೀಗಾಗಿ ಉತ್ತಮ ಪದ ಬಳಕೆ ಹಾಗೂ ಭಾಷಾ ಪ್ರಯೋಗದಿಂದ ರಾಜಕಾರಣಿಗಳು ಮಾದರಿಯಾಗಬೇಕು. ಇತ್ತೀಚೆಗೆ ಎಲ್ಲ ಪಕ್ಷಗಳ ರಾಜಕಾರಣಿಗಳೂ ಭಾಷೆ ಮೇಲೆ ಸಂವೇದನಾಶೀಲರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಯೋಚಿಸಿ ಪದ ಬಳಕೆ ಮಾಡುತ್ತಿಲ್ಲ. ಇದು ತುಂಬಾ ತಪ್ಪಾಗುತ್ತದೆ ಎಂದು ಹೇಳಿದರು.