ಯಾವುದೇ ತಪ್ಪು ಇಲ್ಲದೆ(ನೋ ಫಾಲ್ಟ್‌) ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಆದಾಯದ ಮಿತಿಯ ನಿರ್ಬಂಧವಿಲ್ಲದೆ ₹5 ಲಕ್ಷ ಮತ್ತು ಗಾಯಗೊಂಡವರಿಗೆ ₹2.5 ಲಕ್ಷ ಪರಿಹಾರ ಪಾವತಿಸುವುದು ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಡಿ ಕಡ್ಡಾಯ ಎಂದು ಹೈಕೋರ್ಟ್‌ ಆದೇಶಿಸಿದೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು : ಯಾವುದೇ ತಪ್ಪು ಇಲ್ಲದೆ(ನೋ ಫಾಲ್ಟ್‌) ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ಆದಾಯದ ಮಿತಿಯ ನಿರ್ಬಂಧವಿಲ್ಲದೆ ₹5 ಲಕ್ಷ ಮತ್ತು ಗಾಯಗೊಂಡವರಿಗೆ ₹2.5 ಲಕ್ಷ ಪರಿಹಾರ ಪಾವತಿಸುವುದು ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಡಿ ಕಡ್ಡಾಯ ಎಂದು ಹೈಕೋರ್ಟ್‌ ಆದೇಶಿಸಿದೆ.

ರಸ್ತೆಗೆ ಅಡ್ಡಬಂದ ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್‌ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದು ಮೃತಪಟ್ಟ ಸವಾರ ವಾರ್ಷಿಕ ₹40 ಸಾವಿರಗೂ ಅಧಿಕ ಆದಾಯ ಹೊಂದಿದ್ದ ಎಂಬ ಕಾರಣಕ್ಕೆ ಪರಿಹಾರ ನಿಗದಿಗೆ ನಿರಾಕರಿಸಿದ್ದ ಮೋಟಾರು ವಾಹನ ಪರಿಹಾರ ಕ್ಲೇಮು ನ್ಯಾಯಾಧಿಕರಣದ ಆದೇಶ ರದ್ದುಪಡಿಸಿದ ನ್ಯಾಯಮೂರ್ತಿ ಕೆ.ಮನ್ಮಥ ರಾವ್‌ ಅವರ ಪೀಠ ಈ ಆದೇಶ ಮಾಡಿದೆ.

ಅಪಘಾತದಲ್ಲಿ ಮೃತ ವ್ಯಕ್ತಿಗೆ ₹5 ಲಕ್ಷ, ಗಾಯಗೊಂಡವರಿಗೆ ₹2.5 ಲಕ್ಷ ಪರಿಹಾರ

ಮೋಟಾರು ವಾಹನ ತಿದ್ದುಪಡಿ ಕಾಯ್ದೆ-2019ರ ಸೆಕ್ಷನ್‌ 164 ಅನ್ವಯ ಅಪಘಾತ ಸಂಭವಿಸಲು ತನ್ನ ತಪ್ಪಿಲ್ಲದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತ ವ್ಯಕ್ತಿಗೆ ₹5 ಲಕ್ಷ, ಗಾಯಗೊಂಡವರಿಗೆ ₹2.5 ಲಕ್ಷ ಪರಿಹಾರ ನಿಗದಿಪಡಿಸಲಾಗಿದೆ. ಹಾಗಾಗಿ ಅಪಘಾತದಲ್ಲಿ ನಿರ್ಲಕ್ಷ್ಯ ಸಾಬೀತುಪಡಿಸುವ ಅಗತ್ಯವಿಲ್ಲದೆಯೇ ಸೆಕ್ಷನ್ 164 ಶಾಸನಬದ್ಧ ಪರಿಹಾರ ಒದಗಿಸುತ್ತದೆ. ಈ ನಿಬಂಧನೆ ಸಹಜವಾಗಿ ಪ್ರಯೋಜನಕಾರಿಯಾಗಿದೆ. ಇದರಿಂದ ಮೋಟಾರು ಅಪಘಾತಗಳ ಸಂತ್ರಸ್ತರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶವನ್ನು ಈ ನಿಯಮ ಹೊಂದಿದೆ. ಸುಪ್ರಿಂ ಕೋರ್ಟ್‌ ನಿರ್ದೇಶನದ ಅನುಸಾರ ಆದಾಯ ಮಿತಿಯಂಥ ತಾಂತ್ರಿಕ ಕಾರಣ ನೀಡಿ ಪರಿಹಾರ ಕ್ಲೇಮು ತಿರಸ್ಕರಿಸಿರುವುದು ಕಾನೂನಡಿ ಅನೂರ್ಜಿತವಾಗುತ್ತದೆ ಎಂದು ಪೀಠ ಹೇಳಿದೆ.

ಎಮ್ಮೆ ಅಡ್ಡ ಬಂದು ಅಪಘಾತ:

2014ರ ಆ.17ರಂದು ರಂಜಾನ್‌ ಹಸನ್‌ ಕಳ್ಳೊಳೆ ಮತ್ತು ರವಿ ಮಹದೇವ್‌ ಮಗದುಂ ಬೈಕಿನಲ್ಲಿ ಚಿಕ್ಕೋಡಿಯಿಂದ ಚಿಂಚಣಿಗೆ ತೆರಳುತ್ತಿದ್ದರು. ರವಿ ಬೈಕ್‌ ಚಾಲನೆ ಮಾಡುತ್ತಿದ್ದರು. ರಂಜಾನ್‌ ರವಿ ಹಿಂಬದಿ ಕೂತಿದ್ದರು. ರಸ್ತೆಗೆ ಅಡ್ಡಲಾಗಿ ಎಮ್ಮೆ ಅಡ್ಡಬಂದಿತ್ತು. ಆಗ ಎಮ್ಮೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬೈಕ್‌ ಅನ್ನು ರಸ್ತೆಬದಿ ತಿರುಗಿಸಿದ್ದರು. ಆಗ ಬೈಕ್‌ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸವಾರರಿಬ್ಬರೂ ಅಸುನೀಗಿದ್ದರು. ಬೈಕ್‌ ರಾಜು ಎಂಬುವರಿಗೆ ಸೇರಿತ್ತು. ಘಟನೆ ನಡೆದಾಗ ಬೈಕ್‌ಗೆ ನ್ಯಾಷನಲ್‌ ವಿಮಾ ಕಂಪನಿಯ ವಿಮಾ ಪಾಲಿಸಿ ಜಾರಿಯಲ್ಲಿತ್ತು.

ಪ್ರಕರಣ ಸಂಬಂಧ ಪರಿಹಾರ ಕೋರಿ ಮೃತ ರಂಜಾನ್‌ ಪತ್ನಿ ಶಾಂಬೈ, ಇಬ್ಬರು ಪುತ್ರಿಯರು ಮತ್ತು ರವಿ ಮಗದುಂ ಅವರ ಪತ್ನಿ ಸಾರಿಕಾ ಹಾಗೂ ಅವರ ಕುಟುಂಬ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಅಥಣಿಯ ಮೋಟಾರು ವಾಹನ ಅಪಘಾತ ಪರಿಹಾರ ಕ್ಲೇಮು ನ್ಯಾಯಾಧಿಕರಣ (ಎಂಎಸಿಟಿ), ರಂಜಾನ್‌ ವಾರ್ಷಿಕ ₹40 ಸಾವಿರಕ್ಕೂ ಅಧಿಕ ಆದಾಯ ಹೊಂದಿದ್ದರು ಎಂಬ ಕಾರಣ ಆಧರಿಸಿ ರಂಜಾನ್‌ ಪತ್ನಿಯ ಅರ್ಜಿ ವಜಾಗೊಳಿಸಿತ್ತು. ಆದರೆ, ರವಿ ಪತ್ನಿ ಅವರಿಗೆ ವಾರ್ಷಿಕ ಶೇ.9ರಷ್ಟು ಬಡ್ಡಿದರದಲ್ಲಿ ₹5,05,000 ಪರಿಹಾರ ನಿಗದಿಪಡಿಸಿತು. ಆದರೆ, ಬೈಕ್‌ ಚಾಲನೆ ಮಾಡುವಾಗ ರವಿ ಚಾಲನಾ ಪರವಾನಗಿ ಹೊಂದಿರಲಿಲ್ಲ ಎಂಬ ಕಾರಣಕ್ಕೆ ಬೈಕ್‌ ಮಾಲಿಕ ರಾಜು, ಪರಿಹಾರ ಪಾವತಿಸಬೇಕು ಎಂದು 2015ರ ಡಿ.28ರಂದು ಆದೇಶಿಸಿತ್ತು.

ಬೈಕ್ ಮಾಲೀಕನ ಮೇಲೆ ಪರಿಹಾರ ಪಾವತಿ ಹೊಣೆ ಹೊರಿಸಿದ್ದನ್ನು ಆಕ್ಷೇಪಿಸಿ ಮತ್ತು ತಮಗೆ ಪರಿಹಾರ ನಿಗದಿಪಡಿಸದ ಎಂಎಸಿಟಿ ಕ್ರಮ ಪ್ರಶ್ನಿಸಿ ರಂಜಾನ್‌ ಮತ್ತು ರವಿ ಕುಟುಂಬದವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್‌, ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಸೆಕ್ಷನ್‌ 164 ಅಡಿ ರಂಜಾನ್‌ ಕುಟುಂಬದವರು ₹5 ಲಕ್ಷ ಪರಿಹಾರ ಪಡೆಯಲು ಅರ್ಹರಿದ್ದಾರೆ. ಇನ್ನೂ ರವಿ ಮಾನ್ಯತೆ ಹೊಂದಿರುವ ಚಾಲನಾ ಪರವಾನಗಿ ಹೊಂದಿರಲಿಲ್ಲ ಎಂಬುದನ್ನು ಸಾಬೀತುಪಡಿಸಲು ವಿಮಾ ಕಂಪನಿ ವಿಫಲವಾಗಿದೆ. ಇದರಿಂದ ವಿಮಾ ಕಂಪನಿಯೇ ರವಿ ಕುಟುಂಬದವರಿಗೆ ವಾರ್ಷಿಕ ಶೇ.9ರಷ್ಟು ಬಡ್ಡಿದರಲ್ಲಿ ₹5 ಲಕ್ಷ ಪರಿಹಾರ ಪಾವತಿಸಬೇಕು ಎಂದು ನಿರ್ದೇಶಿಸಿದೆ.