Asianet Suvarna News Asianet Suvarna News

ನಾಳೆ ಬೆಳಗಾವಿ ಕಲಾಪ ಆರಂಭ: ಚುನಾವಣೆಗೆ ಮುನ್ನ ‘ಕೊನೆ’ ಅಧಿವೇಶನ

ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರ ಆರೋಪ-ಪ್ರತ್ಯಾರೋಪಗಳಿಗೆ ಈ ಅಧಿವೇಶನ ವೇದಿಕೆ ಒದಗಿಸಿದಂತಾಗಲಿದೆ. 

Winter Session Will Be Starts on December 19th in Belagavi grg
Author
First Published Dec 18, 2022, 8:00 AM IST

ಬೆಂಗಳೂರು(ಡಿ.18):  ಗಡಿ ವಿವಾದದ ಕಿಡಿಯ ನಡುವೆಯೇ ಕುಂದಾನಗರಿ ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರ ಆರೋಪ-ಪ್ರತ್ಯಾರೋಪಗಳಿಗೆ ಈ ಅಧಿವೇಶನ ವೇದಿಕೆ ಒದಗಿಸಿದಂತಾಗಲಿದೆ. ಮುಂದಿನ ಬಜೆಟ್‌ ಅಧಿವೇಶನ ಕೇವಲ ನೆಪ ಮಾತ್ರ ನಡೆಯುವುದರಿಂದ ಬಹುತೇಕ ಈ ಅಧಿವೇಶನ ರಾಜಕೀಯ ಚಟುವಟಿಕೆಗಳಿಂದಾಗಿ ಮಹತ್ವ ಪಡೆಯಲಿದೆ.

ಹದಿನೈದನೇ ವಿಧಾನಸಭೆಯ ಹದಿನಾಲ್ಕನೇ ಅಧಿವೇಶನ ಇದಾಗಿದ್ದು, ಸೋಮವಾರ ಬೆಳಗ್ಗೆ 11 ಗಂಟೆಗೆ ಸದನದ ಕಲಾಪ ಆರಂಭವಾಗಲಿದೆ. ಈ ತಿಂಗಳ 30ರವರೆಗೆ ಅಧಿವೇಶನದ ಕಲಾಪ ನಡೆಯಲಿದೆ. ಪರಿಶಿಷ್ಟಜಾತಿ ಮತ್ತು ಪಂಗಡಕ್ಕೆ ಮೀಸಲಾತಿ, ಪಂಚಮಸಾಲಿಗೆ ಮೀಸಲಾತಿ, 40 ಪರ್ಸೆಂಟ್‌ ಸರ್ಕಾರ, ಗಡಿ ವಿವಾದ, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಬಿಜೆಪಿಗೆ ರೌಡಿಗಳ ಸೇರ್ಪಡೆ, ನೀರಾವರಿ ಯೋಜನೆಗಳ ಜಾರಿಯಲ್ಲಿ ವಿಳಂಬ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ಪ್ರತಿಪಕ್ಷಗಳು ಸಿದ್ದತೆ ಕೈಗೊಂಡಿವೆ.

Belagavi News: QR Code ಮೂಲಕವೇ ಸಿಗಲಿದೆ ಎಲ್ಲ ಮಾಹಿತಿ!

ಆಡಳಿತ ಪಕ್ಷ ಬಿಜೆಪಿಯನ್ನು ಕಟ್ಟಿಹಾಕಲು ಪ್ರತಿಪಕ್ಷ ಕಾಂಗ್ರೆಸ್‌, ಜೆಡಿಎಸ್‌ ರಾಜಕೀಯ ತಂತ್ರಗಾರಿಕೆ ರೂಪಿಸಿದರೆ, ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಬಿಜೆಪಿ ಸರ್ಕಾರವು ಸಹ ತನ್ನ ಬತ್ತಳಿಕೆಯಲ್ಲಿ ಹಲವು ಅಸ್ತ್ರಗಳನ್ನು ಇಟುಕೊಂಡಿದೆ. ಇದೇ ವೇಳೆ ನಾಲ್ಕು ಹೊಸ ವಿಧೇಯಕ ಮತ್ತು ಎರಡು ಈಗಾಗಲೇ ಮಂಡಿಸಿರುವ ವಿಧೇಯಕ ಸೇರಿದಂತೆ ಈವರೆಗೆ ಆರು ವಿಧೇಯಕಗಳು ಮಂಡನೆಯಾಗುವುದು ಖಚಿತವಾಗಿದೆ. ಅಧಿವೇಶನ ಪ್ರಾರಂಭವಾದ ಬಳಿಕ ಮತ್ತಷ್ಟುವಿಧೇಯಕಗಳ ಮಂಡನೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ. ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಖಾಸಗಿ ವಿಧೇಯಕ ಮಂಡನೆಯಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಮೀಸಲು ಸಮರ:

ಎಸ್‌ಸಿ/ಎಸ್‌ಟಿ ಮೀಸಲಾತಿ ಪ್ರಮಾಣವನ್ನು ಸರ್ಕಾರವು ಹೆಚ್ಚಳ ಮಾಡಿ ಮಹತ್ವದ ತೀರ್ಮಾನ ಕೈಗೊಂಡಿದೆ. ಆದರೆ, ಕೇಂದ್ರ ಸರ್ಕಾರವೇ ಲೋಕಸಭೆಯಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಪ್ರಸ್ತಾಪ ಇಲ್ಲ ಎಂದು ಹೇಳಿಕೆ ನೀಡಿರುವುದು ರಾಜ್ಯ ಸರ್ಕಾರಕ್ಕೆ ಇರಿಸುಮುರಿಸು ಉಂಟು ಮಾಡಿದೆ. ಇದು ಕಾಂಗ್ರೆಸ್‌ಗೆ ಪ್ರಮುಖ ಅಸ್ತ್ರವಾಗಿದೆ. ಕೇಂದ್ರದ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಸರ್ಕಾರಕ್ಕೆ ಮುಖಭಂಗವನ್ನುಂಟು ಮಾಡುವ ತಂತ್ರಗಾರಿಕೆ ಹೆಣೆದಿದೆ. ಸರ್ಕಾರವು ಇದಕ್ಕೆ ತಿರುಗೇಟು ನೀಡಲು ಸರ್ವಸನ್ನದ್ಧವಾಗಿದ್ದು, ಮೀಸಲಾತಿ ವಿಚಾರದಲ್ಲಿ ತನ್ನ ನಿಲುವು ಗಟ್ಟಿಯಾಗಿದೆ ಎಂಬ ಸಂದೇಶವನ್ನು ಮತ್ತೊಮ್ಮೆ ಸದನದಲ್ಲಿ ಸಾರಿ ಹೇಳುವ ಸಾಧ್ಯತೆ ಇದೆ.

ಗಡಿ ವಿವಾದ ಪ್ರಸ್ತಾಪ?:

ಇನ್ನು, ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ವೇಳೆಯಲ್ಲಿಯೇ ಗಡಿ ವಿವಾದ ಸೃಷ್ಟಿಯಾಗಿದೆ. ಇದನ್ನು ಸದನದಲ್ಲಿ ಪ್ರಸ್ತಾಪಿಸಲು ಪ್ರತಿಪಕ್ಷಗಳು ಸನ್ನದ್ಧವಾಗಿವೆ. ಚುನಾವಣೆ ವೇಳೆ ಗಡಿವಿವಾದದ ಕ್ಯಾತೆಯನ್ನು ತೆಗೆದುಕೊಂಡು ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್‌ ದೂರಿದೆ. ಇದಕ್ಕೆ ತಿರುಗೇಟು ನೀಡಲು ಸರ್ಕಾರವು ಸದನವನ್ನು ಬಳಸಿಕೊಳ್ಳಲು ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರ ಇದ್ದರೂ ವಿವಾದವನ್ನು ಬಗೆಹರಿಸಲು ಸಾಧ್ಯವಾಗದಿರುವ ವಿಚಾರದನ್ನು ಪ್ರಸ್ತಾಪಿಸಿ ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

40% ಬಗ್ಗೆ ಕಾವೇರಿದ ಚರ್ಚೆ ಸಾಧ್ಯತೆ:

ಸರ್ಕಾರ ವಿರುದ್ಧ ಕೇಳಿ ಬರುತ್ತಿರುವ 40 ಪರ್ಸೆಂಟ್‌ ಭ್ರಷ್ಟಾಚಾರವನ್ನು ಸದನದಲ್ಲಿ ಪ್ರಸ್ತಾಪಿಸಲಿದೆ. ಹಿಂದಿನ ಎರಡು ಅಧಿವೇಶನದಲ್ಲಿ ಭ್ರಷ್ಟಾಚಾರ ಕುರಿತು ಪ್ರಸ್ತಾಪಿಸಲು ಕಾಂಗ್ರೆಸ್‌ ಅನುಮತಿ ನೀಡುವಂತೆ ಕೋರಿತ್ತು. ಆದರೆ, ಎರಡು ಬಾರಿಯೂ ಅವಕಾಶ ಸಿಕ್ಕಿರಲಿಲ್ಲ. ಸದನದ ಹೊರಗೆ ಹಲವು ಬಾರಿ 40 ಪರ್ಸೆಂಟ್‌ ವಿಚಾರವನ್ನು ಪ್ರಸ್ತಾಪಿಸಿದೆ. ಹೀಗಾಗಿ ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಲು ಪ್ರತಿಪಕ್ಷ ಸಿದ್ಧತೆ ಕೈಗೊಂಡಿದೆ. ಸರ್ಕಾರವು ಈ ಬಾರಿಯೂ ಅವಕಾಶ ನೀಡುವ ಸಾಧ್ಯತೆ ತೀರಾಕಡಿಮೆ ಇದೆ ಎಂದು ಹೇಳಲಾಗಿದೆ. ಈ ಬಾರಿ ಅವಕಾಶ ನೀಡದಿದ್ದರೆ ಸದನದಲ್ಲಿಯೇ ಹೋರಾಟ ನಡೆಸಲು ಚಿಂತನೆ ಮಾಡಲಾಗಿದೆ.

ರೈತರು, ನೀರಾವರಿ ಚರ್ಚೆ:

ಕಬ್ಬು ಬೆಳೆಗಾರರ ಬೇಡಿಕೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ವಿಚಾರವು ಸಹ ಪ್ರಸ್ತಾಪಿಸಲು ಪ್ರತಿಪಕ್ಷಗಳು ಮುಂದಾಗಿವೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ನಿರ್ಲಕ್ಷ್ಯದ ಬಗ್ಗೆಯೂ ಚರ್ಚೆಯಾಗುವ ನಿರೀಕ್ಷೆ ಇದೆ. ನೀರಾವರಿ ಯೋಜನೆಗಳ ಜಾರಿ ವಿಚಾರದಲ್ಲಿ ಸರ್ಕಾರದ ವಿಳಂಬ ಧೋರಣೆ ಬಗ್ಗೆಯು ಸದನದಲ್ಲಿ ಚರ್ಚೆಯಾಗಲಿದೆ. ಮೇಕೆದಾಟು, ಎತ್ತಿನಹೊಳೆ, ಕಳಸಾ ಬಂಡೂರಿ ನೀರಾವರಿ ಯೋಜನೆಗಳ ಕುರಿತು ಚರ್ಚಿಸುವ ನಿರೀಕ್ಷೆ ಇದೆ. ಈ ಎಲ್ಲದರ ನಡುವೆ ಪಿಎಸ್‌ಐ ನೇಮಕಾತಿ ಪ್ರಕರಣವು ಬೆಳಗಾವಿ ಅಧಿವೇಶನದಲ್ಲಿ ಸದ್ದು ಮಾಡಲಿದೆ ಎನ್ನಲಾಗಿದೆ.

ಚಳಿಗಾಲದ ಅಧಿವೇಶನದಲ್ಲಿಯೇ ಸದಾಶಿವ ಆಯೋಗದ ವರದಿ ಮಂಡಿಸಿ; ದಸಂಸ ಆಗ್ರಹ

ಅಧಿವೇಶನದಲ್ಲಿ 4 ಹೊಸ, 2 ಹಿಂದಿನ ವಿಧೇಯಕ

ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಆರು ವಿಧೇಯಕಗಳು ಮಂಡನೆಯಾಗಲಿವೆ. ಇದರಲ್ಲಿ ಎರಡು ವಿಧೇಯಕಗಳು ಈಗಾಗಲೇ ಮಂಡಿಸಲಾಗಿದೆ. ಅವುಗಳ ಕುರಿತು ಚರ್ಚಿಸಿ ಆಂಗೀಕರಿಸುವ ಪ್ರಕ್ರಿಯೆ ನಡೆಯಲಿದೆ. ಬೆಂಗಳೂರು ಭೂ ಸುಧಾರಣೆ ತಿದ್ದುಪಡಿ ವಿಧೇಯಕ, ಗಡಿಪ್ರದೇಶ ಅಭಿವೃದ್ಧಿ ವಿಧೇಯಕ, ಕನ್ನಡ ಸಮಗ್ರ ಅಭಿವೃದ್ಧಿ ವಿಧೇಯಕ ಸೇರಿದಂತೆ ಆರು ವಿಧೇಯಕಗಳು ಮಂಡನೆಯಾಗಲಿವೆ. ಕೋವಿಡ್‌ ಇಲ್ಲದಿರುವುದರಿಂದ ಈ ಬಾರಿ ಯಾವುದೇ ರೀತಿಯ ನಿರ್ಬಂಧ ಇಲ್ಲ. ಪ್ರಶ್ನೋತ್ತರ, ಶೂನ್ಯವೇಳೆ, ವಿಧೇಯಕ ಅಂಗೀಕಾರ, ಚರ್ಚೆಗಳು ಯಥಾಪ್ರಕಾರ ನಡೆಯಲಿವೆ. ಸಾರ್ವಜನಿಕರಿಗೆ ಕಲಾಪ ವೀಕ್ಷಿಸಲು ಮುಕ್ತ ಅವಕಾಶ ನೀಡಲಾಗಿದೆ.

ಉತ್ತರ ಕರ್ನಾಟಕ ಬಗ್ಗೆ ಚರ್ಚೆ: ಸಿಎಂ

ಹಾವೇರಿ: ಸೋಮವಾರದಿಂದ ನಡೆಯಲಿರುವ ಬೆಳಗಾವಿ ಅಧಿವೇಶನದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ

ಕರ್ನಾಟಕ ವಿರುದ್ಧ ‘ಮಹಾ’ ಪ್ರತಿಭಟನೆ

ಮುಂಬೈ: ಬೆಳಗಾವಿ, ಕಾರವಾರ, ನಿಪ್ಪಾಣಿ ಸೇರಿದಂತೆ ಮರಾಠಿ ಭಾಷಿಕ ಪ್ರದೇಶಗಳನ್ನು ಒಳಗೊಂಡ ಅಖಂಡ ಮಹಾರಾಷ್ಟ್ರ ರಚನೆ ಶೀಘ್ರವೇ ಆಗಬೇಕು ಎಂದು ಎನ್‌ಸಿಪಿ, ಕಾಂಗ್ರೆಸ್‌ ಮತ್ತು ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಮೈತ್ರಿಕೂಟ ಮುಂಬೈನಲ್ಲಿ ಶನಿವಾರ ಬೃಹತ್‌ ಪ್ರತಿಭಟನೆ ನಡೆಸಿತು.
 

Follow Us:
Download App:
  • android
  • ios