Asianet Suvarna News Asianet Suvarna News

Vijayapura: ಹಿಜಾಬ್‌ ವಿವಾದ: ವಚನಾನಂದ ಶ್ರೀಗಳು ಹೇಳಿದ್ದಿಷ್ಟು

*   ಶಾಲೆಯಲ್ಲಿ ಬಡವ, ಶ್ರೀಮಂತ, ಆ ಧರ್ಮ, ಈ ಧರ್ಮ ಇರಬಾರದು ಎಂದು ಸಮವಸ್ತ್ರ ಮಾಡಿದೆ
*   ಧರ್ಮ, ಸಂಸ್ಕೃತಿ ಪರಂಪರೆ ಕಲಿಯಲು ಧಾರ್ಮಿಕ ಕೇಂದ್ರಗಳಿಗೆ ಹೋಗಬೇಕು
*   ಸಮವಸ್ತ್ರ ವಿಷಯದಲ್ಲಿ ಸಂಘರ್ಷ ಸರಿಯಲ್ಲ 

Vachananand Shri React on Hijab Controversy in Karnataka grg
Author
Bengaluru, First Published Feb 10, 2022, 12:54 PM IST | Last Updated Feb 10, 2022, 12:54 PM IST

ವಿಜಯಪುರ(ಫೆ.10): ಹಿಜಾಬ್‌(Hijab) ಮತ್ತು ಕೇಸರಿ(Saffron) ವಿವಾದ ಒಳ್ಳೆಯ ಬೆಳವಣಿಗೆಯಲ್ಲ. ಧರ್ಮಗಳ ಆಚರಣೆ ಮನೆಯಲ್ಲಿ ಇರಬೇಕು. ವಿದ್ಯಾ ಮಂದಿರಗಳಲ್ಲಿ ಅಲ್ಲ ಎಂದು ಹರಿಹರದ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ವಚನಾನಂದ ಶ್ರೀಗಳು(Vachananand Shri) ಹೇಳಿದರು.

ಬಬಲೇಶ್ವರದ ಬೃಹನ್ಮಠದಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಶಾಲೆಯಲ್ಲಿ ಬಡವ, ಶ್ರೀಮಂತ, ಆ ಧರ್ಮ, ಈ ಧರ್ಮ ಇರಬಾರದು ಎಂದು ಸಮವಸ್ತ್ರ ಮಾಡಿದ್ದರು. ಧರ್ಮ, ಸಂಸ್ಕೃತಿ ಪರಂಪರೆ ಕಲಿಯಲು ಧಾರ್ಮಿಕ ಕೇಂದ್ರಗಳಿಗೆ ಹೋಗಬೇಕು. ಸಮವಸ್ತ್ರ ವಿಷಯದಲ್ಲಿ ಸಂಘರ್ಷ ಸರಿಯಲ್ಲ. ಸಂಘರ್ಷದಲ್ಲಿ ಯಾರಿಗೇ ತೊಂದರೆಯಾದರೂ ಅದು ಕನ್ನಡ ನಾಡಿನ ಮಗುವಿಗೆ ತೊಂದರೆಯಾದಂತೆ ಎಂದು ಭಾವಿಸಬೇಕು ಎಂದರು.

ಹಿಜಾಬ್ ವಿವಾದ, ಬಿಜೆಪಿ ಶಾಸಕ, ಸಚಿವರಿಗೆ ಸಿಎಂ ಖಡಕ್ ಎಚ್ಚರಿಕೆ

ಹಿಜಾಬ್‌, ಕೇಸರಿ ಬೇಕೆ ಬೇಕು ಎಂದರೆ ಹಮಾರಾ ತುಮಾರಾ ಲಡಾಯಿ ಹೆಚ್ಚಾಗುತ್ತದೆ. ಎಲ್ಲರೂ ಸಮವಸ್ತ್ರ ಧರಿಸುವುದೇ ಇದಕ್ಕೆ ಪರಿಹಾರ. ಸಮವಸ್ತ್ರ ಧರಿಸಿದರೇ ಸಮಾನತೆ ಇರುತ್ತದೆ. ವಿದ್ಯಾರ್ಥಿಗಳು(Students) ಶಾಲೆ, ಕಾಲೇಜುಗಳ ನಿಯಮ ಪಾಲಿಸಬೇಕು ಎಂದು ಹೇಳಿದರು.

ಕೋರ್ಟ್‌ ಏನೇ ತೀರ್ಪು ನೀಡಿದರೂ ಎಲ್ಲರೂ ಮುಕ್ತ ಮನಸಿನಿಂದ ಪಾಲಿಸಬೇಕು. ವಿದ್ಯಾರ್ಥಿಗಳಿಗೆ ವಿದ್ಯೆ ಮುಖ್ಯ. ಇದೇ ಬಟ್ಟೆಹಾಕಬೇಕು ಎನ್ನುವುದು ತಪ್ಪು. ಪಕ್ಕದ ವಿದ್ಯಾರ್ಥಿ ಹಾಕಿದ ಬಟ್ಟೆಯನ್ನು ಇತರೆ ವಿದ್ಯಾರ್ಥಿಗಳು ಧರಿಸಬೇಕು. ಸಮಾನತೆಗಾಗಿ ಎಲ್ಲರೂ ಒಂದೇ ಬಟ್ಟೆಧರಿಸಿದರೆ ಒಳಿತು ಎಂದು ನುಡಿದರು.

ವಚನಾನಂದ ಶ್ರೀಗಳ ವಿರುದ್ಧ ಶಾಸಕ ಯತ್ನಾಳ(Basanagouda Patil Yatnal) ವಾಗ್ದಾಳಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ನಮ್ಮ ವ್ಯಕ್ತಿತ್ವದ ಬಗ್ಗೆ ಮಾತನಾಡುವ ಹಗುರ ವ್ಯಕ್ತಿಗಳ ಮಾತುಗಳನ್ನು ಹಗುರವಾಗಿ ಕೈ ಬಿಡಬೇಕು ಎಂದರು.

Hijab Row: ಹಿಜಾಬ್‌ ಸಂಘರ್ಷ ಆರಂಭವಾಗಿದ್ದು ಹೇಗೆ?: ಬಿಜೆಪಿ ಆರೋಪಕ್ಕೆ ಪುಷ್ಠಿ ಸಿಕ್ತಾ?

ಬಜೆಟ್‌(Budget) ಮುನ್ನವೇ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ(2A Reservation) ಘೋಷಣೆಗೆ ಕೂಡಲಸಂಗಮ ಬಸವ ಜಯಮೃತ್ಯುಂಜಯ ಶ್ರೀಗಳು ಡೆಡ್‌ಲೈನ್‌ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ವಚನಾನಂದ ಶ್ರೀಗಳು, ನಾವು ಲೈಫ್‌ಲೈನ್‌ ಕೊಡುವ ಸ್ವಾಮಿಗಳು ಆಗಿದ್ದೇವೆ. ಸಾಂವಿಧಾನಿಕ, ಕಾನೂನಾತ್ಮಕ ವಿಧಾನ ಅನುಸರಿಸುವ ಸ್ವಾಮಿಗಳು ನಾವು. ಎಲ್ಲರೂ ಒಪ್ಪಿಕೊಳ್ಳುವ ಹಾಗೂ ಅಪ್ಪಿಕೊಳ್ಳುವಂತಹ ನಿರ್ಧಾರಕ್ಕೆ ತಾವು ಬದ್ಧ ಇರುವ ಸ್ವಾಮಿಗಳು ಎಂದರು.

ಪಂಚಮಸಾಲಿ(Panchamasali) ಸಮಾಜಕ್ಕೆ 2ಎ ಮೀಸಲಾತಿ ನೀಡುವ ನಿಟ್ಟಿನಲ್ಲಿ ಬಹಳಷ್ಟು ಕೆಲಸಗಳು ನಡೆಯುತ್ತಿವೆ. ಕೇಂದ್ರ ಹಿಂದುಳಿದ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಯಾವುದೇ ಒಂದು ಸಮುದಾಯಕ್ಕೆ ಮೀಸಲಾತಿ ಸಿಗಲು ರಾಜ್ಯದಲ್ಲಿ(Karnataka) ಕುಲಶಾಸ್ತ್ರೀಯ ಅಧ್ಯಯನ ನಡೆಯಬೇಕು. ರಾಜ್ಯದಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ರಾಜ್ಯ ಹಿಂದುಳಿದ ಆಯೋಗಕ್ಕೆ ತಾವು 900 ಪುಟಗಳ ದಾಖಲಾತಿ ನೀಡಿದ್ದೇವೆ ಎಂದು ತಿಳಿಸಿದರು.

ರಿಟ್‌ ಅರ್ಜಿ ತರುವಂತಹ ಘೋಷಣೆ ಇರಬಾರದು

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ರಾಜ್ಯಪಾಲರು, ಮುಖ್ಯಮಂತ್ರಿಗಳ ಜೊತೆಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಹೊರಗಡೆ ಹೋರಾಟ ಮಾಡುವುದು ಅವಶ್ಯಕತೆ ಇದ್ದಾಗ ಹೋರಾಟ ಮಾಡಿದ್ದೇವೆ. ಸರ್ಕಾರ ಮೀಸಲಾತಿ ಘೋಷಣೆ ಮಾಡಿದರೆ ಕೋರ್ಟ್‌ನಲ್ಲಿ ರಿಟ್‌ ತರುವಂತಿರಬಾರದು. ಆದ್ದರಿಂದ ಎಲ್ಲ ಸಾಧ್ಯಾಸಾಧ್ಯತೆಗಳನ್ನು ಅಧ್ಯಯನ ಮಾಡಿಕೊಂಡು ಮುಂದೆ ಹೆಜ್ಜೆ ಇಡಬೇಕಿದೆ. ಮಹಾರಾಷ್ಟ್ರದಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ(BJP Government) ಇದ್ದಾಗ, ಮೀಸಲಾತಿ ಘೋಷಣೆ ಬಳಿಕ ಕೋರ್ಟ್‌ ಪ್ರಶ್ನಿಸಿ ತಡೆಯಾಜ್ಞೆ ತರಲಾಯಿತು. ನಮ್ಮ ರಾಜ್ಯದಲ್ಲಿಯೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಹಾಗಾಗಬಾರದು ಎಂದು ವಚನಾನಂದ ಶ್ರೀಗಳು ಹೇಳಿದರು.

ಹಿಜಾಬ್‌-ಕೇಸರಿ ವಿವಾದದಿಂದ ಜೀವನ ಹಾಳಾಗಬಾರದು

ಹಿಜಾಬ್‌- ಕೇಸರಿ ವಿವಾದ ಅಂತ್ಯವಾಗಬೇಕು. ಬಂಗಾರದ ಜೀವನವನ್ನು ವಿದ್ಯಾರ್ಥಿಗಳು ಹಾಳು ಮಾಡಿಕೊಳ್ಳಬಾರದು ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಸ್ವಾಮಿಗಳು ಹೇಳಿದರು.

ಬಬಲೇಶ್ವರದಲ್ಲಿ ಹಿಜಾಬ್‌ ಹಾಗೂ ಕೇಸರಿ ವಿವಾದದ ಬಗ್ಗೆ ಬುಧವಾರ ಪ್ರತಿಕ್ರಿಯೆ ನೀಡಿದ ಅವರು, ಹಿಜಾಬ್‌ ಹಾಗೂ ಕೇಸರಿ ಶಾಲು ಶಾಶ್ವತವಲ್ಲ. ವಿದ್ಯಾರ್ಥಿಗಳು ಮಾಡುತ್ತಿರುವುದು ತಪ್ಪು. ಎಲ್ಲವನ್ನು ಇಲ್ಲಿಗೆ ಬಿಟ್ಟು ವಿದ್ಯಾರ್ಜನೆ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು.
 

Latest Videos
Follow Us:
Download App:
  • android
  • ios