Asianet Suvarna News Asianet Suvarna News

ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಮುಂದಿಟ್ಟ ವಿನಯ್ ಗುರೂಜಿ

ಧರ್ಮಗ್ರಂಥಗಳ ಅಧ್ಯಯನದ ಬಗ್ಗೆ  ವಿನಯ್ ಗುರೂಜಿ ಮಾತನಾಡಿದ್ದು ರಾಜ್ಯ ಸರ್ಕಾರದ ಮುಂದೆ ಪ್ರಮುಖ ಬೇಡಿಕೆಯೊಂದನ್ನು ಇಟ್ಟಿದ್ದಾರೆ. 

Vinay Guruji Demands About Religious Text in Textbook snr
Author
Bengaluru, First Published Dec 11, 2020, 10:01 AM IST

ಬೆಂಗಳೂರು (ಡಿ.11):  ಕೋಮುಗಲಭೆಗಳನ್ನು ನಿಯಂತ್ರಿಸಲು ಮತ್ತು ಜನರಲ್ಲಿ ಧರ್ಮಗ್ರಂಥಗಳ ಅರಿವು ಮೂಡಿಸುವುದಕ್ಕಾಗಿ ರಾಜ್ಯ ಸರ್ಕಾರವು ಶಾಲಾ ಪಠ್ಯದಲ್ಲಿ ಎಲ್ಲಾ ಧರ್ಮಗ್ರಂಥಗಳನ್ನು ಕುರಿತ ಪಾಠಗಳನ್ನು ಅಳವಡಿಸುವಂತೆ ಮಹಾತ್ಮಗಾಂಧಿ ಸೇವಾ ಟ್ರಸ್ಟ್‌ ಸಂಸ್ಥಾಪಕ ವಿನಯ್‌ ಗುರೂಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರವು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಗುರೂಜಿ ಅವರು ಗುರುವಾರ ಗೋವಿನ ಪೂಜೆ ನೆರವೇರಿಸಿ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ತಾವು ಪೂಜಿಸುವ ಬುದ್ಧ ವಿಗ್ರಹ ಸಿದ್ಧಾರ್ಥ ಹೆಗ್ಡೆ ಸಮಾಧಿ ಬಳಿ ತಂದಿಟ್ಟ ವಿನಯ್ ಗುರೂಜಿ

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಪುಸ್ತಕದಲ್ಲಿ ಧರ್ಮಗ್ರಂಥಗಳನ್ನು ಅಳವಡಿಸುವುದರಿಂದ ಧರ್ಮದ ಬಗ್ಗೆ ಜನರಿಗೆ ಇರುವ ತಪ್ಪು ಕಲ್ಪನೆಗಳು ನಿವಾರಣೆಯಾಗಲಿವೆ ಮತ್ತು ಧರ್ಮದ ಕುರಿತು ಅರಿವು ಮೂಡಲಿದೆ. ಇದರ ಜೊತೆಗೆ ಸನಾತನ ಭಾರತದ ಸಂಸ್ಕಾರ ಕೂಡ ಮುಂದಿನ ಪೀಳಿಗೆಗೆ ತಲುಪಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಪ್ರತಿ ತಾಲೂಕು ಕೇಂದ್ರಗಳಲ್ಲಿ ಗೋ ಶಾಲೆ ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು ನಿರ್ಮಾಣ ಆಗಬೇಕು. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವುದರಿಂದ ಪ್ರತಿ ಜಿಲ್ಲೆಯಲ್ಲಿ ಗೋ ಸಂರಕ್ಷಣಾ ಕೇಂದ್ರ ಸ್ಥಾಪನೆ ಮಾಡಬೇಕು. ಇದರಿಂದ ಸ್ಥಳೀಯವಾಗಿ ಜನರಿಗೆ ಉದ್ಯೋಗ ಸಿಗಲಿದೆ ಮತ್ತು ಗೋ ಉತ್ಪನ್ನಗಳ ಸಂಶೋಧನೆ ನಡೆಸಲು ಸಹಕಾರಿಯಾಗಲಿದೆ ಎಂದರು.

ಕಾಯ್ದೆ ಜಾರಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಕೋಟ್ಯಂತರ ಹಿಂದೂಗಳು ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ತೀರ್ಪು ಬಂದಷ್ಟೇ ಗೋ ಹತ್ಯೆ ನಿಷೇಧ ಕಾಯ್ದೆ ಕೂಡ ಖುಷಿ ತಂದಿದೆ. ಇದು ನಿಜವಾದ ಗೋಕುಲಾಷ್ಟಮಿಯಾಗಿದೆ ಎಂದು ಹೇಳಿದರು.

ಕಳೆದ ಆರು ತಿಂಗಳ ಹಿಂದೆ ಅಗ್ನಿಹೋತ್ರ ಮಾಡಿದರೆ ಕೊರೋನಾ ಸೋಂಕು ಹರಡುವುದಿಲ್ಲ ಎಂದು ಸಲಹೆ ನೀಡಿದಾಗ ನಗೆಪಾಟಲಿಗೆ ಈಡಾಗಿದ್ದೆ. ಇಂದು ಕನಿಷ್ಠ ಐದು ಸಾವಿರ ಜನ ಅಗ್ನಿಹೋತ್ರ ಮಾಡುತ್ತಿದ್ದಾರೆ. ಅವರ ಕುಟುಂಬದ ಯಾವೊಬ್ಬ ಸದಸ್ಯರಿಗೂ ಕೊರೋನಾ ಬಂದಿಲ್ಲ. ಇದರಿಂದ ಗೋವಿನಲ್ಲಿರುವ ಶಕ್ತಿ ಎಂಥದ್ದು ಎಂದು ತಿಳಿಯುತ್ತದೆ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಟಿ.ಎ. ಶರವಣ ಮಾತನಾಡಿ, ರಾಜ್ಯ ಸರ್ಕಾರವು ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಜನಜಾಗೃತಿ ಮೂಡಿಸಬೇಕು ಮತ್ತು ಕಾಯ್ದೆ ಕುರಿತ ಗೊಂದಲಗಳನ್ನು ನಿವಾರಿಸಬೇಕು. ಜೊತೆಗೆ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಡಾ.ಬೇಳೂರು ರಾಘವೇಂದ್ರ ಶೆಟ್ಟಿಮಾತನಾಡಿ, ದೇಶಾದ್ಯಂತ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿ ಸದ್ಯದಲ್ಲಿಯೇ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ತಿಳಿಸಿದರು. ಈ ವೇಳೆ ಟ್ರಸ್ಟ್‌ನ ಶಿವಕುಮಾರ್‌ ಹಾಗೂ ಅರುಣ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios