ವಂದೇ ಮಾತರಂ ಗೀತೆಯನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ನಿರ್ದೇಶನಕ್ಕೆ ಬೆಂಗಳೂರಿನ ಮುಸ್ಲಿಂ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗೀತೆಯಲ್ಲಿ ದುರ್ಗಾದೇವಿಯ ಸ್ತುತಿ ಇರುವುದರಿಂದ, ಅಲ್ಲಾ ಹೊರತುಪಡಿಸಿ ಬೇರೆಯಾರನ್ನೂ ಪೂಜಿಸದ ತಮ್ಮ ಧಾರ್ಮಿಕ ನಂಬಿಕೆಗೆ ಇದು ವಿರುದ್ಧವಾಗಿದೆ ಎಂದು ವಿರೋಧ
ಬೆಂಗಳೂರು (ಫೆ.14): ವಂದೇ ಮಾತರಂ ಕಡ್ಡಾಯಗೊಳಿಸುವ ಕೇಂದ್ರದ ನಿರ್ದೇಶನಕ್ಕೆ ನಗರದ ಮುಸ್ಲಿಂ ಸಂಘಟನೆಗಳು ಮತ್ತು ಮುಸ್ಲಿಂ ಮುಖಂಡರು ಹಾಗೂ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಆದೇಶ ಹಿಂಪಡೆಯದಿದ್ದರೆ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ದೇಶವನ್ನು ತಾಯಿಯಂತೆ ಭಾವಿಸಿ ಪ್ರೀತಿಸಿ, ಗೌರವ ಸಲ್ಲಿಸುತ್ತೇವೆ. ಭೋಲೋ ಭಾರತ್ ಮಾತಾಕೀ ಜೈ ಎನ್ನಲು ಯಾವುದೇ ಅಭ್ಯಂತರವಿಲ್ಲ. ಆದರೆ, ದುರ್ಗಾದೇವಿಯನ್ನು ಪೂಜಿಸಿ, ಗೌರವಿಸಿ ಎಂದರೆ ಸಾಧ್ಯವಿಲ್ಲ. ಬೇಕಿದ್ದರೆ ನೀವು ಗೌರವ ಕೊಡಿ, ನೀವು ಹಾಡಿಕೊಳ್ಳಿ, ಪೂಜೆ ಮಾಡಿ ನಾವು ಬೇಡ ಅನ್ನುವುದಿಲ್ಲ. ನಿಮಗೆ ಸ್ವಾತಂತ್ರ್ಯ ಇದೆ. ನಾವು ಅಡ್ಡಿಪಡಿಸಲ್ಲ. ಆದರೆ, ನೀವು ಬಲವಂತಪಡಿಸಿ ಮುಸಲ್ಮಾನರೂ ಅದನ್ನು ಗೌರವಿಸಬೇಕು ಎಂದರೆ ಆಗಲ್ಲ. ಅಲ್ಲಾನನ್ನು ಹೊರತುಪಡಿಸಿ ಬೇರೆಯಾರನ್ನೂ ಪೂಜಿಸಲ್ಲ ಎಂದು ಮುಸ್ಲಿಂ ಮುಖಂಡ ಉಮಾರ್ ಶರೀಫ್ ಹೇಳಿದರು.
ಶುಕ್ರವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ ಭೂಮಿಯನ್ನು ಪೂಜೆ ಮಾಡಿ, ದುರ್ಗೇಗೆ ಗೌರವ ಕೊಡಿ ಎಂದರೆ ಸಾಧ್ಯವಿಲ್ಲ. ಅಲ್ಲಾನನ್ನು ಹೊರತುಪಡಿಸಿ ಮುಸ್ಲಿಮರು ಬೇರಿನ್ಯಾರನ್ನೂ ಪೂಜಿಸುವುದಿಲ್ಲ. ಪ್ರವಾದಿ ಮಹಮ್ಮದರನ್ನು ಕೂಡ ಆರಾಧಿಸುವುದಿಲ್ಲ. ನಮಗೆ ಅಲ್ಲಾನೇ ದೇವರು. ಆದ್ದರಿಂದ ವಂದೇಮಾತರಂ ಗೀತೆ ಹಾಡಲು ಸಾಧ್ಯವಿಲ್ಲ. ಮುಖ್ಯವಾಗಿ ಈಗ ಸೇರಿಸಿರುವ ಆರು ಚರಣಗಳನಂತು ಹಾಡುವುದೇ ಇಲ್ಲ ಎಂದರು.
ಮತ್ತೊಬ್ಬ ಮುಸ್ಲಿಂ ಮುಖಂಡ ಸಾಧಿಕ್‌ಪಾಷಾ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಎಲ್ಲ ಧರ್ಮದವರು ಹೋರಾಟ ಮಾಡಿದ್ದೇವೆ. ಜಿನ್ನಾಗೆ ಪಾಕಿಸ್ತಾನ ಬೇಕಾಗಿತ್ತು, ಅವನು ಪಾಕಿಸ್ತಾನ ತೆಗೆದುಕೊಂಡು ಹೋಗಿದ್ದಾನೆ. ನಾವು ದೇಶಕ್ಕಾಗಿ ಪ್ರಾಣ ಕೊಟ್ಟಿದ್ದೇವೆ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ಧೇವೆ. ವಂದೇ ಮಾತರಂ ಗೀತೆಯಲ್ಲಿ ದುರ್ಗಾದೇವಿ ಸ್ತುತಿ ಇರದಿದ್ದರೆ ಗೀತೆ ಹಾಡಲು ನಮ್ಮ ಅಭ್ಯಂತರ ಇಲ್ಲ. ಅಲ್ಲಾನನ್ನು ಬಿಟ್ಟರೆ ನಮಗೆ ಬೇರೆ ಯಾವ ದೇವರೂ ಇಲ್ಲ. ಬಂಕಿಮ ಚಂದ್ರ ಚಟರ್ಜಿ ಅವರು ಬ್ರಿಟಿಷರ ಪರ ಮಾತನಾಡುತ್ತಿದ್ದರು. ಮುಸ್ಲಿಂರ ವಿರುದ್ಧವಾಗಿಯೇ ಬರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.



