ಮಂಗಳೂರಿನ ವೆನ್‌ಲಾಕ್‌ ಮತ್ತು ಲೇಡಿಗೋಶನ್‌ ಆಸ್ಪತ್ರೆಗೆ ಅಗತ್ಯ ಅನುದಾನ ಹಾಗೂ ಮೂಲಸೌಕರ್ಯವನ್ನು ಒದಗಿಸಿ ಮೇಲ್ದರ್ಜೆಗೆ ಏರಿಸುವುದಾಗಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದ್ದಾರೆ. 

ವಿಧಾನ ಪರಿಷತ್ (ಮಾ.08): ಮಂಗಳೂರಿನ ವೆನ್‌ಲಾಕ್‌ ಮತ್ತು ಲೇಡಿಗೋಶನ್‌ ಆಸ್ಪತ್ರೆಗೆ ಅಗತ್ಯ ಅನುದಾನ ಹಾಗೂ ಮೂಲಸೌಕರ್ಯವನ್ನು ಒದಗಿಸಿ ಮೇಲ್ದರ್ಜೆಗೆ ಏರಿಸುವುದಾಗಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದ್ದಾರೆ. ಕಾಂಗ್ರೆಸ್‌ ಸದಸ್ಯ ಐವನ್‌ ಡಿಸೋಜ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಗಳಿದ್ದು, 905 ಬೆಡ್‌ಗಳಿವೆ. ಲೇಡಿಗೋಶನ್ ಆಸ್ಪತ್ರೆಯಲ್ಲಿ 272 ಹಾಸಿಗೆಗಳ ಸಾಮರ್ಥ್ಯವಿದೆ. ಹೆಚ್ಚುವರಿಯಾಗಿ 50 ಬೆಡ್‌ಗಳ ಕ್ರಿಟಿಕಲ್ ಕೇರ್ ಬ್ಲಾಕ್ ಹೊಸ ಕಾಮಗಾರಿ ನಡೆಯುತ್ತಿದೆ. 

ಒಪಿಡಿ, ಡೇ ಕೇರ್ ಕೀಮೋಥೆರಪಿ ಸೇವೆ ನೀಡುವ ಜೊತೆಗೆ ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನದ ಮೂಲಕ ಮೂಲಸೌಕರ್ಯ ಸುಧಾರಿಸಲಾಗುವುದು ಎಂದರು. ಇದಕ್ಕೂ ಮುನ್ನ ಐವಾನ್ ಡಿ ಸೋಜಾ ಮಾತನಾಡಿ, ವೆನ್‌ಲಾಕ್ ಆಸ್ಪತ್ರೆಗೆ ದಿನಕ್ಕೆ 1,500ಕ್ಕೂ ಹೆಚ್ಚು ಹೊರ ರೋಗಿಗಳು ಬರುತ್ತಾರೆ. 150ಕ್ಕೂ ಹೆಚ್ಚು ಒಳರೋಗಿಗಳು ಇರುತ್ತಾರೆ. ಬೆಡ್ 905 ಇದ್ದರೂ, ಸಿಬ್ಬಂದಿ ಮಾತ್ರ 400 ರೋಗಿಗಳನ್ನು ನಿರ್ವಹಿಸುವುದಕ್ಕೆ ಮಾತ್ರ ಸಮರ್ಥವಾಗಿದೆ. ಆದ್ದರಿಂದ ಮೇಲ್ದರ್ಜೆಗೆ ಏರಿಸುವಂತೆ ಆಗ್ರಹಿಸಿದರು.

ತಿಪಟೂರು ಆಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮ: ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ತಿಪಟೂರಿನ ಸಾರ್ವಜನಿಕ ಆಸ್ಪತ್ರೆ ಉತ್ತಮ ಸೌಲಭ್ಯದಿಂದ ಕೂಡಿದ್ದು, ಇಲ್ಲಿನ ಸೇವೆ ಉತ್ತಮವಾಗಿರುವುದರಿಂದಲೇ ಸುತ್ತಲಿನ ತಾಲೂಕುಗಳಿಂದ ಜನರು ಇಲ್ಲಿಗೆ ಚಿಕಿತ್ಸೆ ಪಡೆಯಲು ಬರುತ್ತಿದೆ. ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಒಪಿಡಿ ಘಟಕ ಉದ್ಘಾಟಿಸಿ ಮಾತನಾಡಿದರು.

ಆಯುಷ್ಮಾನ್ ಯೋಜನೆಗೆ ಪ್ರಸ್ತುತ ಶೇ.75ರಷ್ಟು ಹಣವನ್ನ ರಾಜ್ಯ ಸರ್ಕಾರವೇ ಭರಿಸುತ್ತಿದೆ: ಸಚಿವ ದಿನೇಶ್ ಗುಂಡೂರಾವ್

ಸಾರ್ವಜನಿಕ ಆಸ್ಪತ್ರೆಯ ಒತ್ತಡವನ್ನು ನೀಗಿಸಲು ಹೆಚ್ಚು ಸಿಬ್ಬಂದಿ ಹಾಗೂ ಕೆಲವು ವೈದ್ಯಕೀಯ ಸಲಕರಣೆಗಳು ಆಸ್ಪತ್ರೆಗೆ ಅಗತ್ಯವಿದ್ದು ಅದನ್ನೆಲ್ಲಾ ಚರ್ಚೆ ಮಾಡಲಾಗಿದೆ. ಮುಂದೆ ಅದನ್ನು ಯಾವ ರೀತಿ ಮಾಡಬೇಕೆಂದು ಶಾಸಕರಿಗೆ ತಿಳಿಸಿದ್ದೇನೆ. ಮುಂದಿನ ವಾರ ಅವರು ಬೆಂಗಳೂರಿಗೆ ಬಂದರೆ ಆಗಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಿ ಕೂಡಲೇ ಆ ಕೆಲಸಗಳನ್ನು ಮಾಡಲಾಗುವುದು. ನಂತರ ಮುಂದಿನ ದಿನಗಳಲ್ಲಿ ಬಜೆಟ್‌ನಲ್ಲಿ ಯಾವುದನ್ನು ಅಪ್ರೂವ್ ಮಾಡಿಸಬೇಕು ಅದನ್ನು ಮುಖ್ಯಮಂತ್ರಿಗಳ ಚರ್ಚಿಸಿ ಅನುದಾನ ಬಿಡುಗಡೆಗೆ ಕೋರಲಾಗುವುದು. ಈ ಆಸ್ಪತ್ರೆಯನ್ನು ಇನ್ನೂ ಉತ್ತಮವಾಗಿ ನಿರ್ವಹಣೆ ಮಾಡಬಹುದಾಗಿದ್ದು ಅದಕ್ಕೆ ನನ್ನ ಕಡೆಯಿಂದ ಎಲ್ಲ ಸಹಕಾರ ನೀಡಲಾಗುವುದು ಎಂದರು.