ಕನ್ನಡಿಗರ ಮೇಲಿನ ವಲಸಿಗರ ‘ದಾಳಿ’ಗೆ ಏನು ಪರಿಹಾರ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Sep 2018, 5:28 AM IST
Why migrants in Karnataka get attacked and solutions
Highlights

ಇತ್ತೀಚೆಗೆ ಊಬರ್‌ ಚಾಲಕನೊಬ್ಬನ ಮೇಲೆ ತಪ್ಪು ಕಲ್ಪನೆಯಿಂದ ದಿಲ್ಲಿವಾಲಾನೊಬ್ಬ ಪೊಲೀಸರಿಗೆ ದೂರು ನೀಡಿದ್ದ. ಅದಕ್ಕೂ ಮುನ್ನ ಹನುಮಂತನ ಚಿತ್ರ ಅಂಟಿಸಿದ ಚಾಲಕರೆಲ್ಲ ರೇಪಿಸ್ಟ್‌ಗಳು ಎಂದು ಹೊರರಾಜ್ಯದ ಯುವತಿ ಫೇಸ್‌ಬುಕ್‌ನಲ್ಲಿ ಬರೆದಿದ್ದಳು.

ಊಬರ್‌ ಟ್ಯಾಕ್ಸಿ ಚಾಲಕನೊಬ್ಬ ಟ್ರಾಫಿಕ್‌ ದಟ್ಟಣೆ ತಪ್ಪಿಸಲೆಂದೋ ಅಥವಾ ರಸ್ತೆ ಸುಂಕ ಉಳಿಸಲೆಂದೋ ತನ್ನ ಕ್ಯಾಬ್‌ನ ಮಾರ್ಗ ಬದಲಾಯಿಸಿದ ಮಾತ್ರಕ್ಕೆ ದೆಹಲಿ ಮೂಲದ ಪ್ರಯಾಣಿಕನೊಬ್ಬ ಅವನನ್ನು ಅಪಹರಣಕಾರನೆಂದು ತಿಳಿದು ಪೊಲೀಸ್‌ಗೆ ದೂರು ನೀಡಿದ ಸುದ್ದಿ ವರದಿಯಾಗಿತ್ತು. ಆ ದೆಹಲಿವಾಲಾನೇ ಸೆರೆಹಿಡಿದಿರುವ ವಿಡಿಯೋ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಚಾಲಕನಿಗೆ ಅಂತಹ ದುರುದ್ದೇಶವಿದ್ದುದು ಮೇಲ್ನೋಟಕ್ಕೆ ಕಂಡು ಬರುತ್ತಿಲ್ಲ ಎಂದಿದ್ದರು. ಊಬರ್‌ ಕಂಪನಿ ಸಹ ಕಳೆದೆರಡು ವರ್ಷಗಳಿಂದ ಆತ ವಿಶ್ವಾಸಾರ್ಹ ಚಾಲಕನೆಂದು ಗ್ರಾಹಕರ ಪ್ರಶಂಸೆ ಗಳಿಸಿದ್ದಾನೆ ಎಂದು ಸ್ಪಷ್ಟೀಕರಣ ನೀಡಿತು. ಇಷ್ಟಾದರೂ ಆ ದೆಹಲಿ ಮೂಲದ ಪ್ರಯಾಣಿಕ ಅಪಹರಣದ ಮೊಕದ್ದಮೆ ದಾಖಲಿಸಲು ಮುಂದಾದುದು ಮತ್ತು ಫೇಸ್‌ಬುಕ್‌ ಬಳಕೆದಾರರು ಆತನಿಗೆ ಎಲ್ಲಿಲ್ಲದ ಬೆಂಬಲ ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ಆಘಾತಕಾರಿ. ಇದು ಸ್ಥಳೀಯರನ್ನು ದುಷ್ಟರಂತೆ ಹಾಗೂ ಕಳಂಕಿತರಂತೆ ಬಿಂಬಿಸುವ ವ್ಯವಸ್ಥಿತ ಪ್ರಯತ್ನವಲ್ಲದೆ ಮತ್ತೇನು?

ಹೊರರಾಜ್ಯದವರು ಕನ್ನಡಿಗರನ್ನು, ಅದರಲ್ಲೂ ಆಟೋ ಮತ್ತು ಕ್ಯಾಬ್‌ ಚಾಲಕರುಗಳನ್ನು, ಗೂಂಡಾಗಳಂತೆ, ಖದೀಮರಂತೆ ಕಾಣುವ ಪ್ರವೃತ್ತಿ ಇಂದು ಸರ್ವೇ ಸಾಮಾನ್ಯವಾಗಿ ಹೋಗಿದೆ. ಕೆಲ ತಿಂಗಳ ಹಿಂದೆ ಹೊರರಾಜ್ಯದ ಹುಡುಗಿಯೊಬ್ಬಳು ಕಾರಿನ ಮೇಲೆ ಹನುಮಂತನ ಚಿತ್ರ ಅಂಟಿಸಿರುವ ಚಾಲಕರುಗಳೆಲ್ಲ ರೇಪಿಸ್ಟ್‌ಗಳು ಎಂದು ಫೇಸ್‌ಬುಕ್‌ನಲ್ಲಿ ಅವಹೇಳನ ಮಾಡಿದ್ದ ಸುದ್ದಿ ವರದಿಯಾಗಿತ್ತು. ಇಂತಹ ಪ್ರಕರಣ ಮರುಕಳಿಸಿದಲ್ಲಿ ಆಟೋ, ಕ್ಯಾಬ್‌ ಚಾಲಕರ ಸಂಘಗಳು ಮಾನನಷ್ಟಮೊಕದ್ದಮೆ ದಾಖಲಿಸಿದರೂ ತಪ್ಪಿಲ್ಲವೆನಿಸುತ್ತದೆ.

ಐಎಎಸ್‌, ಐಪಿಎಸ್‌ಗಳೇ ಭಾಷೆ ಕಲೀತಾರೆ. ಇವರಿಗೇನು ಸಮಸ್ಯೆ?

ಹೊರರಾಜ್ಯದವರು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಪ್ರತಿನಿತ್ಯ ಕನ್ನಡಿಗರೊಂದಿಗೆ ವ್ಯವಹರಿಸಲೇಬೇಕಾಗಿದೆ. ಅವರು ಇಲ್ಲಿ ಕನ್ನಡಿಗರೊಂದಿಗೆ ಬಾಳ್ವೆ ಮಾಡಬೇಕಾಗಿದೆ. ಇಂತಹ ಸನ್ನಿವೇಶದಲ್ಲಿ ಅವರಿಗೆ ಸ್ಥಳೀಯ ಭಾಷಾಜ್ಞಾನ ಅತ್ಯಗತ್ಯ. ಸ್ಥಳೀಯ ಭಾಷೆಯ ಗಂಧವಿಲ್ಲದವರು ಸಂವಹನದ ಸಮಸ್ಯೆಯಿಂದ ಸ್ಥಳೀಯರನ್ನು ಕಳ್ಳಕಾಕರಂತೆ, ರೇಪಿಸ್ಟ್‌ಗಳಂತೆ ಕಾಣುತ್ತಾರೆ. ಈ ಭಾಷಾಜ್ಞಾನದ ಕೊರತೆಯಿಂದಾಗಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಸಹಬಾಳ್ವೆ ಮಾಡಬೇಕಾದ ಕನ್ನಡಿಗರು ಮತ್ತು ಕನ್ನಡೇತರರ ನಡುವೆ ವೃಥಾ ಘರ್ಷಣೆ, ಅಸಹಿಷ್ಣುತೆಗಳು ಏರ್ಪಟ್ಟಿವೆ. ಆ ದೆಹಲಿ ಮೂಲದವ ಕನ್ನಡ ಬಲ್ಲವನಾಗಿದ್ದರೆ ಸಂವಹನದಲ್ಲಿನ ಒಂದು ಸಣ್ಣ ಲೋಪದಿಂದ ಇಷ್ಟುದೊಡ್ಡ ಪ್ರಮಾದವಾಗುತ್ತಿರಲಿಲ್ಲ.

ಸರ್ಕಾರದ ಆಡಳಿತ ನೀತಿಗಳಿಗೆ ಬದ್ಧರಾಗಿರುವ ಹೊರರಾಜ್ಯದ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳು ನಮ್ಮ ರಾಜ್ಯದಲ್ಲಿ ಕರ್ತವ್ಯ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ನಿರಾಯಾಸವಾಗಿ ಕನ್ನಡ ಕಲಿಯುತ್ತಾರೆ. ಆದರೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಹೊರರಾಜ್ಯದವರು ಸ್ಥಳೀಯ ಭಾಷೆ ಕಲಿಯುವ ಗೊಡವೆಗೇ ಹೋಗುವುದಿಲ್ಲ. ಕಳೆದ 15-20 ವರ್ಷಗಳಿಂದ ಕರ್ನಾಟಕದಲ್ಲಿದ್ದು, ಎರಡಕ್ಷರ ಕನ್ನಡ ಕಲಿಯಲು ಮನಸ್ಸು ಮಾಡದ ಹಲವು ವಲಸಿಗ ಸ್ನೇಹಿತರನ್ನು ನಾನು ಬಲ್ಲೆ.

ಮುಂಬೈ, ದಿಲ್ಲಿಯಲ್ಲೂ ಇದೇ ಸಮಸ್ಯೆ

ಇದು ಬರೀ ಕರ್ನಾಟಕದ ಅಥವಾ ಬೆಂಗಳೂರಿನ ಕತೆಯಲ್ಲ. ಅಭಿವೃದ್ಧಿ ಹೊಂದುತ್ತಿರುವ ಎಲ್ಲ ನಗರಗಳ ಕತೆ ಇದೇ ಆಗಿದೆ. ಮುಂಬೈ ನಗರ ಸ್ವಾತಂತ್ರ್ಯಪೂರ್ವದಿಂದಲೂ ಈ ಸಮಸ್ಯೆಯನ್ನು ಎದುರಿಸಿಕೊಂಡೇ ಬಂದಿದೆ. ಅಲ್ಲಿಯ ಮರಾಠಿ ಸ್ಥಳೀಯರು ಬಿಹಾರಿಗಳೊಂದಿಗೆ, ದೆಹಲಿವಾಲಾಗಳೊಂದಿಗೆ ಹಾಗೂ ಈಶಾನ್ಯ ರಾಜ್ಯದವರೊಂದಿಗೆ ನಿರಂತರ ಘರ್ಷಣೆಯಲ್ಲಿ ತೊಡಗಿದ್ದಾರೆ. ಇಂದು ಜಾಗತೀಕರಣದ ಪರಿಣಾಮವಾಗಿ ಎಲ್ಲ ರಾಜ್ಯಗಳ ವಿದ್ಯಾವಂತ ಯುವಕರೂ ಕಲಿಕೆಗೋ, ವ್ಯಾಪಾರಕ್ಕೋ, ಉದ್ಯೋಗಕ್ಕೋ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ವಲಸೆ ಹೋಗುವವರು ಸ್ಥಳೀಯ ಭಾಷೆ ಕಲಿಯಬೇಕಾದುದು ಅತ್ಯಗತ್ಯ.

ಇದನ್ನು ಬರೀ ಕನ್ನಡಿಗರ ಹಕ್ಕೊತ್ತಾಯದಂತಲ್ಲ, ಭಾರತದ ಎಲ್ಲ ಸ್ಥಳೀಯ ಭಾಷೆಗಳ ಹಕ್ಕೊತ್ತಾಯದಂತೆ ಪರಿಭಾವಿಸಬೇಕಾಗುತ್ತದೆ. ಏಕೆಂದರೆ ವಲಸಿಗರು ಸ್ಥಳೀಯರ ನುಡಿ ಕಲಿತರೆ ಅದರಿಂದ ಸ್ಥಳೀಯತೆಗೇನೂ ಕಾಯಕಲ್ಪವಾಗುವುದಿಲ್ಲ. ವಲಸಿಗರೇ ತಮ್ಮ ಹಿತಕ್ಕಾಗಿ, ನೆಮ್ಮದಿಯ ಹಾಗೂ ಸೌಹಾರ್ದಪೂರ್ಣ ಬದುಕಿಗಾಗಿ ತಮಗೆ ಅನ್ನ ನೀಡುತ್ತಿರುವ ನೆಲದ ಭಾಷೆ ಕಲಿಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಲಸಿಗರಿಗೆ ಕೆಲಸ ನೀಡುವ ಕಂಪನಿಗಳು ಅಂತಹ ಅಭ್ಯರ್ಥಿಗಳು ಸ್ಥಳೀಯ ಭಾಷೆ ಕಲಿತಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕಾಗುತ್ತದೆ. ಸ್ಥಳೀಯ ಆಡಳಿತವು ಕಂಪನಿಯ ಸಹಯೋಗದೊಂದಿಗೆ ಇಂತಹ ವಲಸಿಗ ಉದ್ಯೋಗಿಗಳಿಗೆ ನಿಗದಿತ ಅವಧಿಯ ಒಳಗಾಗಿ ಕನ್ನಡ ಕಲಿಸುವ ವ್ಯವಸ್ಥೆ ಮಾಡಬೇಕು. ಉದ್ಯೋಗವಿಲ್ಲದೆ ಅಲೆದಾಡುತ್ತಿರುವ ಲಕ್ಷಾಂತರ ಕನ್ನಡ ಉಪಾಧ್ಯಾಯರು/ಉಪನ್ಯಾಸಕರುಗಳಿಗೆ ಇದರಿಂದ ಒಂದು ಜೀವನೋಪಾಯ ಕೂಡ ಲಭಿಸಿದಂತಾಗುತತ್ತದೆ. ಭಾರತೀಯರಾಗಿದ್ದುಕೊಂಡು ಭಾರತದ ಒಳಗೇ ವಲಸಿಗರೆಂದು ಕರೆಸಿಕೊಳ್ಳುವುದು ನಿಜಕ್ಕೂ ನಾಚಿಕೆಗೇಡು. ಈ ಹೊಲಸು ಸಂಬೋಧನೆಯಿಂದ ಹೊರಬರಬೇಕೆಂದು ವಲಸಿಗರು ಎನಿಸಿಕೊಂಡವರು ಮೊದಲು ಮನಸ್ಸು ಮಾಡಬೇಕಾಗಿದೆ.

ಸರ್ಕಾರ ವಲಸಿಗರ ನೀತಿ ರೂಪಿಸಲಿ

ಕರ್ನಾಟಕದಲ್ಲಿ ಭಾಷಾ ಅಸಹಿಷ್ಣುತೆ ಹೊಸತೇನಲ್ಲ. ಏಕೀಕರಣವಾದ ಮೇಲೆ ಕನ್ನಡಿಗರು ತಮಿಳಿಗರೊಂದಿಗೆ, ಮರಾಠರೊಂದಿಗೆ ಹೋರಾಡುತ್ತಲೇ ತಮ್ಮ ಅಸ್ಮಿತೆ ಕಾಪಾಡಿಕೊಂಡು ಬಂದರು. ಆಗ ಕನ್ನಡಿಗರಿಗೆ ತಮ್ಮ ಉಳಿವಿಗಾಗಿ ತಾವು ಯಾರೊಂದಿಗೆ ಹೋರಾಡಬೇಕು ಎಂಬುದರ ಸ್ಪಷ್ಟತೆಯಾದರೂ ಇತ್ತು. ಆದರೆ ಇಂದು ಜಾಗತೀಕರಣವೆಂಬ ಕಾಣದ ಕೈಗಳು ಯಾರು ಯಾರಿಗೆ ಕಂಟಕವೆಂದೇ ಗೊತ್ತಾಗದಂತೆ ಎಲ್ಲವನ್ನೂ ಮಸುಕಾಗಿಸಿವೆ. ಹಿಂದೆ ಪರದೇಶಿಗಳು ನಮ್ಮ ನಮ್ಮ ನಡುವೆಯೇ ಜಗಳ ತಂದಿಟ್ಟು ತಮ್ಮ ಬೇಳೆ ಬೇಯಿಸಿಕೊಂಡ ಕತೆಯನ್ನು ನಾವು ಚರಿತ್ರೆಯ ಪುಸ್ತಕಗಳಲ್ಲಿ ಓದಿದ್ದೇವೆ. ಜಾಗತೀಕರಣದ ಇಂದಿನ ಸನ್ನಿವೇಶದಲ್ಲಿ ಕ್ಯಾಬ್‌ ಚಾಲಕ ಮತ್ತು ಆ ದೆಹಲಿವಾಲಾಗಳ ನಡುವಿನ ಜಗಳದ ಘಟನೆ ಅದೇ ಪರಕೀಯ ಕೈಗಳು ಚರಿತ್ರೆಯನ್ನು ಪುನರಾವರ್ತಿಸುತ್ತಿರುವುದರ ಪ್ರತೀಕದಂತೆ ಭಾಸವಾಗುತ್ತಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಾದ ವಲಸಿಗರ ನೀತಿಯನ್ನು ಇಡೀ ದೇಶಕ್ಕೆ ಅನ್ವಯಿಸುವಂತೆ ಜಾರಿಗೊಳಿಸಬೇಕಾಗಿದೆ. ಸ್ಥಳೀಯ ಭಾಷೆ ಕಲಿಯದೆ ಹೋದರೆ ತಮಗೆ ಭಾರತದ ಯಾವುದೇ ರಾಜ್ಯದಲ್ಲಿ ಉಳಿಗಾಲವಿಲ್ಲ ಎಂಬ ಎಚ್ಚರವನ್ನು ಭಾರತದ ಎಲ್ಲ ವಲಸಿಗರಲ್ಲೂ ಮೂಡಿಸಬೇಕಾಗಿದೆ. ಕಳೆದ ಐದು ವರ್ಷಗಳಿಂದ ಉಳಿದೆಲ್ಲ ಸರ್ಕಾರಗಳಿಗಿಂತಲೂ ಮೋದಿ ಸರ್ಕಾರ ಅಖಂಡ ಭಾರತವನ್ನು ನಿರ್ಮಿಸುವ ಆಶ್ವಾಸನೆಯನ್ನು ಹೆಚ್ಚಾಗಿ ನೀಡುತ್ತ ಬಂದಿದೆ. ಆದರೆ ವಲಸಿಗರು ಮತ್ತು ಸ್ಥಳೀಯರ ನಡುವಿನ ಅಸಹಿಷ್ಣುತೆ ಹೀಗೇ ಮುಂದುವರಿದರೆ ತನ್ನ ಕನಸಿನ ಅಖಂಡ ಭಾರತ ತನ್ನ ಕಣ್ಣೆದುರೇ ಛಿದ್ರವಾಗುತ್ತದೆ ಎಂಬುದು ಮುಖ್ಯವಾಗಿ ಕೇಂದ್ರಕ್ಕೆ ಮನವರಿಕೆಯಾಗಬೇಕಾಗಿದೆ.

- ಡಾ. ಟಿ.ಎನ್‌. ವಾಸುದೇವಮೂರ್ತಿ

loader