ತನ್ನ ತಾಯಿಯನ್ನು ಕೊಂದವರ ಮೇಲೆ ನಾಯಿಯ ಸೇಡು!
ಸೈರನ್ ಹಾಕಿ ವಿಐಪಿ ಲೇನ್ ನಿಂದ ಬರುವ ಎಲ್ಲಾ ಆ್ಯಂಬ್ಯುಲೆನ್ಸ್ ವಾಹನಗಳು ಮಾತ್ರವಲ್ಲದೇ, ಪೋಲಿಸ್ ವಾಹನಗಳನ್ನೂ ಅಡ್ಡಗಟ್ಟುವ ನಾಯಿ, ಅವುಗಳ ಮೇಲೆ ಎರಗಲು ಪ್ರಾರಂಭಿಸುತ್ತದೆ. ಸೈರನ್ ಶಬ್ದ ಕಿವಿಗೆ ಬೀಳುತ್ತಿದ್ದಂತೆ ಎಲ್ಲೇ ಇದ್ರು ಓಡೋಡಿ ಬರುವ ನಾಯಿ, ವಿಐಪಿ ಲೇನ್ ನಿಂದ ಸೈರನ್ ಹಾಕಿ ಬರುವ ವಾಹನಗಳ ಮೇಲೆ ಮಾತ್ರ ದಾಳಿ ಮಾಡುತ್ತದೆ.
ವರದಿ: ಭರತ್ ರಾಜ್ ಕಲ್ಲಡ್ಕ, ಉತ್ತರಕನ್ನಡ
ಅಂಕೋಲಾ (ಮೇ. 11): ಹಾವಿನ ದ್ವೇಷ ಹನ್ನೆರಡು ವರ್ಷ ಅನ್ನೋ ಗಾದೆಯಿದೆ. ಆದರೆ, ಉತ್ತರಕನ್ನಡ (Uttara Kannada) ಜಿಲ್ಲೆಯ ಅಂಕೋಲಾದಲ್ಲಿರುವ (Ankola) ನಾಯಿಯೊಂದರ ದ್ವೇಷ (Dogs Revenge) ಮಾತ್ರ ಸಾಯೋವರೆಗೆ. ಹೌದು, ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ (HattiKeri TollGate) ಬಳಿ ಬೀಡು ಬಿಟ್ಟಿರುವ ನಾಯಿ.
ದಿನವೂ ಬೆಳಗ್ಗೆಯಿಂದ ರಾತ್ರಿಯವರೆಗೆ ತನ್ನ ತಾಯಿಯನ್ನು ಕೊಂದವರ ಮೇಲೆ ಸೇಡು ತೀರಿಸಲು ಹವಣಿಸುತ್ತಿದೆ. ಅಲ್ಲದೇ, ಅದಕ್ಕೆ ಕಾರಣವಾದ ಸಂಬಂಧಿಸಿದ ವಾಹನಗಳನ್ನು ಕಂಡ ಕೂಡಲೇ ಬೆನ್ನಟ್ಟಿಕೊಂಡು ಹೋಗುತ್ತದೆ. ಕಳೆದ ಒಂದು ವರ್ಷದ ಹಿಂದೆ ಈ ನಾಯಿಯ ತಾಯಿ ತನ್ನ ಮರಿಗಳಿಗೆ ಹಾಲುಣಿಸುವ ಸಂದರ್ಭದಲ್ಲಿ ವಿಐಪಿ ಲೇನ್ ನಿಂದ ಬಂದ ಅಂಬ್ಯುಲೆನ್ಸ್ ಗೆ (ambulance) ಸಿಕ್ಕಿ ಸಾವಿಗೀಡಾಗಿತ್ತು. ಆದರೆ, ಆ ಅಪಘಾತದಲ್ಲಿ ಈ ಗಂಡು ನಾಯಿ ಬದುಕುಳಿದಿತ್ತು. ಈಗ ತಾಯಿಯ ಸಾವಿನ ಸೇಡು ತೀರಿಸಿಕೊಳ್ಳಲು ಈ ಮರಿ ಶ್ವಾನ ಕಾಯುತ್ತಿದೆ.
ಸೈರನ್ ಹಾಕಿ ವಿಐಪಿ ಲೇನ್ ನಿಂದ ಬರುವ ಎಲ್ಲಾ ಆ್ಯಂಬ್ಯುಲೆನ್ಸ್ ವಾಹನಗಳು ಮಾತ್ರವಲ್ಲದೇ, ಪೋಲಿಸ್ ವಾಹನಗಳನ್ನೂ ಅಡ್ಡಗಟ್ಟುವ ನಾಯಿ, ಅವುಗಳ ಮೇಲೆ ಎರಗಲು ಪ್ರಾರಂಭಿಸುತ್ತದೆ. ಸೈರನ್ ಶಬ್ದ ಕಿವಿಗೆ ಬೀಳುತ್ತಿದ್ದಂತೆ ಎಲ್ಲೇ ಇದ್ರು ಓಡೋಡಿ ಬರುವ ನಾಯಿ, ವಿಐಪಿ ಲೇನ್ ನಿಂದ ಸೈರನ್ ಹಾಕಿ ಬರುವ ವಾಹನಗಳ ಮೇಲೆ ಮಾತ್ರ ದಾಳಿ ಮಾಡುತ್ತದೆ. ತಾಯಿಯ ಸಾವನ್ನು ಕಣ್ಣಾರೆ ಕಂಡಿದ್ದ ಮರಿ ನಾಯಿಯಿಂದ ಪ್ರತೀಕಾರದ ಪ್ರಯತ್ನ ಮುಂದುವರಿದಿದ್ದು, ಆ್ಯಂಬ್ಯುಲೆನ್ಸ್ ವಾಹನಗಳಿಗೆ ಅಡ್ಡಗಟ್ಟಿ ತನ್ನ ಸೇಡಿನ ಪ್ರತೀಕಾರಕ್ಕೆ ಹವಣಿಸುತ್ತಿದೆ.
ತಾಯಿ ನಾಯಿ ಸಾವು ಕಂಡ ಸಂದರ್ಭದಲ್ಲಿ ಈ ಮರಿ ನಾಯಿಗೆ ಅನ್ನ ನೀರು ನೀಡಿ ಟೋಲ್ ಸಿಬ್ಬಂದಿ ಪೋಷಿಸಿದ್ದರಿಂದ ಟೋಲ್ ಸಿಬ್ಬಂದಿಯ ಜತೆ ಈ ನಾಯಿ ಅನೋನ್ಯವಾಗಿದೆ. ಆದರೆ, ಕಳೆದ ಏಳೆಂಟು ತಿಂಗಳಿಂದ ನಾಯಿ ದೊಡ್ಡದಾಗುತ್ತ ಬರುತ್ತಿದ್ದಂತೇ ನಾಯಿಯಲ್ಲಿ ಸೇಡು ಕಾಣಿಸಿಕೊಂಡಿದ್ದು, ಈಗಲೂ ಆ್ಯಂಬುಲೆನ್ಸ್ ಹಾಗೂ ಪೊಲೀಸ್ ವಾಹನಗಳನ್ನು ಕಂಡ ಕೂಡಲೇ ಓಡಿಸಿಕೊಂಡು ಹೋಗುತ್ತಾ ತನ್ನ ಪ್ರತೀಕಾರ ತೀರಿಸಲು ಕಾಯುತ್ತಿದೆ.