ದೇವದುರ್ಗ[ಫೆ.18]: ‘ಕಾಂಗ್ರೆಸ್‌ನ ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ವಿಧಾನಸಭೆ ಅಧ್ಯಕ್ಷರಿಗೆ ಸಲ್ಲಿಸಿದ ಮನವಿಯನ್ನು ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪಕ್ಷದ ಶಿಸ್ತು ಉಲ್ಲಂಘಿಸಿದ ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಈಗಾಗಲೇ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದು, ಈ ಕುರಿತು ವಿಧಾನಸಭೆ ಅಧ್ಯಕ್ಷರು ನಿರ್ಣಯ ಕೈಗೊಳ್ಳಬೇಕಿದೆ. ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದು ಅವರ ವಿವೇಚನೆಗೆ ಬಿಟ್ಟವಿಚಾರ ಎಂದರು.

ಬಜೆಟ್‌ ಅನುಮೋದನೆಗೆ ಚರ್ಚೆ ಬೇಕಿತ್ತು:

ಬಿಜೆಪಿ ನಾಯಕರು ಈ ಬಾರಿ ಬಜೆಟ್‌ ಮೇಲೆ ಚರ್ಚೆ ಮಾಡಲಿಲ್ಲ. ಚರ್ಚೆ ಇಲ್ಲದೆ ಬಜೆಟ್‌ಗೆ ಅನುಮೋದನೆ ದೊರೆಯಿತು. ತಮಗೆ ಹಲವಾರು ಬಜೆಟ್‌ಗಳನ್ನು ಮಂಡಿಸಿದ ಅನುಭವವಿದೆ. ಬಜೆಟ್‌ ಮೇಲೆ ಚರ್ಚೆ ಇಲ್ಲದೆ ಅನುಮೋದನೆ ಪಡೆದಿರುವುದು ಒಳ್ಳೆಯದಲ್ಲ. ಈ ರೀತಿ ನಡೆದದ್ದು ಇದೇ ಮೊದಲ ಬಾರಿ ಎಂದರು.

ಅರ್ಧ ಸತ್ಯ ಗೊತ್ತಾಗಿದೆ:

ದೇವದುರ್ಗ ಪ್ರವಾಸಿ ಮಂದಿರದಲ್ಲಿ ನಡೆದ ಆಡಿಯೋ ಪ್ರಕರಣ ಆಪರೇಶನ್‌ ಕಮಲ ಕಾರ್ಯಾಚರಣೆಗೆ ಸಾಕ್ಷಿಯಾಗಿದೆ. ಮೊದಲು ಧ್ವನಿ ನಂದಲ್ಲ ಎಂದು ಬಿಎಸ್‌ವೈ ಹೇಳಿದ್ದರು. ಆದರೆ, ನಂತರ ಧ್ವನಿ ನನ್ನದೇ ಎಂದು ಒಪ್ಪಿಕೊಂಡಿದ್ದು, ಆಡಿಯೋವನ್ನು ಎಡಿಟ್‌ ಮಾಡಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಅರ್ಧ ಸತ್ಯ ಗೊತ್ತಾಗಿದೆ. ಇನ್ನುಳಿದ ಅರ್ಧ ಸತ್ಯ ಎಸ್‌ಐಟಿ ತನಿಖೆಯಿಂದ ಹೊರಬರುತ್ತದೆ ಎಂದು ತಿಳಿಸಿದರು.

ಆಡಿಯೋ ಪ್ರಕರಣವನ್ನು ಸದನ, ನ್ಯಾಯಾಂಗ ತನಿಖೆ ಮಾಡಲು ಬರುವುದಿಲ್ಲ. ನಿಯಮಾನುಸಾರ ಪೊಲೀಸ್‌, ಎಸ್‌ಐಟಿ ಇಲ್ಲವೇ ಸಿಬಿಐನಿಂದ ಮಾತ್ರ ತನಿಖೆಯಾಗಬೇಕಾಗುತ್ತದೆ. ಕಾನೂನು ಗೊತ್ತಿದ್ದರೂ ಬಿಜೆಪಿಯವರು ಅಡ್ಡಿಪಡಿಸಿದರು. ಎಸ್‌ಐಟಿಗೆ ಅಧಿಕಾರ ನೇಮಕ ಮಾಡುವಲ್ಲಿ ವಿಳಂಬ ಎಂಬುದೇನೂ ಇಲ್ಲ. ಸರ್ಕಾರ ನಿರ್ಧಾರ ಕೈಗೊಂಡ ಮೇಲೆ ತಂಡ ರಚನೆ ಮಾಡಿಯೇ ಮಾಡುತ್ತೆ. ತನಿಖೆಯಿಂದ ಸತ್ಯ ಹೊರಬಂದೇ ಬರುತ್ತೆ ಎಂದರು.

ಈ ಆಡಿಯೋದಲ್ಲಿ ಲಂಚದ ಆಮಿಷ ಇದೆ. ಗೌರವಾನ್ವಿತ ಹುದ್ದೆಗಳಾದ ಸ್ಪೀಕರ್‌, ನ್ಯಾಯಾಧೀಶರಿಗೂ ಲಂಚ ಕೊಡುತ್ತೇವೆ ಎಂಬ ಮಾತುಗಳಿವೆ. ಹೀಗಾಗಿ ತನಿಖೆಯನ್ನು ಎಸ್‌ಐಟಿಗೆ ವಹಿಸಿರುವುದೇ ಸೂಕ್ತ ಮತ್ತು ಕಾನೂನು ಬದ್ಧ. ಗುರುಮಟಕಲ್‌ ಶಾಸಕರ ಪುತ್ರ ಶರಣಗೌಡರಿಗೆ ಬಲವಂತದಿಂದ ಬರಲು ಹೇಳಿದ್ದಾರೆ. ಪಕ್ಷ ತೊರೆಯಲು ಹಣ ಮತ್ತು ಅಧಿಕಾರದ ಆಮಿಷ ಒಡ್ಡಿದ್ದಾರೆ. ಈ ಕುರಿತು ಸಿಎಂ ಕುಮಾರಸ್ವಾಮಿ ಇವರಿಗೆ ಶರಣಗೌಡ ಈ ಮಾಹಿತಿ ಹೇಳಿದ್ದಾನೆ. ಸರ್ಕಾರ ಉಳಿಸಿಕೊಳ್ಳುವ ಉದ್ದೇಶ ಹಾಗೂ ಪ್ರತ್ಯಕ್ಷ ಸಾಕ್ಷಿ ಸಿಗುತ್ತದೆ ಎಂದರೆ ಯಾರು ಬೇಡವೆನ್ನುತ್ತಾರೆ. ಹೋಗು ಎಂದು ಕುಮಾರಸ್ವಾಮಿ ಶರಣಗೌಡನಿಗೆ ಹೇಳಿದ್ದರಲ್ಲಿ ತಪ್ಪೇನಿದೆ?. ಆಡಿಯೋ ಬಹಿರಂಗಗೊಂಡ ಬಳಿಕ ಆಪರೇಶನ್‌ ಕಮಲ ಕಾರ್ಯಾಚರಣೆಯನ್ನು ಬಿಜೆಪಿ ಸ್ಥಗಿತಗೊಳಿಸಿದೆ. ಕಾಂಗ್ರೆಸ್‌ ಪಕ್ಷದ ಎಲ್ಲಾ ಶಾಸಕರು ತೃಪ್ತಿಯಿಂದ ಇದ್ದಾರೆ ಎಂದರು.