ತುಮಕೂರು[ಡಿ.23]: ಮಂಗಳೂರಿನಲ್ಲಿ ಗುರುವಾರ ನಡೆದ ಹಿಂಸಾಚಾರದ ವೇಳೆ ಕೇರಳದಿಂದ ಬಂದವರು ಮುಖಕ್ಕೆ ಬಟ್ಟೆಕಟ್ಟಿಕೊಂಡು ಪೆಟ್ರೋಲ… ಬಾಂಬ… ಹಾಕಿದ್ದು ಈ ಬಗ್ಗೆ ವಿಡಿಯೋಗಳು ಸಿಕ್ಕಿವೆ ಎಂದು ತಿಳಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ತನಿಖೆ ಸಂದರ್ಭದಲ್ಲಿ ಎಲ್ಲವನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಹಿಂಸಾಚಾರಕ್ಕೆ ಬಿಜೆಪಿಯೇ ಕಾರಣ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯಾಗಿದ್ದು, ಅವರು ಮಂಗಳೂರು ಹಿಂಸಾಚಾರ ಹಾಗೂ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು. ಇಂದಿನ ಸ್ಥಿತಿಗೆ ಯಾರು ಕಾರಣ ಎಂಬುದು ದೇಶಕ್ಕೆ ಗೊತ್ತಿದೆ. ಸಿದ್ದರಾಮಯ್ಯನವರ ಹೇಳಿಕೆಗಳು ಸತ್ಯಕ್ಕೆ ದೂರವಾದ ಸಂಗತಿ ಎಂದರು.

ಇದೇವೇಳೆ ಸೈಬರ್‌ ಕ್ರೈಂ ತಡೆಗಟ್ಟುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮೇಲೆ ನಿಯಂತ್ರಣ ಹೇರಲು ಪ್ರಯತ್ನ ಮಾಡುತ್ತಿದ್ದೇವೆ. ಸೈಬರ್‌ ಕ್ರೈಂ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಪರ-ವಿರೋಧ ಚರ್ಚೆಯಲ್ಲಿ ಹದ್ದು ಮೀರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹಸಚಿವರು ಹೇಳಿದರು.