* ಇಂದು ಮಹಿಳೆಯರ ಬಗೆಗಿನ ಸಮಾಜದ ದೃಷ್ಟಿಕೋನ ಬದಲಾಗುತ್ತಿದೆ* ಪತ್ನಿ ಜತೆ ವಿಶ್ವನಾಥ್‌ ಬಿಂದಾಸ್‌ ಸ್ಟೆಪ್‌* ವಿಶ್ವವಾಣಿ ಫೌಂಡೇಶನ್‌ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಪೀಣ್ಯದಾಸರಹಳ್ಳಿ(ಮಾ.28): ಇಂದು ಮಹಿಳೆಯರ ಬಗೆಗಿನ ಸಮಾಜದ ದೃಷ್ಟಿಕೋನ ಬದಲಾಗುತ್ತಿದೆ. ಮಹಿಳೆಯರು ಹಿಂದೆಂದಿಗಿಂತಲೂ ಹೆಚ್ಚು ಸಬಲರಾಗಿದ್ದು, ಸಮಾಜವನ್ನು ಕಟ್ಟುವಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ ಎಂದು ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ದಾಸನಪುರ ಹೋಬಳಿಯ ಮಾಚೋಹಳ್ಳಿ ಗ್ರಾಮದಲ್ಲಿ ವಿಶ್ವವಾಣಿ ಫೌಂಡೇಶನ್‌ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಕೋಲಣ್ಣ ಕೋಲೆ ಜಾನಪದ ಹಾಡಿಗೆ ಪತ್ನಿ ವಾಣಿ ವಿಶ್ವನಾಥ್‌ ಹಾಗೂ ಯಲಹಂಕ ಶಾಸಕ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಗ್ರಾಮದ ಮಹಿಳೆಯರೊಂದಿಗೆ ಹೆಜ್ಜೆ ಹಾಕಿ ನೃತ್ಯ ಮಾಡುವ ಮೂಲಕ ರಂಜಿಸಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದರು.

ಗ್ರಾಮದ ಮಹಿಳೆಯರು ಕೋಲಣ್ಣ... ಕೋಲೆ.... ಜಾನಪದ ಹಾಡಿಗೆ ಹೆಜ್ಜೆ ಹಾಕಿದರು. ಈ ವೇಳೆ ಶಾಸಕ ವಿಶ್ವನಾಥ್‌ ಹಾಗೂ ವಾಣಿ ವಿಶ್ವನಾಥ್‌ ಸಹ ಮಹಿಳೆಯರಿಗೆ ಸಾಥ್‌ ನೀಡಿದರು. ಕುಣಿದು ಕುಪ್ಪಳಿಸಿ ಸಂತಸಪಟ್ಟರು.

ಹಸಿ ಕರಗ ಮಂಟದ ಅಭಿವೃದ್ಧಿಗೆ 4 ಕೋಟಿ

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವದ ಪೂಜಾ ಸ್ಥಳವಾದ ಶ್ರೀಕಂಠೀರವ ಕ್ರೀಡಾಂಗಣದ ಆವರಣದಲ್ಲಿರುವ ಹಸಿ ಕರಗ ಮಂಟಪವನ್ನು 4 ಕೋಟಿ ರು. ಮೊತ್ತದಲ್ಲಿ ಅಭಿವೃದ್ಧಿ ಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿರ್ಧರಿಸಿದೆ.

ಶುಕ್ರವಾರ ವಹ್ನಿಕುಲ ಕ್ಷತ್ರಿಯ ಸಮಾಜದ ಮುಖಂಡರ ಜತೆಗೆ ಸಭೆ ನಡೆಸಿದ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಮತ್ತು ಆಯುಕ್ತ ರಾಜೇಶ್‌ಗೌಡ ಈ ನಿರ್ಧಾರ ಕೈಗೊಂಡಿದ್ದಾರೆ.

ಸಭೆಯ ನಂತರ ಮಾತನಾಡಿದ ಎಸ್‌.ಆರ್‌.ವಿಶ್ವನಾಥ್‌, ಬೆಂಗಳೂರು ಕರಗ ಇಡೀ ವಿಶ್ವದಲ್ಲಿ ಹೆಸರುವಾಸಿಯಾಗಿರುವ ಉತ್ಸವವಾಗಿದೆ. ಕಂಠೀರವ ಕ್ರೀಡಾಂಗಣದ ಆವರಣದಲ್ಲಿರುವ ಕಲ್ಯಾಣಿ ಮತ್ತು ಹಸಿ ಕರಗ ಮಂಟಪ ಶಿಥಿಲಗೊಂಡು ವೀರಗಾರರು ಪೂಜಾ ವಿಧಿವಿಧಾನಗಳನ್ನು ನಡೆಸುವುದು ಕಷ್ಟಕರವಾಗಿದೆ. ಈ ಸಮಸ್ಯೆ ಪರಿಹರಿಸಲು ಬಿಡಿಎ ವತಿಯಿಂದಲೇ ಮಂಟಪ ಮತ್ತು ಕಲ್ಯಾಣಿಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ವಿಶ್ವವಿಖ್ಯಾತ ಬೆಂಗಳೂರು ಕರಗದ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೆಚ್ಚಿನ ಆಸಕ್ತಿ ತೋರಿ 4 ಕೋಟಿ ರು. ಮಂಜೂರು ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಸುಂದರ ಮಂಟಪ ನಿರ್ಮಾಣ ಸೇರಿದಂತೆ ಇನ್ನಿತರೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಒಂದು ವೇಳೆ ಈ ಅಭಿವೃದ್ಧಿ ಕಾಮಗಾರಿಗೆ ಹೆಚ್ಚುವರಿ ಹಣ ಬೇಕಾದರೆ ಅದನ್ನೂ ಒದಗಿಸಿಕೊಡಲು ಬಿಡಿಎ ಬದ್ಧವಾಗಿದೆ ಎಂದರು.

ಮುಂದಿನ ತಿಂಗಳು ಶಿಲಾನ್ಯಾಸ:

ಹಸಿ ಕರಗ ಮಂಟಪ ಮತ್ತು ಸುತ್ತಮುತ್ತಲಿನ ಪರಿಸರವನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಏಪ್ರಿಲ್‌ನಲ್ಲಿ ಶಿಲಾನ್ಯಾಸ ನೆರವೇರಿಸುತ್ತೇವೆ. ಮುಂದಿನ ವರ್ಷ(2023)ದ ಏಪ್ರಿಲ… ತಿಂಗಳಲ್ಲಿ ನಡೆಯುವ ಕರಗದ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಹಸಿ ಕರಗ ಮಂಟಪ ಅಭಿವೃದ್ಧಿ, ಕಲ್ಯಾಣಿ ಜೀರ್ಣೋದ್ಧಾರ, ಬೃಂದಾವನ, ಧ್ಯಾನ ಮಂದಿರ, ಭಕ್ತರು ಕುಳಿತುಕೊಳ್ಳಲು ವ್ಯವಸ್ಥೆ, ದೀಪಾಲಂಕಾರ ವ್ಯವಸ್ಥೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹಸಿ ಕರಗ ಮಂಟಪ ಅಭಿವೃದ್ಧಿಗೆ ನಿರ್ಧರಿಸಿದ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಮತ್ತು ಆಯುಕ್ತ ರಾಜೇಶ್‌ಗೌಡ ಅವರಿಗೆ ವಹ್ನಿಕುಲ ಕ್ಷತ್ರಿಯ ಸಮಾಜದ ಮುಖಂಡರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್‌ ಸದಸ್ಯ ಪಿ.ಆರ್‌.ರಮೇಶ್‌, ತಿಗಳರ ಸಂಘದ ಸುಬ್ಬಣ್ಣ, ಲಕ್ಷ್ಮಣ್‌, ಲೋಕೇಶ್‌. ಕೃಷ್ಣಮೂರ್ತಿ, ಯಾದಗಿರಿ ರಾಮಚಂದ್ರ, ಸುರೇಶ್‌, ಜಯರಾಜ್‌ ಮೊದಲಾದವರು ಇದ್ದರು.