ಸಹಕಾರಿ ತತ್ವಕ್ಕೆ ಮಹಿಳೆಯರು ಶಕ್ತಿ ತುಂಬುತ್ತಿದ್ದು, ಇದು ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಮಂಗಳೂರು (ಮೇ.11): ಸಹಕಾರಿ ತತ್ವಕ್ಕೆ ಮಹಿಳೆಯರು ಶಕ್ತಿ ತುಂಬುತ್ತಿದ್ದು, ಇದು ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಮಂಗಳೂರು ಹೊರವಲಯದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿಯಲ್ಲಿ ಶನಿವಾರ ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ ಆಶ್ರಯದ ನವೋದಯ ಸ್ವಸಹಾಯ ಗುಂಪುಗಳ ‘ರಜತ ಸಂಭ್ರಮ-2025’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನನಗೆ ಹೆಣ್ಣುಮಕ್ಕಳು ಮತ್ತು ಯುವಕರ ಮೇಲೆ ನಂಬಿಕೆ ಹೆಚ್ಚು. ಅವರಿಗಾಗಿಯೇ ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದೇವೆ. ಕೊಟ್ಟ ಅವಕಾಶದಲ್ಲಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ. ದುಡ್ಡು- ಬ್ಲಡ್‌ ಎರಡೂ ಸರ್ಕ್ಯುಲೆಟ್‌ ಆದಾಗ ಆರೋಗ್ಯ ಚೆನ್ನಾಗಿರುತ್ತದೆ. ಇದೇ ಸಹಕಾರಿ ತತ್ವದ ಮೂಲ ಎಂದರು.

ಹೆಣ್ಣುಮಕ್ಕಳ ತ್ಯಾಗ ಅರಿತವನು ಆ ಕುಟುಂಬದ ಶಕ್ತಿ ಬಲ್ಲ. ಲಕ್ಷಾಂತರ ತಾಯಂದಿರು ಮನೆಯ ಜ್ಯೋತಿ ಬೆಳಗಿ ದೇಶದ ಆಸ್ತಿಯಾಗಿ ಉಳಿದುಕೊಂಡಿದ್ದಾರೆ. ಇದೇ ನಾರಿಯ ಶಕ್ತಿ. ನಾವೆಲ್ಲಿಯೂ ತಂದೆ ಭಾಷೆ ಎನ್ನುವುದಿಲ್ಲ, ಮಾತೃಭಾಷೆ, ಮಾತೃಭೂಮಿ ಎನ್ನುತ್ತೇವೆ. ಅದು ಈ ನಾಡು ಸ್ತ್ರೀಯರನ್ನು ಕಾಣುವ ರೀತಿ ಎಂದು ನಾರಿ ಶಕ್ತಿಯನ್ನು ಡಿಕೆಶಿ ಶ್ಲಾಘಿಸಿದರು. ಡಾ. ರಾಜೇಂದ್ರ ಕುಮಾರ್‌ ಅಂದಿನಿಂದ ಇವತ್ತಿನವರೆಗೂ ಕರಾವಳಿ ಕ್ಷೇತ್ರದಲ್ಲಿ ಸಹಕಾರಿ ಧುರೀಣರಾಗಿ, ಯಾವುದೇ ಸ್ಥಾನ ಅಪೇಕ್ಷಿಸದೆ, ಜನರ- ತಾಯಂದಿರ ಸೇವೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ಎಲ್ಲರಿಗೂ ಶಕ್ತಿ ಕೊಡಬೇಕೆಂದು ನವೋದಯ ಚಾರಿಟೇಬಲ್‌ ಟ್ರಸ್ಟ್‌ ರೂಪಿಸಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಅವರಿಗೆ ಅಭಿನಂದನೆ ಹೇಳುತ್ತೇನೆ ಎಂದರು.

1000 ರು. ಕೊಟ್ರೆ ಮನೆಗೆ ಕಾವೇರಿ ನೀರು ಸಂಪರ್ಕ: ಡಿ.ಕೆ.ಶಿವಕುಮಾರ್‌

ನನ್ನ ರಾಜಕೀಯ ಜೀವನ ಆರಂಭವಾಗಿದ್ದೂ ಸಹಕಾರಿ ರಂಗದಿಂದ. ಈಗ ಉಪಮುಖ್ಯಮಂತ್ರಿಯಾಗಿ ಸಹಕಾರಿಯ ದೀಪ ಬೆಳಗಿದ್ದೇನೆ. ಕಟೀಲು, ಧರ್ಮಸ್ಥಳ, ಸುಬ್ರಹ್ಮಣ್ಯದಂಥ ಶಕ್ತಿ ಕ್ಷೇತ್ರ ಹೊಂದಿರುವ ಕರಾವಳಿ, ಧರ್ಮ ಮತ್ತು ಶಕ್ತಿ ಸಮ್ಮಿಳಿತದ ಪವಿತ್ರ ಭೂಮಿ. ಶೈಕ್ಷಣಿಕ- ಧಾರ್ಮಿಕ ಸ್ಥಳಗಳಿಗೆ ಇಲ್ಲಿ ಯಾವುದೇ ಕೊರತೆ ಇಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಶಿಸ್ತಿನಿಂದ ಬ್ಯಾಂಕು, ಸಹಕಾರಿ ಸಂಘಗಳಲ್ಲಿ ಸಾಲಗಳು ಮರುಪಾವತಿಯಾಗುತ್ತಿದೆ ಎಂದರೆ ಅದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂದು ಅವರು ಶ್ಲಾಘಿಸಿದರು. ಈ ಭೂಮಿಯಲ್ಲಿ ಶಾಂತಿ ಇರಬೇಕು, ಯಾವುದೇ ಧರ್ಮವಿದ್ದರೂ ಸಹೋದರ ತತ್ವ ನಮ್ಮದಾಗಿರಬೇಕು. ಧರ್ಮ ಯಾವುದಾದರೇನು ತತ್ವ ಒಂದೇ, ದೇವನೊಬ್ಬ ನಾಮ ಹಲವು ಎನ್ನುವುದರಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಈ ಜಿಲ್ಲೆಯ ಪರಂಪರೆ, ಇತಿಹಾಸ ಉಳಿಸಿ, ಗೌರವ ಕಾಪಾಡೋಣ. ಈ ಕರಾವಳಿಯನ್ನು ಇತಿಹಾಸದ ಪುಟಕ್ಕೆ ಸೇರಿಸಲು, ಈ ರಾಜ್ಯದ ಭವಿಷ್ಯಕ್ಕಾಗಿ ಕೆಲಸ ಮಾಡೋಣ ಎಂದರು.

ಎಸ್‌ಎಚ್‌ಜಿ ಉತ್ಪನ್ನ ಇ ಕಾಮರ್ಸ್‌ ಪ್ರವೇಶಿಸಲಿ: ಸ್ವಸಹಾಯ ಸಂಘಗಳ(ಎಸ್‌ಎಚ್‌ಜಿ) ಉತ್ಪನ್ನಗಳು ಇ ಕಾಮರ್ಸ್‌ ಪ್ರವೇಶಿಸಬೇಕು. ಆಗ ಆರ್ಥಿಕವಾಗಿ ಮತ್ತಷ್ಟು ಸದೃಢವಾಗಲು ಸಾಧ್ಯವಿದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಹೇಳಿದರು. ಸಹಕಾರಿ ಧ್ವಜಾರೋಹಣ ನೆರವೇರಿಸಿ, ಸಹಕಾರಿ ಲಾಂಭನ ಅನಾವರಣಗೊಳಿಸಿ ಮಾತನಾಡಿದ ಅವರು, ಸ್ವಸಹಾಯ ಗುಂಪುಗಳು ಸಮಾಜದ ಉನ್ನತಿಗೆ ಪ್ರೇರಣೆಯಾಗಿವೆ. ಮಹಿಳಾ ಶಕ್ತಿಯ ದೃಢತೆಯ ಜೊತೆಗೆ ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ಮತ್ತು ಮಹಿಳಾ ಪರಿವಾರದ ಅಭಿವೃದ್ಧಿಗೆ ಪೂರಕವಾಗಿದೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಮಧ್ಯಪ್ರದೇಶಗಳಲ್ಲಿ ಸ್ವಸಹಾಯ ಗುಂಪುಗಳು ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಿವೆ ಎಂದು ಶ್ಲಾಘಿಸಿದರು. ಕಳೆದ 25 ವರ್ಷಗಳಲ್ಲಿ ನವೋದಯ ಸ್ವಸಹಾಯ ಗುಂಪುಗಳ ಕಾರ್ಯವೈಖರಿಯನ್ನು ಪ್ರಶಂಸಿದ ರಾಜ್ಯಪಾಲರು, ಸಹಕಾರ ತತ್ವ ಎಂದರೆ, ಸಹಕಾರದ ನೆರವು ಎಂದರ್ಥ. ಮಹಿಳಾ ಸಬಲೀಕರಣ ಹಾಗೂ ಜಾಗೃತಿಗೆ ಇದು ಕಾರಣವಾಗಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಆರ್ಥಿಕ ಕ್ಷಮತೆಯನ್ನು ಮೂಡಿಸುತ್ತಿದೆ. ನವೋದಯ ಎಂಬುದು ಅಭಿವೃದ್ಧಿ ಪಥದಲ್ಲಿ ಹೊಸ ಉಗಮಕ್ಕೆ ನಾಂದಿಯಾಗಲಿದೆ ಎಂದು ರಾಜ್ಯಪಾಲರು ಹಾರೈಸಿದರು.

ಮಹಿಳಾ ಸಬಲೀಕರಣ ಉದ್ದೇಶ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮಾತನಾಡಿ, ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ. ಇದಕ್ಕಾಗಿಯೇ ಗೃಹಲಕ್ಷ್ಮೀ ಯೋಜನೆಗೆ ವಾರ್ಷಿಕ 28 ಸಾವಿರ ಕೋಟಿ ರುಪಾಯಿಗಳನ್ನು ನೀಡಲಾಗುತ್ತಿದೆ. ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಹಾಕಲಾಗುತ್ತಿದೆ. ಮಹಿಳೆ ಸದೃಢವಾಗಿ ಬೆಳೆಯಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಕರೆ ನೀಡಿದರು.

ನಮ್ಮ ಸಮಾಜದಲ್ಲಿ ಪುರುಷರಿಗಿಂತ ಮಹಿಳೆಯರಲ್ಲಿ ಆರ್ಥಿಕ ಶಿಸ್ತು ಜಾಸ್ತಿ. ನೂರು ರುಪಾಯಿ ಕೊಟ್ಟರೂ ಅಷ್ಟೆ, ಒಂದು ಲಕ್ಷ ರುಪಾಯಿ ಕೊಟ್ಟರೂ ಅಷ್ಟೇ, ಸಂಸಾರವನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸಿಕೊಂಡು ಹೋಗುವ ಜಾಣ್ಮೆ ಮಹಿಳೆಯರಿಗೆ ಇದೆ. ಮಹಿಳೆಯರನ್ನು ಎಲ್ಲಿ ಗೌರವಿಸುತ್ತಾರೆ, ಪೂಜಿಸುತ್ತಾರೆ, ಆ ಜಾಗ ಅಭಿವೃದ್ಧಿ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು. ನವೋದಯ ಗ್ರಾಮೀಣ ವಿಕಾಸ ಸಂಸ್ಥೆ ಇವತ್ತು ಹೆಮ್ಮರವಾಗಿ ಬೆಳೆದಿದೆ. 8 ಜಿಲ್ಲೆಗಳಿಗೆ ಕಾರ್ಯಚಟುವಟಿಕೆ ವಿಸ್ತರಣೆ ಮಾಡಿಕೊಂಡು ಈಗ ರಾಜ್ಯ ಮಟ್ಟದ ಸಂಸ್ಥೆಯಾಗಿ ಬೆಳೆಸುತ್ತಿರುವುದು ನಿಜಕ್ಕೂ ಪ್ರಶಂಸಾರ್ಹವಾಗಿದೆ. ಡಾ.ರಾಜೇಂದ್ರ ಕುಮಾರ್ ಅವರು ಈ ಎರಡೂ ಕ್ಷೇತ್ರಗಳನ್ನು ಅತ್ಯಂತ ಜಾಣ್ಮೆಯಿಂದ ಸುಮಾರು 3 ದಶಕಗಳಿಂದ ಸ್ವಲ್ಪವೂ ವಿಶ್ವಾಸ ಕಳೆದುಕೊಳ್ಳದೆ ಮುನ್ನಡೆಸುವ ಮೂಲಕ ಸಹಕಾರಿ ಕ್ಷೇತ್ರದ ಭೀಷ್ಮ ಎನಿಸಿಕೊಂಡಿದ್ದಾರೆ ಎಂದು ಹೆಬ್ಬಾಳ್ಕರ್‌ ಹೇಳಿದರು.

ನನ್ನ ಜನ್ಮದಿನಕ್ಕಿಂತ ಯೋಧರ ಹೋರಾಟ ಮುಖ್ಯ: ಡಿಸಿಎಂ ಡಿಕೆಶಿ ಮನವಿ ಮಾಡಿದ್ದೇನು?

ಪ್ರಗತಿಗೆ ಪೂರಕ ಎಸ್‌ಎಚ್‌ಜಿ: ‘ಸಂತೃಪ್ತಿ’ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲೂ ಸ್ವಸಹಾಯ ಸಂಘಗಳು ಇದ್ದು, ಸಮಾಜದ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಸ್ವಸಹಾಯ ಸಂಘಗಳ ಮೂಲಕ ಸಂಘಟನೆ ಕಷ್ಟದ ಅರಿವು ಇದ್ದು, ದೇಶದ ಅಭಿವೃದ್ಧಿಯ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಈ ನಿಟ್ಟಿನಲ್ಲಿ ಎಸ್‌ಎಚ್‌ಜಿಯನ್ನು ರೂಪಿಸುತ್ತಿರುವ ಡಾ.ಎಂ.ಎನ್‌.ಆರ್‌. ಸಾಧನೆ ಶ್ಲಾಘನೀಯ ಎಂದರು.