ಬೆಂಗಳೂರು: ಇತ್ತೀಚೆಗೆ ಬಿಎಂಟಿಸಿ ಚಾಲಕನೊಬ್ಬ ಜ್ಯೋತಿಷಿ ಮಾತು ಕೇಳಿ ಒಂದೂವರೆ ಗಂಟೆ ತಡವಾಗಿ ಬಸ್‌ ಚಲಾಯಿಸಿದ್ದ ಪ್ರಕರಣವ ನೋಡಿದ್ದೇವೆ. ಆದರೆ, ಜ್ಯೋತಿಷಿ ಮಾತು ಕೇಳಿ ಇಲ್ಲೊಬ್ಬ ಮಹಿಳೆ ತನ್ನ ಅಣ್ಣನ ಹೆಂಡತಿ ವಿರುದ್ಧ ಮಾಟ-ಮಂತ್ರ ಮಾಡಿಸಿದ ಆರೋಪ ಮಾಡಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಗೋವಿಂದರಾಜನಗರ ನಿವಾಸಿ ಅಲಮೇಲು ಎಂಬುವರು ತನ್ನ ಸಂಬಂಧಿ ಮಂಜುಳಾ ಎಂಬುವರ ವಿರುದ್ಧ ವಿಜಯನಗರ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ಮೌಢ್ಯ ನಿಷೇಧ ಕಾಯ್ದೆ -2017 (3) ಮತ್ತು ಐಪಿಸಿ 307 (ಕೊಲೆ ಯತ್ನ) ಆರೋಪದಡಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಅಲಮೇಲು ಅವರು ಗೋವಿಂದರಾಜನಗರದಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಅಲಮೇಲು ಅವರ ಪುತ್ರ ಎಮ್‌.ಎಚ್‌.ಅಭಿಷೇಕ್‌ ಕಳೆದ ಮೇ 25ರಂದು ರಕ್ತದ ವಾಂತಿ ಮಾಡಿಕೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಯುವಕನನ್ನು ಪರೀಕ್ಷೆ ಮಾಡಿದ ವೈದ್ಯರು ಯಾವುದೇ ಕಾಯಿಲೆ ಇಲ್ಲ ಎಂದು ತಿಳಿಸಿದ್ದರು. ಆದರೂ ಅಲಮೇಲು ಅವರ ಪುತ್ರನ ರಕ್ತವಾಂತಿ ಮುಂದುವರೆದಿತ್ತು. ಹೀಗಾಗಿ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದರು.

ಪುತ್ರನ ಸ್ಥಿತಿ ಕಂಡು ಅಲಮೇಲು ಅವರು ಮಹಾಲಕ್ಷ್ಮೇಪುರ ಆಂಜನೇಯ ದೇವಾಲಯದ ಪೂಜಾರಿಯೊಬ್ಬರ ಬಳಿ ಕಷ್ಟಹೇಳಿಕೊಂಡಿದ್ದರು. ಬಳಿಕ ಪೂಜಾರಿಯ ಸಲಹೆಯಂತೆ ಅಲಮೇಲು ಜ್ಯೋತಿಷಿ ಬಳಿ ಹೋಗಿದ್ದರು. ಜ್ಯೋತಿಷಿ ಬಳಿ ಪುತ್ರನ ಸಮಸ್ಯೆಗೆ ಪರಿಹಾರ ಕೇಳಿದಾಗ ‘ನಿಮ್ಮ ಕುಟುಂಬದವರೊಬ್ಬರು ಮಾಟ-ಮಂತ್ರದ ಮೂಲಕ ತೊಂದರೆಯಾಗುವಂತೆ ಮಾಡಿದ್ದಾರೆ’ ಎಂದು ಜ್ಯೋತಿಷಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಂಜುಳಾ ವಿರುದ್ಧ ಅಲಮೇಲು ದೂರು ನೀಡಿದ್ದು, ಪೊಲೀಸರು ಮೌಢ್ಯ ನಿಷೇಧ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಪೊಲೀಸರಿಗೆ ಸವಾಲು:

ನಿಜಕ್ಕೂ ಈ ಪ್ರಕರಣವನ್ನು ಸಾಬೀತು ಮಾಡುವುದು ಕಷ್ಟ. ಸಾರ್ವಜನಿಕವಾಗಿ ಮಾಟ-ಮಂತ್ರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಆದರೆ ಈ ಪ್ರಕರಣದಲ್ಲಿ ದೂರುದಾರರ ಒತ್ತಡಕ್ಕೆ ಮಣಿದು ದೂರು ದಾಖಲಿಸಿಕೊಳ್ಳಲಾಗಿದೆ. ಮಹಿಳೆ ಮಾಟ-ಮಂತ್ರ ಮಾಡಿಸಿದ್ದಾರೆ ಎಂದು ಹೇಗೆ ಸಾಬೀತು ಮಾಡಲು ಸಾಧ್ಯ? ಜ್ಯೋತಿಷಿ ಮಾತು ಕೇಳಿ ಮಹಿಳೆ ದೂರು ನೀಡಿದ್ದಾರೆ. ಜ್ಯೋತಿಷಿ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಹಿರಿಯ ಅಧಿಕಾರಿ ಬಳಿ ಚರ್ಚಿಸಲಾಗುವುದು ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.