ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ವಿಚಾರಕ್ಕೆ ಮಹಿಳೆಯೊಬ್ಬರು ವಿಮಾನ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರೊಂದಿಗೆ ರಂಪಾಟ ನಡೆಸಿದ್ದಾರೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಘಟನೆಯ ತನಿಖೆ ಮುಂದುವರೆದಿದೆ.

ಬೆಂಗಳೂರು (ಜೂ.20): ಲಗೇಜ್ ವಿಚಾರಕ್ಕೆ ವಿಮಾನದಲ್ಲಿ ಸಿಬ್ಬಂದಿ ಮತ್ತು ಪ್ರಯಾಣಿಕರೊಂದಿಗೆ ರಂಪಾಟ ಮಾಡಿದ್ದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ಯಲಹಂಕ ಮೂಲದ ವ್ಯಾಸ್ ಹಿರಲ್ ಮೋಹನ್ ಬಾಯಿ ಎಂಬ ಮಹಿಳೆ,

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೂನ್ 17ರಂದು ಲಗೇಜ್ ವಿಚಾರಕ್ಕೆ ರಂಪಾಟ ಮಾಡಿದ್ದಳು. AI 2749 F ವಿಮಾನದಲ್ಲಿ ಸೂರತ್‌ಗೆ ತೆರಳುತ್ತಿದ್ದ ಈ ಮಹಿಳೆ, ಲಗೇಜ್ ಸೀಟ್ ಬಳಿ ಇರಿಸಿದ್ದಕ್ಕೆ ವಿಮಾನ ಸಿಬ್ಬಂದಿ ಪ್ರಶ್ನಿಸಿದಾಗ ಅನುಚಿತವಾಗಿ ವರ್ತಿಸಿದ್ದಾಳೆ.

ಸಿಬ್ಬಂದಿಯ ಜೊತೆ ಕಿರಿಕ್ ಮಾಡಿದ ಮಹಿಳೆ, ಸಹ ಪ್ರಯಾಣಿಕರೊಂದಿಗೂ ರಂಪಾಟ ಮಾಡಿದ್ದಾಳೆ. ವಿಮಾನ ಸಿಬ್ಬಂದಿ ಮಹಿಳೆಯನ್ನು ಇಳಿಸಿ ವಿಮಾನ ನಿಲ್ದಾಣ ಪೊಲೀಸರ ವಶಕ್ಕೆ ನೀಡಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಮಹಿಳೆ ಪೊಲೀಸ್ ಠಾಣೆಯಲ್ಲೂ ಕಿರಿಚಾಡಿ, ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಆರೋಪವಿದೆ.

ಸದ್ಯ ಮಹಿಳೆ ವಿರುದ್ಧ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕೆಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.