ಟಾಟಾ ಏಸ್ ವಾಹನ ಪಲ್ಟಿ, ಒಬ್ಬನ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬಡ್ಡಿಗೇರಿಯಲ್ಲಿ ಟಾಟಾ ಏಸ್ ವಾಹನ ಪಲ್ಟಿಯಾಗಿದ್ದು, ಒಬ್ಬನ ಸಾವಾಗಿದೆ. ಘಟನೆಯಲ್ಲಿ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮುಂಡಗೋಡ (ಏ.21): ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ (Tata Ace) ವಾಹನ ಪಲ್ಟಿಯಾದ (Flip) ಕಾರಣ ವಾಹನದಲ್ಲಿದ್ದ ಓರ್ವ ಯುವಕ ಸಾವಿಗೀಡಾಗಿ ಐವರು ಗಂಭೀರ ಗಾಯಗೊಂಡ ಘಟನೆ ಉತ್ತರಕನ್ನಡ (Uttara Kannda)ಜಿಲ್ಲೆಯ ಮುಂಡಗೋಡದ (Mundgod) ಬಡ್ಡಿಗೇರಿ (Baddigeri) ಬಳಿ ನಡೆದಿದೆ.
ಕಬ್ಬಿನ ಗದ್ದೆಯ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಸುಮಾರು 10ಕ್ಕೂ ಹೆಚ್ಚು ಕಾರ್ಮಿಕರು ಗೌಳಿವಾಡಾದಿಂದ ಕುಸೂರು ಗ್ರಾಮದ ಕಡೆ ತೆರಳುತ್ತಿದ್ದರು. ಈ ವೇಳೆ ಸ್ಟೇರಿಂಗ್ ತುಂಡಾದ ಕಾರಣ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ವಾಹನ ಪಲ್ಟಿಯಾಗಿದೆ.
ಘಟನೆಯಲ್ಲಿ 20 ವರ್ಷದ ಮಳ್ಳು ಗಾವಡೆ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಮೂರು ಆ್ಯಂಬುಲೆನ್ಸ್‌ನಲ್ಲಿ ಹುಬ್ಬಳ್ಳಿಯ ಕಿಮ್ಸ್‌ಗೆ ರವಾನಿಸಲಾಗಿದ್ದು, ಉಳಿದವರಿಗೆ ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಕೋಲಾರ ಜಿಲ್ಲೆ ಮುಳಬಾಗಿಲಿನ್ನೂ ಇಂಥದ್ದೊಂಡು ಘಟನೆ ನಡೆದಿತ್ತು. ನಿಯಂತ್ರಣ ತಪ್ಪಿ ಶಾಲಾ ವಾಹನ ಪಲ್ಟಿಯಾಗಿದ್ದರಿಂದ 15ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದರು. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಸೀಗೇನಹಳ್ಳಿ ಗೇಟ್ ಬಳಿ ಘಟನೆ ನಡೆದಿತ್ತು. ಮುಳಬಾಗಿಲು ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯ ವಾಹನ ಇದಾಗಿತ್ತು. ನಂಗಲಿಯಿಂದ ಶಾಲೆಗೆ ಮಕ್ಕಳನ್ನು ಕರೆದೊಯ್ತಿದ್ದ ವೇಳೆ ಟಾಟಾ ಸುಮೊ ಪಲ್ಟಿಯಾಗಿದ್ದರಿಂದ ಸಂಭವಿಸಿದ ಅಪಘಾತದಲ್ಲಿ ಗಾಯಾಳು ಮಕ್ಕಳನ್ನು ಕೋಲಾರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.