ಕರಾವಳಿ, ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಿಂದ ತುಂಬಿದ ನದಿಗಳು, ಕಣ್ಮನ ಸೆಳೆಯುತ್ತಿರುವ ಜೋಗ ಜಲಪಾತ

ಬೆಂಗಳೂರು(ಜು.09): ಕೊಡಗು, ಕರಾವಳಿ, ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ.

ಕೊಡಗಿನಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ಗೆ ಶನಿವಾರ ಒಂದೇ ದಿ​ನ​ದಲ್ಲಿ ಎ​ರಡು ಅಡಿ ನೀರು ಹ​ರಿದು ಬಂದಿ​ದ್ದು, ಜಲಾಶಯದ ನೀರಿನ ಮಟ್ಟ82 ಅಡಿಗೆ ಏರಿಕೆಯಾಗಿದೆ. ಮಡಿಕೇರಿ ಸಮೀಪದ ಅಬ್ಬಿ ಜಲಪಾತ ಹಾಗೂ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೊಲ್ಲಿ ಅಬ್ಬಿಫಾಲ್ಸ್‌, ಶಿವಮೊಗ್ಗ ಜಿಲ್ಲೆ ಜೋಗ ಜಲಪಾತಗಳು ಮೈದುಂಬಿ ಧುಮುಕುತ್ತಿದ್ದು, ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಜಲಪಾತದ ಸೊಬಗನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ದ.ಕ.ಜಿಲ್ಲೆಯಲ್ಲಿ ಶನಿವಾರ ಕೂಡ ಕೆಲ ಖಾಸಗಿ ಶಾಲೆಗಳು ರಜೆ ನೀಡಿದ್ದವು.

ಕೊಡಗಿನಲ್ಲಿ ವಿಪರೀತ ಮಳೆ, ಮಡಿಕೇರಿ-ಮೈಸೂರು ನಡುವೆ ಸಂಚಾರ ಸ್ಥಗಿತ

ತುಂಗಾ, ಭದ್ರಾ, ಶರಾವತಿ, ನೇತ್ರಾವತಿ, ಹೇಮಾವತಿ ನದಿಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ1749.35 ಅಡಿ​ಗೆ, ಭದ್ರಾ ಜಲಾಶಯದ ನೀರಿ​ನ ​ಮಟ್ಟ139.8 ಅಡಿ​ಗಳಿಗೆ ಏರಿದೆ. ತುಂಗಾ ಜಲಾಶಯದಿಂದ 17,149 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಕೊಡಗು, ಕರಾವಳಿ, ಮಲೆನಾಡು ಭಾಗದ ಹಲವೆಡೆ ಗುಡ್ಡ ಕುಸಿತ ಉಂಟಾಗಿದ್ದು, 50ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್‌ ಅವರು ಶನಿವಾರ ಕಡಲ್ಕೊರೆತದ ಸ್ಥಳಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.