ಪಶ್ಚಿಮ ಘಟ್ಟದಲ್ಲಿ  ಕೆಲವೇ ದಿನಗಳ ಹಿಂದೆ ಅವದಿಗೂ ಮುನ್ನ ಮರಗಳು ಹೂ ಬಿಟ್ಟು ಆತಂಕ ಸೃಷ್ಟಿ ಮಾಡಿದ್ದವು. ಇದೀಗ  ಇಲ್ಲಿ ಮತ್ತೊಂದು ರೀತಿಯ ಆತಂಕ ಎದುರಾಗಿದೆ. ಸಂಪೂರ್ಣ ಹುಲ್ಲುಗಾವಲು ಈಗಲೇ ಒಣಗಿ ಹೋಗುತ್ತಿದೆ. 

ಮಂಗಳೂರು : ಮಳೆಗಾಲದಲ್ಲಿ ಭಾರಿ ಪ್ರಕೃತಿ ವೈಪರೀತ್ಯಕ್ಕೆ ತುತ್ತಾದ ರಾಜ್ಯದ ಪಶ್ಚಿಮಘಟ್ಟಕ್ಕೆ ಈಗ ಮತ್ತೊಂದು ಕಂಟಕ ಎದುರಾಗಿದೆ. ಇದೇ ಮೊದಲ ಬಾರಿಗೆ ಪಶ್ಚಿಮ ಘಟ್ಟದುದ್ದಕ್ಕೂ ಮಳೆನೀರ ಆಲಿಕೆಯಂತಿರುವ ಅತಿಸೂಕ್ಷ್ಮ ಹುಲ್ಲುಗಾವಲು ಪ್ರದೇಶ ನಾಲ್ಕೈದು ತಿಂಗಳ ಮೊದಲೇ ತೇವಾಂಶ ಕಳೆದುಕೊಂಡು ಒಣಗಲು ಆರಂಭವಾಗಿದ್ದು, ಜೀವಸಂಕುಲದ ಭವಿಷ್ಯಕ್ಕೆ ಅಪಾಯದ ಸಂದೇಶ ರವಾನಿಸಿದೆ.

ಈಗಾಗಲೇ ಘಟ್ಟಪ್ರದೇಶದ ಬಹುತೇಕ ಹಣ್ಣಿನ ಮರಗಳು ಅವಧಿಗೆ ಮೊದಲೇ ಹೂಬಿಟ್ಟು ಪ್ರಕೃತಿ ವೈಪರೀತ್ಯದ ಮುನ್ಸೂಚನೆ ನೀಡಿದ್ದರೆ, ಇದೀಗ ಮಳೆ ಅವಧಿ ಮುಗಿವ ಮೊದಲೇ ಹುಲ್ಲುಗಾವಲು ಕೂಡ ಒಣಗುತ್ತಿರುವುದು ಮುಂದಿನ ದಿನಗಳಲ್ಲಿ ಬರಗಾಲದ ಭೀತಿ ಸೃಷ್ಟಿಸಿದೆ.

ಮಾರ್ಚ್ ಬಳಿಕವೇ ಒಣಗಬೇಕಿತ್ತು:

ಸಾಮಾನ್ಯವಾಗಿ ಬಿರುಬೇಸಿಗೆಯ ಏಪ್ರಿಲ್‌, ಮೇ ತಿಂಗಳು ಬಿಟ್ಟರೆ ಘಟ್ಟಶ್ರೇಣಿಯ ಮೇಲ್ಪದರದ ಹುಲ್ಲುಗಾವಲು ವರ್ಷಪೂರ್ತಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಆದರೆ ಈ ಬಾರಿ ಮಾತ್ರ ವೈಪರೀತ್ಯವುಂಟಾಗಿದೆ. ಪರಿಣಾಮವಾಗಿ ಘಟ್ಟಪ್ರದೇಶದ ಝರಿಗಳೆಲ್ಲ ನೀರಿಲ್ಲದೆ ಬರಿದಾಗಿವೆ, ನದಿಗಳು ಹರಿವಿನ ಉಸಿರು ಕಳೆದುಕೊಂಡು ಸಣಕಲಾಗಿವೆ. ಮಾತ್ರವಲ್ಲದೆ, ಕರಾವಳಿ ಪ್ರದೇಶದುದ್ದಕ್ಕೂ ಅಂತರ್ಜಲ ಮಟ್ಟದಿಢೀರ್‌ ಕುಸಿತವಾಗಿದ್ದು, ಬಾವಿ- ಕೆರೆಗಳಲ್ಲಿ ನೀರು ತಳ ಸೇರುತ್ತಿದೆ.

ಶೋಲಾರಣ್ಯಕ್ಕೆ ಕಂಟಕ:

ನದಿಗಳ ಉಗಮ ಮತ್ತು ಹರಿಯುವಿಕೆಯ ಮೂಲವಾಗಿರುವ ಶೋಲಾರಣ್ಯಕ್ಕೆ ಮಳೆ ನೀರು ತಲುಪಿಸುವ ಆಲಿಕೆಯಂತೆ ಈ ಹುಲ್ಲುಗಾವಲು ಕೆಲಸ ಮಾಡುತ್ತದೆ. ಮಳೆಗಾಲದ ನೀರನ್ನು ಹಿಡಿದಿಟ್ಟುಕೊಂಡು ಶೋಲಾರಣ್ಯಕ್ಕೆ ಹರಿಸುವ ನೀರಿನ ಇಳುವರಿ ಪ್ರದೇಶವಿದು. ಈ ಕಾರಣದಿಂದಲೇ ಮಳೆಗಾಲ ಮುಗಿದ ಬಳಿಕವೂ ನದಿಗಳಲ್ಲಿ ಹರಿಯುವಷ್ಟುಭಾರಿ ಪ್ರಮಾಣದ ನೀರು ಶೋಲಾರಣ್ಯದ ಮಣ್ಣಿನಡಿ ಸಂಗ್ರಹವಾಗಿರುತ್ತದೆ. ಇದರ ಮೇಲ್ಭಾಗದಲ್ಲಿರುವ ಹುಲ್ಲುಗಾವಲು ಒಣಗಿಬಿಟ್ಟರೆ ಶೋಲಾರಣ್ಯದಲ್ಲಿರುವ ಅಗಾಧ ನೀರಿನ ಒರತೆ ಆರುತ್ತದೆ. ಅಲ್ಲಿಂದ ಉಗಮಿಸುವ ನದಿಗಳು ಬರಡಾಗುತ್ತವೆ. ಈಗ ಹಾಗೇ ಆಗಿದೆ. ಶೋಲಾರಣ್ಯದಲ್ಲಿ ನೀರ ಒರತೆ ಕ್ಷೀಣಿಸಿದೆ. ನದಿಗಳಲ್ಲಿ ನೀರ ಹರಿವು ಕಡಿಮೆಯಾಗಿದೆ, ಇದೆಲ್ಲವೂ ಭವಿಷ್ಯದ ಅಪಾಯಕ್ಕೆ ಕನ್ನಡಿ.

ಆಗಸ್ಟ್‌ ತಿಂಗಳಲ್ಲಿ ಭೀಕರ ಭೂಕುಸಿತಕ್ಕೆ ಪಶ್ಚಿಮ ಘಟ್ಟತುತ್ತಾಗಿರುವುದೂ ಈ ಪರಿಸ್ಥಿತಿಗೆ ಕಾರಣ ಎನ್ನುತ್ತಾರೆ ಪರಿಸರವಾದಿ ದಿನೇಶ್‌ ಹೊಳ್ಳ. ಭೂಕುಸಿತ ಸಂದರ್ಭ ಶೋಲಾರಣ್ಯದೊಳಗೆ ನೀರಿನ ಒಳಹರಿವು ಪ್ರದೇಶಗಳು ಸ್ಫೋಟಗೊಂಡಿವೆ. ಹೀಗಾಗಿ ಅಲ್ಲಿ ಈಗ ನೀರಿನ ಸಂಗ್ರಹ ಇಲ್ಲದಿರುವುದರಿಂದ ಅದರ ಮೇಲ್ಭಾಗದ ಬೆಟ್ಟದ ತುದಿಯ ಹುಲ್ಲುಗಾವಲಿನ ನೀರೆಲ್ಲ ಕೆಳಗೆ ಹರಿದು ಹುಲ್ಲು ಒಣಗುತ್ತಿದೆ ಎನ್ನುತ್ತಾರವರು.

ಕಾಡ್ಗಿಚ್ಚಿನ ಆತಂಕ

ಪಶ್ಚಿಮ ಘಟ್ಟದ ಹುಲ್ಲುಗಾವಲು ಅಂದರೆ ಮಾನವ ಶರೀರಕ್ಕೆ ಚರ್ಮ ರಕ್ಷಣೆ ಇದ್ದ ಹಾಗೇ ಬೆಟ್ಟದ ರಕ್ಷಣೆಗೆ ಹುಲ್ಲಿನ ಹೊದಿಕೆ. ಇದು ಒಣಗಿದ್ದರಿಂದ ಏಪ್ರಿಲ…, ಮೇ ತಿಂಗಳಲ್ಲಿ ಉದ್ಭವಿಸುವ ಕಾಡ್ಗಿಚ್ಚು ಇದೀಗ ಜನವರಿಯಲ್ಲೇ ಹರಡುವ ಸಾಧ್ಯತೆ ಇದೆ. ಕಾಡ್ಗಿಚ್ಚು ಹೆಚ್ಚಾದಷ್ಟೂನೀರಿನ ಸಾಂದ್ರತೆ ಕಡಿಮೆಯಾಗುತ್ತಾ ಭವಿಷ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಅಪಾಯದ ಎಚ್ಚರಿಕೆ ನೀಡುತ್ತಾರೆ ಪರಿಸರವಾದಿ ದಿನೇಶ್‌ ಹೊಳ್ಳ.


ಘಟ್ಟಕ್ಕೆ ಕಳ್ಳ ಮಾಫಿಯಾದಿಂದಲೇ ಕುತ್ತು!

ಇದೀಗ ಹುಲ್ಲುಗಾವಲು ಒಣಗಿರುವುದು, ಶೋಲಾರಣ್ಯದ ನೀರಿನ ಒಳಹರಿವು ಸ್ಫೋಟಗೊಂಡಿದ್ದಕ್ಕೆ ಮಾನವ ಹಸ್ತಕ್ಷೇಪವೇ ಕಾರಣ ಎಂದು ಕಳೆದೆರಡು ದಶಕಗಳಿಂದ ಚಾರಣಕ್ಕೆ ತೆರಳುತ್ತಿರುವ-ಪಶ್ಚಿಮಘಟ್ಟದ ಇಂಚಿಂಚೂ ಅರಿತಿರುವ ಪರಿಸರಪ್ರೇಮಿ ದಿನೇಶ್‌ ಹೊಳ್ಳ ಆರೋಪಿಸುತ್ತಾರೆ. ಟಿಂಬರ್‌, ರೆಸಾರ್ಟ್‌, ಎಸ್ಟೇಟ್‌ ಮಾಫಿಯಾಗಳು ನಿರಂತರ ಘಟ್ಟದ ಸೂಕ್ಷ್ಮ ಪ್ರದೇಶಗಳನ್ನು ಹಾಳುಗೆಡಹಿವೆ. ಇದರ ಮೇಲೆ ಬರೆ ಎಳೆದಂತೆ ಸರ್ಕಾರ ಎತ್ತಿನಹೊಳೆ, ಜಲವಿದ್ಯುತ್‌ ಯೋಜನೆಗಳನ್ನು ಘಟ್ಟದ ಮೇಲೆ ಹೇರುತ್ತಿದೆ. ಪಶ್ಚಿಮಘಟ್ಟನಾಶವಾಗಿ ಜೀವರಾಶಿ ಅಪಾಯಕ್ಕೆ ಸಿಲುಕುವ ಮುನ್ನ ಇನ್ನಾದರೂ ಮಾನವ ಹಸ್ತಕ್ಷೇಪ ನಿಲ್ಲಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸುತ್ತಾರವರು.

ಚಾರ್ಮಾಡಿ, ಶಿರಾಡಿ ಅರಣ್ಯ ವಲಯದ ಪರ್ವತ ಶ್ರೇಣಿಯುದ್ದಕ್ಕೂ ಇರುವ ಹುಲ್ಲುಗಾವಲು ಅಕ್ಟೋಬರ್‌ ಅಂತ್ಯಕ್ಕೇ ಒಣಗಲು ಆರಂಭಿಸಿದೆ. ಪ್ರಮುಖವಾಗಿ ರಾಮನಬೆಟ್ಟ, ದುರ್ಗದಬೆಟ್ಟ, ಹೊಸ್ಮನೆಗುಡ್ಡ, ಬಾಳೆಗುಡ್ಡ, ಬಾರಿಮಲೆ, ದೊಡ್ಡೇರಿ ಬೆಟ್ಟದಿಂದ ಹರಿದು ಬರುವ ನದಿಗಳಲ್ಲಿ ನೀರು ತೀವ್ರ ಕ್ಷೀಣಿಸಿರುವುದು ನಾವು ಅಕ್ಟೋಬರ್‌ ಕೊನೆಯ ವಾರದಲ್ಲಿ ಚಾರಣ ತೆರಳಿದ್ದಾಗ ಗಮನಿಸಿದೆವು. ಉತ್ತರ ಕನ್ನಡದ ಕಾಳಿ, ಅಘನಾಶಿನಿಯ ಅವಸ್ಥೆಯೂ ಇದೇ ಆಗಿದೆ.

-ದಿನೇಶ್‌ ಹೊಳ್ಳ, ಪರಿಸರವಾದಿ

ವರದಿ : ಸಂದೀಪ್‌ ವಾಗ್ಲೆ