Asianet Suvarna News Asianet Suvarna News

ಉ.ಪ್ರ. ರೀತಿ ಕಾನೂನಿಗೆ ಸಿದ್ಧ, ಅಗತ್ಯಬಿದ್ದರೆ ಕಠಿಣ ಕಾನೂನು: ಸಿಎಂ ಬೊಮ್ಮಾಯಿ

‘ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯಬಿದ್ದರೆ ಉತ್ತರ ಪ್ರದೇಶ ಮಾದರಿ ಕಾನೂನು ಅಳವಡಿಕೆಗೆ ಸರ್ಕಾರ ಸಿದ್ಧ. ಆದರೆ, ಅಲ್ಲಿನ ಪರಿಸ್ಥಿತಿಯೇ ಬೇರೆ. ಇಲ್ಲಿನ ಪರಿಸ್ಥಿತಿಯೇ ಬೇರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

Yogi Model Will Be Implemented In The State Too Says Cm Basavaraj Bommai gvd
Author
Bangalore, First Published Jul 29, 2022, 4:00 AM IST | Last Updated Jul 29, 2022, 4:00 AM IST

ಬೆಂಗಳೂರು (ಜು.29): ‘ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯಬಿದ್ದರೆ ಉತ್ತರ ಪ್ರದೇಶ ಮಾದರಿ ಕಾನೂನು ಅಳವಡಿಕೆಗೆ ಸರ್ಕಾರ ಸಿದ್ಧ. ಆದರೆ, ಅಲ್ಲಿನ ಪರಿಸ್ಥಿತಿಯೇ ಬೇರೆ. ಇಲ್ಲಿನ ಪರಿಸ್ಥಿತಿಯೇ ಬೇರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ‘ರಾಜ್ಯದಲ್ಲಿ ಶಾಂತಿ ಮತ್ತು ಕೋಮುಸೌಹಾರ್ದತೆಯನ್ನು ಕದಡುವ ಸಮಾಜದ್ರೋಹಿ ಶಕ್ತಿಗಳ ವಿರುದ್ಧ ಸರ್ಕಾರ ಸಮರವನ್ನು ಸಾರಿದೆ. 

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಾವುದೇ ರಾಜಿ ಇಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಯುವ ನಾಯಕ ಪ್ರವೀಣ್‌ ನೆಟ್ಟಾರು ಹತ್ಯೆ ಸೇರಿದಂತೆ ಹಲವು ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಹತ್ಯೆಗಳು ಇತ್ತೀಚೆಗೆ ನಡೆದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಸರ್ಕಾರದ ಒಂದು ವರ್ಷದ ಸಾಧನೆ ಸಂಬಂಧ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಮೇಲಿನ ಮಾತುಗಳನ್ನು ಆಡಿದರು. 

ಜನೋತ್ಸವ ರದ್ದು: ನಾನು ಹೇಳಿದ ಮೇಲೆ ಸರ್ಕಾರಕ್ಕೆ ಜ್ಞಾನೋದಯವಾಗಿದೆ, ಕುಮಾರಸ್ವಾಮಿ

ಉತ್ತರ ಪ್ರದೇಶದಲ್ಲಿ ಸಮಾಜಘಾತಕ ಶಕ್ತಿಗಳ ಆಸ್ತಿಪಾಸ್ತಿಗಳ ಮೇಲೆ ಬುಲ್ಡೋಜರ್‌ ಪ್ರಯೋಗ ನಡೆದಿದೆ. ಇದಕ್ಕೆ ‘ಉತ್ತರ ಪ್ರದೇಶ ಮಾದರಿ ಕಾನೂನು’ ಎನ್ನಲಾಗುತ್ತದೆ. ಪಿಎಫ್‌ಐ ನಿಷೇಧ ಅಧಿಕಾರ ನಮಗಿಲ್ಲ: ಈ ನಡುವೆ, ‘ಅಹಿತಕರ ಘಟನೆಯಲ್ಲಿ ಭಾಗಿಯಾಗುವ ಪಿಎಫ್‌ಐ, ಎಸ್‌ಡಿಪಿಐ ನಿಷೇಧ ಮಾಡುವ ಅಧಿಕಾರ ರಾಜ್ಯಕ್ಕಿಲ್ಲ. ಕೇಂದ್ರ ಸರ್ಕಾರವು ಈ ಬಗ್ಗೆ ಗಮನಹರಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಿದೆ. ರಾಜ್ಯ ಸರ್ಕಾರವು ಸಂದರ್ಭಾನುಸಾರ ವರದಿಯನ್ನು ಕಳುಹಿಸಿದೆ’ ಎಂದರು.

ಕೇರಳಕ್ಕೆ ತಂಡ ರವಾನೆ: ‘ಕೋಮುಸೌಹಾರ್ದತೆಯನ್ನು ಕದಡಿಸುವ ಘಾತುಕ ಶಕ್ತಿಗಳು ಕೇರಳ, ಕರ್ನಾಟಕ, ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ ಸೇರಿದಂತೆ ಇಡೀ ದೇಶದಲ್ಲಿ ಅಶಾಂತಿಯನ್ನು ಹಬ್ಬಿಸಲು ಪ್ರಯತ್ನಿಸುತ್ತಿವೆ. ಕರ್ನಾಟಕದಲ್ಲಿ ಕಳೆದ 10 ವರ್ಷದಿಂದ ಸಮಾಜಘಾತಕ ಶಕ್ತಿಗಳು ತಲೆ ಎತ್ತಿವೆ. ರಾಜ್ಯದ ದಕ್ಷ ಪೊಲೀಸ್‌ ಅಧಿಕಾರಿಗಳ ಶ್ರಮದಿಂದ ಸ್ಲೀಪರ್‌ ಸೆಲ್‌ ಭಯೋತ್ಪಾದಕರು, ಅವರ ಸಂಘಟನೆಯಲ್ಲಿರುವ ಹಲವು ಅಪರಾಧಿಗಳನ್ನು ತಿಹಾರ್‌ ಜೈಲಿಗೆ ಕಳುಹಿಸಲಾಗಿದೆ. 

ಡಿ.ಜೆ.ಹಳ್ಳಿ, ಮಂಗಳೂರು ಪ್ರಕರಣದಲ್ಲಿ ಪೊಲೀಸರು ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದಾರೆ. ಈಗಿನ ದಕ್ಷಿಣ ಕನ್ನಡದಲ್ಲಿ ನಡೆದ ಪ್ರವೀಣ್‌ ಕೊಲೆ ಪ್ರಕರಣವನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಿ 5 ತನಿಖಾ ತಂಡಗಳನ್ನು ರಚಿಸಿ ಕೇರಳಕ್ಕೆ ಕಳುಹಿಸಲಾಗಿದೆ. ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ವಿವರಿಸಿದರು.

ಬಿಜೆಪಿ ಮುಖಂಡನ ಬರ್ಬರ ಹತ್ಯೆ: ದುಷ್ಕರ್ಮಿಗಳ ಸದೆಬಡಿಯುತ್ತೇವೆ, ಸಿಎಂ ಬೊಮ್ಮಾಯಿ

‘ಐವರು ವಿದ್ಯಾರ್ಥಿನಿಯರಿಂದ ಪ್ರಾರಂಭವಾದ ಹಿಜಾಬ್‌ ವಿವಾದವನ್ನು ವ್ಯವಸ್ಥಿತವಾಗಿ ರಾಜ್ಯದೆಲ್ಲೆಡೆ ಹಬ್ಬಿಸಲು ಪ್ರಯತ್ನಿಸಲಾಗಿತ್ತು. ಈ ಪರಿಸ್ಥಿತಿಯನ್ನು ನಿಯಂತ್ರಿಸಿ, ಕಾನೂನು ಪ್ರಕಾರ ಆದೇಶವನ್ನು ಜಾರಿಗೊಳಿಸಿದ್ದರಿಂದ ಬಹುತೇಕ ಎಲ್ಲರೂ ಹಿಜಾಬ್‌ ಸಂಬಂಧಿಸಿದ ನಿಯಮವನ್ನು ಪಾಲಿಸುತ್ತಿದ್ದಾರೆ. ಮಸೀದಿಯಲ್ಲಿ ಆಜಾನ್‌ ಬಗ್ಗೆಯೂ ಸುಪ್ರೀಂಕೋರ್ಟ್‌ ಆದೇಶವನ್ನು ಪಾಲಿಸಿ ವಿವಾದವನ್ನು ಬಗೆಹರಿಸಲಾಗಿದೆ. ವಿವಾದಗಳ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ, ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲಾಗಿದೆ’ ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದರು.

Latest Videos
Follow Us:
Download App:
  • android
  • ios