ಬೆಂಗಳೂರು[ಜ.08]: ಮುಂಬರುವ ಬಜೆಟ್‌ನಲ್ಲಿ ಮೀನುಗಾರರಿಗೆ ಉಚಿತವಾಗಿ ದ್ವಿಚಕ್ರ ವಾಹನ ವಿತರಣೆ ಯೋಜನೆ ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪಕ್ಷದ ಕಾರ್ಯಕರ್ತರಿಂದ ಅಹವಾಲು ಆಲಿಕೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮೊದಲ ಬಾರಿಗೆ ಕೃಷಿಕರ ರೀತಿಯಲ್ಲಿ ಮೀನುಗಾರರಿಗೆ ಸಹ ಕಿಸಾನ್‌ ಕಾರ್ಡ್‌ ವಿತರಿಸಲಾಗುತ್ತದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ 28 ರಿಂದ 30 ಸಾವಿರ ಮೀನುಗಾರರಿಗೆ ಕಾರ್ಡ್‌ ಸಿಗಲಿದ್ದು, ಹಂತ ಹಂತವಾಗಿ ಎಲ್ಲ ಮೀನುಗಾರರಿಗೆ ದೋಣಿ ಹಾಗೂ ಸಾಕಾಣಿಕೆ ಕೇಂದ್ರಗಳನ್ನು ಆಧರಿಸಿ ಕ್ರೆಡಿಟ್‌ ಕಾರ್ಡ್‌ ವಿತರಿಸಲಾಗುತ್ತದೆ ಎಂದರು.

ಮೀನುಗಾರರಿಗೆ ಹೊಸ ಬದುಕು ಕಟ್ಟಿಕೊಡಲಾಗುತ್ತದೆ. ಕಾರವಾರ ಜಿಲ್ಲೆಯ ಪ್ರಗತಿಗೆ ಹೆಚ್ಚಿನ ಅನುದಾನ ನೀಡಲಾಗುತ್ತದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮೀನುಗಾರರ ದ್ವಿಚಕ್ರ ವಾಹನಗಳ ವಿತರಣೆ, ಮೀನು ಮರಿಗಳ ಮಾರಾಟಗಾರರ ಹಾಗೂ ಕಡಲಲ್ಲಿ ಮೀನುಗಾರರ ರಕ್ಷಣೆಗೆ ಹೊಸ ಯೋಜನೆ ಜಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಏ.26ರಂದು ಸರ್ಕಾರದಿಂದ ಸಾಮೂಹಿಕ ವಿವಾಹ

ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ 110 ದೇವಾಲಯಗಳಲ್ಲಿ ಏ.26ರಂದು ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ದಂಪತಿಗಳು ಹೊಸ ಬಾಳಿಗೆ ಕಾಲಿಡಲಿದ್ದಾರೆ ಇದೇ ವೇಳೆ ಸಚಿವರು ಹೇಳಿದರು. ಸಾಮೂಹಿಕ ವಿವಾಹ ಕಾರ್ಯಕ್ರಮದ ಯಶಸ್ಸಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ದೇವಾಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ಸಮಾಜದ ಕಟ್ಟಕಡೆಯ ಬಡವನಿಗೆ ವಿನಿಯೋಗಿಸಲು ಅರ್ಥಪೂರ್ಣ ಯೋಜನೆ ರೂಪಿಸಲಾಗುತ್ತದೆ. ರಾಜ್ಯದ ಆಯ್ದ 110 ದೇವಾಲಯಗಳಲ್ಲಿ ಆಯೋಜಿಸಿರುವ ಸಾಮೂಹಿಕ ವಿವಾಹ ಮಹೋತ್ಸವದ ಪ್ರಚಾರದ ಕರಪತ್ರಗಳನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಲಿದ್ದಾರೆ. ಪ್ರಥಮ ಹಂತದ ವಿವಾಹ ಮಹೋತ್ಸವದಲ್ಲಿ ಒಂದು ಸಾವಿರ ಜೋಡಿಗಳು ಮದುವೆ ಆಗಲಿದ್ದು, ಮೇ 26ರಂದು ಎರಡನೇ ಹಂತದ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ವಿವಾಹ ಕಾರ್ಯಕ್ರಮದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಜನರು ಭಾಗವಹಿಸುವ ಅಂದಾಜಿದೆ. ಇದಕ್ಕಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಕಷ್ಟುಶ್ರಮಿಸುತ್ತಿದ್ದಾರೆ. ವಧುವಿಗೆ 8 ಗ್ರಾಂ ಚಿನ್ನದ ಮಾಂಗಲ್ಯ, 10 ಸಾವಿರ ರು. ಮೊತ್ತದ ಧಾರೆ ಸೀರೆ ಹಾಗೂ ವರನಿಗೆ 8 ಸಾವಿರ ರು. ಮೊತ್ತದ ಬಟ್ಟೆಸೇರಿದಂತೆ ಒಂದು ಜೋಡಿಗೆ ಒಟ್ಟು 50 ಸಾವಿರ ರು. ವಿನಿಯೋಗಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಅದ್ಧೂರಿಯಾಗಿ ಶಾ ಕಾರ್ಯಕ್ರಮ

ಮಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಭಾಗವಹಿಸುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಎಂದು ಆ ಜಿಲ್ಲೆಯ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕಾಂಗ್ರೆಸ್ಸಿಗರು ಯಾರನ್ನು ಸ್ವಾಗತಿಸುತ್ತಾರೆ? ಟೀಕೆಗಳು ಅನಿವಾರ್ಯ ಎನ್ನುವ ಕಾರಣಕ್ಕೆ ಅವರು ಟೀಕಿಸುತ್ತಾರೆ. ಈಗಾಗಲೇ ಪೌರತ್ವ ಕಾಯ್ದೆ ಜಾಗೃತಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಹಸ್ರಾರು ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.