ಕೇರಳಕ್ಕೆ ಪಾಲಾಗಿಲ್ಲ, KSRTC ಬಳಸಲು ಕರ್ನಾಟಕಕ್ಕೆ ನಿಷೇಧವಿಲ್ಲ: ಡಿಸಿಎಂ ಸವದಿ!

* ಕೇರಳಕ್ಕೆ ಸಿಕ್ಕಿಲ್ಲ ಕೆಎಸ್‌ಆರ್‌ಟಿಸಿ: ಡಿಸಿಎಂ ಸವದಿ

* ತೀರ್ಪಿತ್ತ ಸಂಸ್ಥೆಯೇ ರದ್ದಾಗಿದೆ

* ನಮಗೆ ಯಾವುದೇ ನಿಷೇಧವಿಲ್ಲ

Will fight legally to protect KSRTC acronym for Karnataka transport Laxman Savadi pod

ಬೆಂಗಳೂರು(ಜೂ.05): ಕೆಎಸ್‌ಆರ್‌ಟಿಸಿಗೆ ನೀಡಲಾದ ಟ್ರೇಡ್‌ ಮಾರ್ಕ್ ಪ್ರಮಾಣ ಪತ್ರದ ವಿರುದ್ಧ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ (ಐಪಿಎಬಿ) ಮುಂದೆ ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ಯಾವುದೇ ಅಂತಿಮ ಆದೇಶ ಹೊರಬಿದ್ದಿಲ್ಲ ಎಂದು ಸಾರಿಗೆ ಖಾತೆ ಹೊಣೆ ಹೊತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.

ನಮ್ಮ ಸಾರಿಗೆ ಸಂಸ್ಥೆಗೆ ಕೇಂದ್ರ ಟ್ರೇಡ್‌ ಮಾರ್ಕ್ ರಿಜಿಸ್ಟ್ರಿ ಅವರಿಂದ ಇಂತಹ ಯಾವುದೇ ಸೂಚನೆ ಅಥವಾ ಆದೇಶ ಇಂದಿನವರೆಗೂ ಬಂದಿಲ್ಲ. ಕೆಎಸ್‌ಆರ್‌ಟಿಸಿ ಎಂಬ ಹೆಸರನ್ನು ಕರ್ನಾಟಕವು ಮುಂದೆಯೂ ಬಳಸಲು ಸ್ವತಂತ್ರವಾಗಿದೆ. ಈ ಬಗ್ಗೆ ಕೇರಳ ಸರ್ಕಾರದ ಅನುಮತಿ ನಮಗೆ ಬೇಕಾಗಿಲ್ಲ. ಅಗತ್ಯವಿದ್ದರೆ ನ್ಯಾಯಾಲಯಲ್ಲಿ ಕಾನೂನಾತ್ಮಕ ಹೋರಾಟಗಳನ್ನು ನಡೆಸಲು ನಾವು ಹಿಂದೆ ಬೀಳುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಶುಕ್ರವಾರ ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಕರ್ನಾಟಕದಿಂದ ಕೆಎಸ್‌ಆರ್‌ಟಿಸಿ ಎಂಬ ಹೆಸರು ಕೈತಪ್ಪಿದೆ ಎಂಬ ಆತಂಕ ಬೇಕಾಗಿಲ್ಲ. ಇದು ವಾಸ್ತವಕ್ಕೆ ದೂರವಾದ ಸಂಗತಿಯಾಗಿದೆ ಎಂಬುದು ದೃಢಪಟ್ಟಿದೆ. ಕೇರಳ ಸರ್ಕಾರವು ಈ ಬಗ್ಗೆ ಏನೇ ಹೇಳಿಕೆ ನೀಡಿದರೂ ನಮ್ಮ ಕರ್ನಾಟಕ ಸರ್ಕಾರವು ಈ ಬಗ್ಗೆ ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ, ಸದರಿ ಟ್ರೇಡ್‌ ಮಾರ್ಕ್ ರಿಜಿಸ್ಟ್ರಿಯನ್ನು ಕಳೆದ ಏಪ್ರಿಲ್‌ 4ರಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ರದ್ದುಪಡಿಸಿದೆ. ಅಲ್ಲಿ ಬಾಕಿ ಇರುವ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ, ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿಯ ಟ್ರೇಡ್‌ ಮಾರ್ಕ್ ನೋಂದಣಿಯು ಪ್ರಸ್ತುತ ಜಾರಿಯಲ್ಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಕೆಎಸ್‌ಆರ್‌ಟಿಸಿ ಟ್ರೇಡ್‌ ಮಾರ್ಕ್ ಬಳಕೆ ಮಾಡುವ ವಿರುದ್ಧವಾಗಿ ಯಾವುದೇ ಕಾನೂನಾತ್ಮಕ ಅಡೆತಡೆಯಾಗಲಿ ಅಥವಾ ನಿಷೇಧವಾಗಲೀ ಇಲ್ಲ ಎಂಬುದನ್ನು ಗಮನಿಸಬೇಕು ಎಂದು ಸವದಿ ಅವರು ಸಮಜಾಯಿಷಿ ನೀಡಿದ್ದಾರೆ.

ಕೇರಳ ಎಸ್‌ಆರ್‌ಟಿಸಿಯು ನಮ್ಮ ಸಂಸ್ಥೆಗೆ ಅಥವಾ ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ನೀಡಲು ಉದ್ದೇಶಿಸಿದೆ ಎಂಬುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಒಂದು ವೇಳೆ ಅಂತಹ ನೋಟಿಸ್‌ ನೀಡಿದರೆ, ಸಂಸ್ಥೆಯಿಂದ ಸೂಕ್ತವಾದ ಉತ್ತರವನ್ನು ನೀಡಲಾಗುತ್ತದೆ. ನಮ್ಮ ಹಕ್ಕುಗಳನ್ನು ರಕ್ಷಿಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ನಾವು ಪ್ರಸ್ತುತ ನಮ್ಮ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದೇವೆ. ಆದ್ದರಿಂದ ಊಹಾಪೋಹದ ಯಾವುದೇ ವದಂತಿಯನ್ನು ನಂಬಿ ಆತಂಕಪಡಬೇಕಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರು, ಎರಡು ದಿನ ಕಳೆದರೂ ಕೇರಳ ಸಾರಿಗೆ ನಿಗಮವು ತಮ್ಮ ಪರ ಟ್ರೇಡ್‌ ಮಾರ್ಕ್ ರಿಜಿಸ್ಟ್ರಿ ನೀಡಿದೆ ಎನ್ನಲಾದ ತೀರ್ಪಿನ ಪ್ರತಿ ಅಥವಾ ದಾಖಲೆಗಳನ್ನು ಈವರೆಗೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಈ ಟ್ರೇಡ್‌ ಮಾರ್ಕ್ ಗೊಂದಲ ಮುಂದುವರಿದಿದೆ. ನಮ್ಮ ಹಕ್ಕನ್ನು ರಕ್ಷಿಸಲು ಕಾನೂನು ಕ್ರಮ ಕೈಗೊಳ್ಳುವ ಸಂಬಂಧ ವಕೀಲರನ್ನು ಸಂಪರ್ಕಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios