ಬೆಂಗಳೂರು(ಜು.03): ಡಿ.ಕೆ.ಶಿವಕುಮಾರ್‌ ಪದಗ್ರಹಣ ಕಾರ್ಯಕ್ರಮದಲ್ಲಿ ಕೊರೋನಾ ಸೋಂಕು ಹರಡದಂತೆ ಭಾರಿ ಮುನ್ನೆಚ್ಚರಿಕೆ ವಹಿಸಲಾಗಿತ್ತು.ಈ ನಿಟ್ಟಿನಲ್ಲಿವೈರಾಣುಗಳನ್ನು ಪತ್ತೆಹಚ್ಚಿ ನಾಶಪಡಿಸುವ ‘ಯುವಿಸಿ ತಂತ್ರಜ್ಞಾನ’ ಬಳಸಿಕೊಂಡು ಇಡೀ ಸಭಾಂಗಣವನ್ನು ಸೋಂಕು ಮುಕ್ತಗೊಳಿಸಲಾಗಿತ್ತು.

ಕಾರ್ಯಕ್ರಮ ನೇರ ಪ್ರಸಾರಕ್ಕೆ ಡಿಜಿಟಲ್‌ ತಂತ್ರಜ್ಞಾನ ಬಳಸಿಕೊಂಡಿದ್ದ ಕೆಪಿಸಿಸಿ, ಸಭಾಂಗಣದಲ್ಲಿ ಸೋಂಕು ತಡೆಗೂ ತಂತ್ರಜ್ಞಾನದ ಮೊರೆ ಹೋಗಿದ್ದು ವಿಶೇಷವಾಗಿತ್ತು. ಪದಗ್ರಹಣ ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಭಾಂಗಣದೊಳಗೆ ಪ್ರತಿ ಆಸನವನ್ನು ಯುವಿಸಿ ತಂತ್ರಜ್ಞಾನದ ಮೂಲಕ ಸ್ಯಾನಿಟೈಜ್‌ ಮಾಡಲಾಯಿತು. ಅದರಲ್ಲೂ ಪಕ್ಷದ ಹಿರಿಯ ನಾಯಕರಿಗೆ ಮೀಸಲಾಗಿದ್ದ ಆಸನಗಳ ಬಳಿ ಸ್ಯಾನಿಟೈಜ್‌ಗೆ ಹೆಚ್ಚು ಆದ್ಯತೆ ನೀಡಲಾಗಿತ್ತು.

ಥರ್ಮಲ್‌ ಸ್ಕ್ರೀನಿಂಗ್‌:

ಕಾರ್ಯಕ್ರಮದಲ್ಲಿ ಸೀಮಿತ ಸಂಖ್ಯೆಯ ಪಕ್ಷದ ನಾಯಕರು ಹಾಗೂ ಮುಖಂಡರು ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಸಭಾಂಗಣದ ಪ್ರವೇಶ ದ್ವಾರದಲ್ಲೇ ಪ್ರತಿಯೊಬ್ಬರನ್ನು ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿ ಒಳಗೆ ಪ್ರವೇಶ ಕಲ್ಪಿಸಲಾಗಿತ್ತು. ಸಭಾಂಗಣದ ಒಳಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಆಸನ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರು ಮಾಸ್ಕ್‌ ಧರಿಸುವಂತೆ ಸೂಚಿಸಲಾಗಿತ್ತು.

ವೇದಿಕೆ ಎದುರೇ ಕುಳಿತ ಗಣ್ಯರು:

ಸಾಮಾನ್ಯವಾಗಿ ಕಾರ್ಯಕ್ರಮಗಳಲ್ಲಿ ಗಣ್ಯರನ್ನು ವೇದಿಕೆಯಲ್ಲಿ ಕೂರಿಸಿ ಭಾಷಣ ಮಾಡಿಸುವುದು ವಾಡಿಕೆ. ಆದರೆ, ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಗಣ್ಯರಿಗೆ ವೇದಿಕೆ ಎದುರೇ ಆಸನ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ತಮ್ಮ ಸರದಿ ಬಂದಾಗ ವೇದಿಕೆ ಏರಿ ಭಾಷಣ ಮಾಡಿ ನಂತರ ಸ್ವಸ್ಥಾನಕ್ಕೆ ಮರಳಿದರು.