ಬೆಂಗಳೂರು[ಡಿ.09]: ಕನಕಪುರದಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆ ಬಗ್ಗೆ ಸರ್ಕಾರ ಮರು ಆದೇಶ ನೀಡುವ ವಿಶ್ವಾಸವಿದೆ. ಒಂದು ವೇಳೆ ಕಾಲೇಜು ಸ್ಥಾಪನೆಗೆ ಆದೇಶ ನೀಡದಿದ್ದರೆ ನನ್ನ ಹೋರಾಟ ಹೇಗಿರಲಿದೆ ಎಂಬುದನ್ನು ನೀವೇ ನೋಡುತ್ತೀರಿ ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕಪುರಕ್ಕೆ ನೀಡಲಾಗಿದ್ದ ಕಾಲೇಜು ಹಿಂಪಡೆದಿರುವ ರೀತಿ ಸರಿಯಲ್ಲ. ಅವರಿಗೆ ತಾವು ಮಾಡಿದ ತಪ್ಪಿನ ಜ್ಞಾನೋದಯವಾಗಿ ಮತ್ತೆ ಕನಕಪುರಕ್ಕೆ ಕಾಲೇಜು ನೀಡುವ ವಿಶ್ವಾಸವಿದೆ. ಇಲ್ಲದಿದ್ದರೆ ವಿಧಿ ಇಲ್ಲದೆ ಹೋರಾಟ ಮಾಡಬೇಕಾಗುತ್ತದೆ. ಯಡಿಯೂರಪ್ಪ ಅವರೂ ಹೋರಾಟ ಮಾಡಿಕೊಂಡೇ ರಾಜಕೀಯದಲ್ಲಿ ಬೆಳೆದವರು. ನಾವು ಅದನ್ನೇ ಮಾಡುತ್ತೇವೆ ಎಂದು ಹೇಳಿದರು.

ನಮಗೆ ಹೋರಾಟ ಮಾಡಲು ಸಾವಿರಾರು ಜನರನ್ನು ಕರೆದುಕೊಂಡು ಬರಬೇಕಿಲ್ಲ. ನಮ್ಮ ಭಾಗದ ಶಾಸಕರು, ವಿಧಾನಪರಿಷತ್‌ ಸದಸ್ಯರು ಸೇರಿ ಹೇಗೆ ಹೋರಾಟ ಮಾಡಬೇಕು ಎಂಬುದು ಗೊತ್ತಿದೆ. ಜನರು ಕೊಟ್ಟಿರುವ ಶಕ್ತಿ ನಮ್ಮಲ್ಲಿದೆ. ನಮ್ಮ ಹೋರಾಟಕ್ಕೆ ಅಷ್ಟುಸಾಕು. ಹೇಗೆ ಹೋರಾಟ ಮಾಡುತ್ತೇವೆ ಎಂಬುದನ್ನು ಕಾದು ನೋಡಿ ಎಂದು ಸವಾಲು ಹಾಕಿದರು.

ಅಶ್ವತ್ಥನಾರಾಯಣ್‌ಗೆ ಆಲ್‌ ದಿ ಬೆಸ್ಟ್‌:

ಉಪಚುನಾವಣೆ ಫಲಿತಾಂಶ ಬಂದ ನಂತರ ರಾಮನಗರದ ಕ್ಲೀನಿಂಗ್‌ ಕೆಲಸ ಶುರು ಮಾಡುತ್ತೇನೆ ಎಂದಿರುವ ರಾಮನಗರ ಜಿಲ್ಲಾ ಉಸ್ತುವಾರಿಯೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಆಲ್‌ ದಿ ಬೆಸ್ಟ್‌ ಹೇಳುತ್ತೇನೆ ಎಂದು ಇದೇ ವೇಳೆ ಶಿವಕುಮಾರ್‌ ತೀಕ್ಷ$್ಣವಾಗಿ ಹೇಳಿದರು.

ರಾಮನಗರದಿಂದ ದೇವೇಗೌಡರು ಮುಖ್ಯಮಂತ್ರಿ ಹಾಗೂ ಪ್ರಧಾನಿ ಆದವರು. ಎಚ್‌.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ನಾನು ಕೂಡ ಮಂತ್ರಿ ಆಗಿದ್ದವನು. ನಮ್ಮಿಂದ ಮಾಡಲು ಸಾಧ್ಯವಾಗದ್ದನ್ನು ಅವರು ಮಾಡುತ್ತೇನೆ ಅಂತಿದ್ದಾರೆ. ಅದನ್ನು ನಾವು ಸ್ವಾಗತಿಸಬೇಕು ಹಾಗೂ ಪ್ರೋತ್ಸಾಹ ನೀಡಬೇಕು. ಒಳ್ಳೆಯ ಕೆಲಸಕ್ಕೆ ನಾವು ವಿರೋಧ ಮಾಡುವುದಿಲ್ಲ. ಅವರಿಗೆ ಆಲ್‌ ದಿ ಬೆಸ್ಟ್‌ ಹೇಳುತ್ತೇನೆ ಎಂದರು.

ತಿಹಾರ್‌ ಕಷ್ಟನಂಗೆ, ಚಿದುಗೆ ಮಾತ್ರ ಗೊತ್ತು

ತಿಹಾರ್‌ ಜೈಲಿನಲ್ಲಿ ನಾನು ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅನುಭವಿಸಿರುವ ಕಷ್ಟಗಳು ನಮ್ಮಿಬ್ಬರಿಗೆ ಮಾತ್ರ ಗೊತ್ತು. ಮುಂದೆ ಅದರ ಬಗ್ಗೆ ದಾಖಲೆ ಸಮೇತ ಬಿಚ್ಚಿಡುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಇದೇ ವೇಳೆ ಐಟಿ ದಾಳಿ ಪ್ರಕರಣದಲ್ಲಿ ಮುಂದಿನ ಹೋರಾಟ ಹಾಗೂ ನಡೆಗಳ ಬಗ್ಗೆ ಚಿದಂಬರಂ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಎಲ್ಲವನ್ನೂ ಎದುರಿಸಲು ಸಿದ್ಧನಿದ್ದೇನೆ. ತಿಹಾರ್‌ ಜೈಲಲ್ಲಿ ನಾವು ಒಬ್ಬರ ಜತೆ ಒಬ್ಬರು ಮಾತನಾಡಲು ಅವಕಾಶ ಮಾಡಿಕೊಡುತ್ತಿರಲಿಲ್ಲ. ಆಸ್ಪತ್ರೆಗೆ ತೆರಳುವಾಗ, ವೈದ್ಯರನ್ನು ಭೇಟಿ ಮಾಡುವಾಗ ಹಾಯ್‌, ಹಲೋ ಹೇಳುತ್ತಿದ್ದೆ. ನಾವು ಅನುಭವಿಸಿರುವ ಕಷ್ಟಗಳು ನಮಗೆ ಮಾತ್ರ ಗೊತ್ತು. ಮುಂದೆ ಈ ಬಗ್ಗೆ ದಾಖಲೆಗಳೊಂದಿಗೆ ಮಾತನಾಡುತ್ತೇನೆ ಎಂದರು.