'ತೆರವಾದ ದೇಗುಲ ಸ್ಥಳದಲ್ಲೇ ಭವ್ಯ ಮಂದಿರ ನಿರ್ಮಿಸ್ತೇವೆ'
* ಬಿಜೆಪಿ ಮಂದಿರ ಉಳಿಸುವ, ನಿರ್ಮಿಸುವಂತಹ ಪಕ್ಷ
* ತೆರವಾದ ದೇಗುಲ ಸ್ಥಳದಲ್ಲೇ ಭವ್ಯ ಮಂದಿರ ನಿರ್ಮಿಸ್ತೇವೆ
* ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ
ದಾವಣಗೆರೆ(ಸೆ.19): ಮೈಸೂರು ಜಿಲ್ಲೆ ನಂಜನಗೂಡು ಸಮೀಪದ ಹುಚ್ಚಗಣಿ ದೇಗುಲ ತೆರವು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಹತ್ವದ ಘೋಷಣೆ ಮಾಡಿದ್ದಾರೆ. ದೇವಸ್ಥಾನ ತೆರವಾದ ಸ್ಥಳದಲ್ಲೇ ಭವ್ಯ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
ಹುಚ್ಚಗಣಿ ದೇವಸ್ಥಾನ ವಿವಾದದ ಬಗ್ಗೆ ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಮೈಸೂರು ಜಿಲ್ಲೆಯಲ್ಲಿ ದೇವಸ್ಥಾನ ತೆರವಾದ ಜಾಗದಲ್ಲೇ ಮೊದಲಿದ್ದ ದೇಗುಲಕ್ಕಿಂತ ಭವ್ಯ ಮಂದಿರ ನಿರ್ಮಾಣವಾಗಲಿದೆ. ಬಿಜೆಪಿ ಮಂದಿರ ಉಳಿಸುವ, ನಿರ್ಮಿಸುವ ಕೆಲಸ ಮಾಡುವ ಪಕ್ಷ ಎಂದರು.
ಇದೇ ವೇಳೆ ವಿವಾದಕ್ಕೆ ಸಂಬಂಧಿಸಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಟೀಕೆಗಳಿಗೆ ತಿರುಗೇಟು ನೀಡಿದ ಅರುಣ್ ಸಿಂಗ್, ಮಸೀದಿ ಕಟ್ಟಿಸುವ ಮಾತನಾಡಬಹುದಾದ ಸಿದ್ದರಾಮಯ್ಯ ದೇವಸ್ಥಾನಗಳ ಬಗ್ಗೆ ಮಾತನಾಡತೊಡಗಿದ್ದು ಯಾವತ್ತಿನಿಂದ? ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಎಂದಿಗೂ ದೇವಸ್ಥಾನ ಉಳಿಸುವ ಮಾತುಗಳನ್ನಾಡುತ್ತಿರಲಿಲ್ಲ. ಈಗ ಹಿಂದೂ ವಿರೋಧಿ ಸಿದ್ದರಾಮಯ್ಯ ಮಂದಿರಗಳ ಬಗ್ಗೆ ಮಾತನಾಡುತ್ತಾರೆ. ಮಸೀದಿ ಕಟ್ಟಿಸುವ ಮಾತನಾಡಬಹುದಾದ ಸಿದ್ದರಾಮಯ್ಯ ಈಗ ಇದ್ದಕ್ಕಿದ್ದಂತೆ ದೇವಸ್ಥಾನದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಬಿಜೆಪಿಯವರ ಮನಸ್ಸಿನಲ್ಲಿ ದೇವತೆಗಳು ಸದಾ ಇರುತ್ತಾರೆ ಎಂದರು.