ವಾಲ್ಮೀಕಿ ನಿಗಮ ಹಗರಣ; ಇಡಿ ವಿಚಾರಣೆ ವೇಳೆ ನಾಗೇಂದ್ರ ಮೌನ; ದದ್ದಲ್ ಇನ್ನೂ ನಾಪತ್ತೆ!
ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳ ಪ್ರಶ್ನೆಗಳಿಗೆ ಮಾಜಿ ಸಚಿವ ಬಿ.ನಾಗೇಂದ್ರ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.
ಬೆಂಗಳೂರು : ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳ ಪ್ರಶ್ನೆಗಳಿಗೆ ಮಾಜಿ ಸಚಿವ ಬಿ.ನಾಗೇಂದ್ರ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.
ಇ.ಡಿ. ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಬಿ.ನಾಗೇಂದ್ರ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಧಿಕಾರಿಗಳ ಪ್ರಶ್ನೆಗಳಿಗೆ ನಾಗೇಂದ್ರ ಸಮಪರ್ಕವಾಗಿ ಉತ್ತರಿಸದೆ ಮೌನಕ್ಕೆ ಜಾರುತ್ತಿದ್ದಾರೆ. ಆರಂಭದಲ್ಲಿ ಈ ಪ್ರಕರಣದಲ್ಲಿ ತಮ್ಮ ಪಾತ್ರವೇ ಇಲ್ಲ ಎಂದು ಒಂದು ಸಾಲಿನ ಉತ್ತರ ನೀಡಿದ್ದ ನಾಗೇಂದ್ರ, ಇ.ಡಿ. ಅಧಿಕಾರಿಗಳು ಕೆಲ ದಾಖಲೆಗಳನ್ನು ಮುಂದಿಟ್ಟು ಪ್ರಶ್ನೆ ಮಾಡಿದಾಗ ತಡಬಡಾಯಿಸಿದರು ಎಂದು ಮೂಲಗಳು ತಿಳಿಸಿವೆ.
ವಾಲ್ಮೀಕಿ ನಿಗಮದ ₹20 ಕೋಟಿ ಎಲೆಕ್ಷನ್‌ಗೆ ಬಳಸಿದ್ದ ನಾಗೇಂದ್ರ?
ನಿಗಮದ ಹಣ ಲೋಕಸಭಾ ಚುನಾವಣೆಗೆ ಬಳಕೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಆ ಬಗ್ಗೆ ನಾಗೇಂದ್ರ ಅವರನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೂ ನಾಗೇಂದ್ರ ಮೌನ ಉತ್ತರ ನೀಡಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನವೇ ಸಚಿವ ನಾಗೇಂದ್ರ, ನಿಗಮದ ವ್ಯವಸ್ಥಾಪಕ ಜೆ.ಜಿ.ಪದ್ಮನಾಭ ಸೇರಿ ಕೆಲವು ಅಧಿಕಾರಿಗಳ ಜತೆಗೆ ಖಾಸಗಿ ಹೋಟೆಲ್‌ವೊಂದರಲ್ಲಿ ರಹಸ್ಯ ಸಭೆ ನಡೆಸಿ, ನಿಗಮದ ಹಣವನ್ನು ನಕಲಿ ಖಾತೆಗಳಿಗೆ ವರ್ಗಾಯಿಸುವ ಬಗ್ಗೆ ಚರ್ಚಿಸಿರುವ ವಿಚಾರ ಇ.ಡಿ. ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಇ.ಡಿ. ಅಧಿಕಾರಿಗಳು ನಾಗೇಂದ್ರರನ್ನು ಈ ಸಭೆ ಬಗ್ಗೆಯೂ ಪ್ರಶ್ನಿಸಿದ್ದಾರೆ.
ನಾಗೇಂದ್ರರನ್ನು ಆರು ದಿನಗಳ ಕಾಲ ಇ.ಡಿ. ವಶಕ್ಕೆ ಪಡೆದಿದ್ದು, ಈಗಾಗಲೇ ಮೂರು ದಿನ ಮುಗಿದಿದೆ. ಇನ್ನು ಉಳಿದ ಮೂರು ದಿನ ವಿಚಾರಣೆ ತೀವ್ರಗೊಳಿಸಲಿದ್ದಾರೆ. ಈವರೆಗಿನ ವಿಚಾರಣೆಯಲ್ಲಿ ಆರೋಪಿ ನಾಗೇಂದ್ರ ಇ.ಡಿ. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಮೌನಕ್ಕೆ ಹೆಚ್ಚು ಶರಣಾಗಿದ್ದಾರೆ. ಹೀಗಾಗಿ ಇ.ಡಿ. ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಮತ್ತಷ್ಟು ದಿನ ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಸಿಎಂ ಸಿದ್ದರಾಮಯ್ಯ ಸಮಾಜವಾದಿ ಅಲ್ಲ, ಮಜಾವಾದಿ: ಎನ್.ರವಿಕುಮಾರ್ ಲೇವಡಿ
ಇ.ಡಿ. ಕಚೇರಿಯಲ್ಲಿ ಆರೋಗ್ಯ ತಪಾಸಣೆ: ಇ.ಡಿ. ಅಧಿಕಾರಿಗಳು ಶಾಂತಿನಗರದ ಇ.ಡಿ. ಕಚೇರಿಯಲ್ಲಿ ನಾಗೇಂದ್ರ ಅವರ ವಿಚಾರಣೆ ಮುಂದುವರೆಸಿದ್ದಾರೆ. ಭಾನುವಾರ ಬೌರಿಂಗ್ ಆಸ್ಪತ್ರೆಯ ವೈದ್ಯರನ್ನು ಕಚೇರಿಗೆ ಕರೆಸಿ ನಾಗೇಂದ್ರ ಅವರ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ. ನ್ಯಾಯಾಲಯವು 24 ತಾಸಿಗೊಮ್ಮೆ ಆರೋಪಿಯ ಆರೋಗ್ಯ ತಪಾಸಣೆ ನಡೆಸಲು ಸೂಚಿಸಿದೆ. ಅದರಂತೆ ಇ.ಡಿ. ಅಧಿಕಾರಿಗಳು ಆರೋಗ್ಯ ತಪಾಸಣೆ ಮಾಡಿಸುತ್ತಿದ್ದಾರೆ.
ದದ್ದಲ್ ಇನ್ನೂ ನಾಪತ್ತೆ: ರಾಯಚೂರು ಗ್ರಾಮಾಂತರ ಶಾಸಕ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ನೋಟಿಸ್ ಜಾರಿ ಮಾಡಿದೆ. ಗುರುವಾರ ಎಸ್ಐಟಿ ವಿಚಾರಣೆ ಮುಗಿಸಿ ತೆರಳಿದ್ದ ದದ್ದಲ್, ಇ.ಡಿ. ಬಂಧನದ ಭೀತಿಯಲ್ಲಿ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ. ದದ್ದಲ್ ಪತ್ತೆಗೆ ಹುಡುಕಾಟ ಆರಂಭಿಸಿರುವ ಇ.ಡಿ. ಅಧಿಕಾರಿಗಳು, ಯಾವುದೇ ಕ್ಷಣದಲ್ಲಾದರೂ ಬಂಧಿಸುವ ಸಾಧ್ಯತೆಯಿದೆ.