ಡ್ರಗ್ಸ್‌ ಜಾಲದ ಬೆನ್ನುಮೂಳೆ ಮುರೀತೇವೆ: ಬೊಮ್ಮಾಯಿ| ಮಾದಕ ವಸ್ತುಗಳ ಮೇಲೆ ಸರ್ಕಾರದಿಂದ ಯುದ್ಧ| ಇಂಟರ್ನೆಟ್‌ನಲ್ಲೂ ಡ್ರಗ್ಸ್‌ ವ್ಯಾಪಾರ

ಬೆಂಗಳೂರು[ಮಾ.11]: ರಾಜ್ಯದಲ್ಲಿ ಮಾದಕ ವಸ್ತುಗಳ ಮೇಲೆ ನಮ್ಮ ಸರ್ಕಾರ ಯುದ್ಧ ಘೋಷಿಸಿದೆ. ಕೆಲ ಡ್ರಗ್ಸ್‌ ಮಾರಾಟಗಾರರನ್ನು ಬಂಧಿಸಿದರೆ ಪ್ರಯೋಜನವಿಲ್ಲ. ಡ್ರಗ್ಸ್‌ ಜಾಲದ ಮೂಲ ಪತ್ತೆ ಮಾಡಿ ಆ ಕಳ್ಳ ವ್ಯವಸ್ಥೆಯ ಬೆನ್ನು ಮೂಳೆ ಮುರಿಯುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ ಶಾಸಕ ಕೆ.ಜೆ. ಜಾಜ್‌ರ್‍ ಸರ್ವಜ್ಞನಗರ ವ್ಯಾಪ್ತಿಯ ಡ್ರಗ್ಸ್‌ ದಂಧೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರವಲ್ಲ. ಎಲ್ಲ ಕಡೆ ನಡೆದಿದೆ. ಇತ್ತೀಚೆಗೆ ಇಂಟರ್ನೆಟ್‌ ಮೂಲಕವೂ ದೊಡ್ಡ ಮಟ್ಟದಲ್ಲಿ ಮಾದಕ ವಸ್ತು ಮಾರಾಟ ನಡೆಯುತ್ತಿದೆ. ಟಿಒಆರ್‌ ಎಂಬ ಸಚ್‌ರ್‍ ಎಂಜಿನ್‌ ಹಾಗೂ ಡಾರ್ಕ್ವೆಬ್‌ ಮೂಲಕವೂ ಇದನ್ನು ತರಿಸಲಾಗುತ್ತಿದೆ. ಇದನ್ನು ನಮ್ಮ ಪೊಲೀಸರು ಬೇಧಿಸುತ್ತಿದ್ದು, ಡ್ರಗ್ಸ್‌ ಅಂತರಾಷ್ಟ್ರೀಯ ಸಮಸ್ಯೆಯಾಗಿ ಬೆಳೆದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಜೆಟ್ ಅಧಿವೇಶನದಲ್ಲಿ ಏನೇನು ನಡೀತಿದೆ? ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಾರ್ಕ್ ವೆಬ್‌ಗಳಲ್ಲಿ ಕೇವಲ ಡ್ರಗ್ಸ್‌ ಮಾತ್ರವಲ್ಲ ಶಸ್ತ್ರಾಸ್ತ್ರ ವ್ಯಾಪಾರ, ವೇಶ್ಯಾವಾಟಿಕೆ ಸೇರಿ ಹಲವು ಅನಾಚಾರಗಳು ನಡೆಯುತ್ತಿವೆ. ಇಂತಹ ವೆಬ್‌ಗಳಿಗೆ ಯಾರು ಬೇಕಾದರೂ ಪ್ರವೇಶ ಮಾಡುವಂತಿಲ್ಲ. ಆಹ್ವಾನ ಸ್ವೀಕರಿಸಿದವರಿಗಷ್ಟೇ ಪ್ರವೇಶಾವಕಾಶ ಇರುತ್ತದೆ. ಜತೆಗೆ ಸ್ಪೀಡ್‌ ಪೋಸ್ಟ್‌ಗಳ ಮೂಲಕವೂ ಡ್ರಗ್ಸ್‌ ಸರಬರಾಜು ಮಾಡಲಾಗುತ್ತಿದೆ. ಹೀಗಾಗಿ ಅಪರಾಧಿಗಳನ್ನು ಬೇಧಿಸಲು ಪೊಲೀಸರು ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದೇವೆ. ಅಲ್ಲದೆ, ಮಾದಕ ವಸ್ತುಗಳ ಮಾರಾಟ ನಿಯಂತ್ರಣ ಕಾಯ್ದೆ 1989ರ ಕಾಯ್ದೆಯನ್ನು ಬದಲಾಯಿಸಬೇಕಾಗಿದೆ. ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಭರವಸೆ ನೀಡಿದರು.

1652 ಪ್ರಕರಣ ದಾಖಲು:

ನಮ್ಮ ಪೊಲೀಸರು ಸ್ಪೀಡ್‌ ಪೋಸ್ಟ್‌ ಮೂಲಕ ಮಾದಕ ವಸ್ತು ರವಾನೆಯಾಗುತ್ತಿರುವುದನ್ನು ಬೇಧಿಸಿದ್ದು, ಅಂಚೆ ಇಲಾಖೆಯ ನಾಲ್ವರು ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಉಳಿದಂತೆ 2019ರಲ್ಲಿ 1652 ಪ್ರಕರಣ ದಾಖಲಾಗಿವೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಸಿಂಥೆಟಿಕ್‌ ಡ್ರಗ್ಸ್‌ಗಳನ್ನು ಚಾಕಲೇಟು, ಬಿಸ್ಕೆಟ್‌ ಮೂಲಕವೂ ಶಾಲಾ-ಕಾಲೇಜು, ಖಾಸಗಿ ಕಂಪೆನಿಗಳ ಉದ್ಯೋಗಿಗಳಿಗೆ ಪೂರೈಸಲಾಗುತ್ತಿದೆ. ಇದೆಲ್ಲವನ್ನೂ ತಡೆಯಲು ಸರ್ಕಾರ ಬದ್ಧವಾಗಿದ್ದು, ಏಪ್ರಿಲ್‌ನಲ್ಲಿ ದೊಡ್ಡ ಜಾಗೃತಿ ಅಭಿಯಾನ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.

ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್‌:

ಡ್ರಗ್ಸ್‌ ತಡೆಯಲು ವಿಮಾನ ನಿಲ್ದಾಣದಲ್ಲಿ ತಪಾಸಣೆ ಚುರುಕು ಮಾಡಲಾಗಿದೆ. ಡ್ರಗ್ಸ್‌ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆಫ್ರಿಕಾ, ನೆದರ್‌ಲ್ಯಾಂಡ್‌ ಮುಂತಾದ ದೇಶಗಳ ಪ್ರಜೆಗಳನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಪ್ರತ್ಯೇಕ ತಂಡ ಹಾಗೂ ಶ್ವಾನದಳ ಪರಿಶೀಲನೆಯಲ್ಲಿ ನಿರತವಾಗಿದೆ ಎಂದರು.

ಕೊರೋನಾ ವೈರಸ್‌ಗಿಂತ ಅಪಾಯಕಾರಿ:

ಈ ವೇಳೆ ಕೆ.ಜೆ. ಜಾಜ್‌ರ್‍, ಡ್ರಗ್ಸ್‌ ಕೊರೋನಾಗಿಂತ ಅಪಾಯಕಾರಿ ವೈರಸ್‌. ಇದು ಎಲ್ಲಿಂದ ಬರುತ್ತದೆ ಎಂದು ಮೂಲ ಪತ್ತೆ ಹಚ್ಚಬೇಕು. ಇದಕ್ಕಾಗಿ ಗುಪ್ತಚರ ಬಲಗೊಳ್ಳಬೇಕು, ಬದ್ಧತೆಯುಳ್ಳ ಅಧಿಕಾರಿಗಳನ್ನು ನೇಮಿಸಬೇಕು ಎಂದರು. ಇದಕ್ಕುತ್ತರಿಸಿದ ಸಚಿವರು, ಈ ವರ್ಷ 8 ವಿಶೇಷ ಠಾಣೆಗಳನ್ನು ತೆರೆಯಲಾಗಿದ್ದು, ಈ ಕೇಂದ್ರಗಳು ಮಾದಕ ವಸ್ತುಗಳು, ಸೈಬರ್‌ ಅಪರಾಧಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದೆ. ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ಠಾಣೆ ತೆರೆಯಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.